Home ಜಿಲ್ಲೆ ಕೊಟಗ್ಯಾಳ: ಬಸವ ಜ್ಯೋತಿ ಯಾತ್ರೆಗೆ ಭವ್ಯ ಸ್ವಾಗತ

ಕೊಟಗ್ಯಾಳ: ಬಸವ ಜ್ಯೋತಿ ಯಾತ್ರೆಗೆ ಭವ್ಯ ಸ್ವಾಗತ

ಬೀದರ್:ಎ.೧: ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷರೂ ಆದ ಭಾಲ್ಕಿ ಹಿರೇಮಠ ಸಂಸ್ಥಾನದ ಹಿರಿಯ ಸ್ವಾಮೀಜಿ ಡಾ. ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ಪ್ರಯುಕ್ತ ಭಾಲ್ಕಿ ತಾಲ್ಲೂಕಿನ ಕೊಟಗ್ಯಾಳ್ ಗ್ರಾಮಕ್ಕೆ ಸೋಮವಾರ ಸಂಜೆ ಆಗಮಿಸಿದ ಬಸವ ಜ್ಯೋತಿ ಯಾತ್ರೆಗೆ ಭವ್ಯ ಸ್ವಾಗತ ನೀಡಲಾಯಿತು.
ಗ್ರಾಮಸ್ಥರು ಗ್ರಾಮದ ಮುಖ್ಯರಸ್ತೆಯಲ್ಲಿ ಯಾತ್ರೆಯನ್ನು ಹೃದಯಸ್ಪರ್ಶಿಯಾಗಿ ಸ್ವಾಗತಿಸಿ, ಬರಮಾಡಿಕೊಂಡರು. ಬಳಿಕ ಮುಖ್ಯ ರಸ್ತೆಯಲ್ಲಿನ ಬಸವೇಶ್ವರ ವೃತ್ತದಿಂದ ಹನುಮಾನ ಮಂದಿರ ವರೆಗೆ ಯಾತ್ರೆಯ ಅದ್ಧೂರಿ ಮೆರವಣಿಗೆ ನಡೆಯಿತು.
ಗ್ರಾಮಸ್ಥರು ವಿಶ್ವಗುರು ಬಸವಣ್ಣನವರಿಗೆ ಜಯವಾಗಲಿ, ಡಾ. ಬಸವಲಿಂಗ ಪಟ್ಟದ್ದೇವರಿಗೆ ಜಯವಾಗಲಿ ಎಂಬ ಘೋಷಣೆಗಳನ್ನು ಮೊಳಗಿಸಿದರು.
ಆರತಿ ಹೊತ್ತ ಮಹಿಳೆಯರು, ಬಾಜಾ ಭಜಂತ್ರಿ ಮೆರವಣಿಗೆಗೆ ವಿಶೇಷ ಕಳೆ ನೀಡಿದವು.
ಡಾ. ಪಟ್ಟದ್ದೇವರ ಅಮೃತ ಮಹೋತ್ಸವ ನಿಮಿತ್ತ ಬಸವ ಜ್ಯೋತಿ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ೭೩ ಗ್ರಾಮಗಳಲ್ಲಿ ಯಾತ್ರೆ ಸಂಚರಿಸಿದ್ದು, ಕೊಟಗ್ಯಾಳ ೭೪ ಗ್ರಾಮವಾಗಿದೆ. ಪಟ್ಟದ್ದೇವರ ಧಾರ್ಮಿಕ ಕಾರ್ಯ ಅಮೋಘವಾಗಿದೆ ಎಂದು ಭಾರತೀಯ ಬಸವ ಬಳಗದ ಜಿಲ್ಲಾ ಅಧ್ಯಕ್ಷ ಸಂಜುಕುಮಾರ ಜುಮ್ಮಾ ಹೇಳಿದರು. ರಾಷ್ಟ್ರೀಯ ಬಸವ ಬಳಗದ ಔರಾದ್ ತಾಲ್ಲೂಕು ಅಧ್ಯಕ್ಷ ಶಿವಶರಣಪ್ಪ ವಲ್ಲೇಪುರೆ ಡಾ. ಬಸವಲಿಂಗ ಪಟ್ಟದ್ದೇವರು ಮಾತೃ ಹೃದಯಿ, ಕರುಣಾಮಯ ಅಲ್ಲದೇ ಈ ಭಾಗದ ದೊಡ್ಡ ಶಕ್ತಿ ಪೂಜ್ಯರು ಎಂದು ಹೇಳಿದರು.ಡಾ. ಪಟ್ಟದ್ದೇವರ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು. ಪ್ರಮುಖರಾದ ಶಿವಕಾಂತ ಸ್ವಾಮಿ, ವೈಜಿನಾಥಪ್ಪ ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವೇಂದ್ರ ಕರಂಜೆ, ಗ್ರಾಮ ಪಂಚಾಯಿತಿ ಸದಸ್ಯ ಮಲ್ಲಿಕಾರ್ಜುನ ಕರಂಜೆ, ಅನಿಲಕುಮಾರ ಪೊಲೀಸ್ ಪಾಟೀಲ, ಮಲ್ಲಿಕಾರ್ಜುನ ಬಿರಾದಾರ, ಅಣ್ಣನ ಭಜನೆ ಬಳಗ, ಅಕ್ಕನ ಭಜನೆ ಬಳಗದ ಸದಸ್ಯರು, ಸಾರ್ವಜನಿಕರು ಪಾಲ್ಗೊಂಡಿದ್ದರು.