ಚನ್ನಮ್ಮನ ಕಿತ್ತೂರು-24 ಕಿತ್ತೂರು ಉತ್ಸವ ಇತಿಹಾಸ ಸಾರುವ ಉತ್ಸವವಾಗಬೇಕು ಕೇವಲ ಸಂಭ್ರಮವಾಗಬಾರದು. ಇದರ ಜೊತೆಯಲ್ಲಿ ಕ್ಷೇತ್ರ ಅಭಿವೃದ್ಧಿಯಾಗಬೇಕು. ಅದನ್ನು ಸಾಧಿಸುವುದೇ ನಮ್ಮ ಗುರಿಯಾಗಬೇಕೆಂದು ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಪಟ್ಟಣ ಕೋಟೆ ಆವರಣದಲ್ಲಿ 201ನೇ ಕಿತ್ತೂರು ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು ಈ ಉತ್ಸವ ಕಿತ್ತೂರಿಗೆ ಸೀಮಿತವಾಗದೇ ರಾಜ್ಯ ವ್ಯಾಪಿಯಾಗಿ ಬೆಳೆಯಬೇಕು. ಅದು ಭಾರತದ ಸ್ವಾಭಿಮಾನದ ಪ್ರತೀಕ. ಕಿತ್ತೂರು ವಿಜಯ ಶತಮಾನೋತ್ಸವದ ವೇಳೆ ಕಿತ್ತೂರಿನ ಶೌರ್ಯದ ಕತೆ ಎಲ್ಲೆಡೆ ಪಸರಿಸಬೇಕು. ಮತ್ತು ಈ ಶೌರ್ಯದ ಕಥೆ ರಾಷ್ಟ್ರ ರಾಜಧಾನಿಗೂ ತಲುಪುವಂತೆ ಮಾಡುವುದು ನಮ್ಮ-ನಿಮ್ಮೇಲ್ಲರ ಜವಾಬ್ದಾರಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಬಾಬಾಸಾಹೇಬ ಪಾಟೀಲ ಈ ಉತ್ಸವಕ್ಕೆ ನಮ್ಮ ಸರಕಾರ ರೂ. 5 ಕೋಟಿ ಅನುದಾನ ನೀಡಿದೆ ಮತ್ತು ಕಿತ್ತೂರುಕೋಟೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಕೆಲಸ ಪ್ರಗತಿಯಲ್ಲಿದೆ. ಜಿಲ್ಲಾ ಉಸ್ತುವಾರಿ ಸಚಿವರು ಸಹ ಕಿತ್ತೂರಿನ ಮೇಲೆ ದೊಡ್ಡ ಮಟ್ಟದಲ್ಲಿ ಕಾಳಜಿ ವಹಿಸಿ ಅವರ ಇಲಾಖೆಯಿಂದ ಸಾಕಷ್ಟು ಅನುದಾನ ನೀಡಿ ಅಭಿವೃದ್ದಿಗೆ ಕೈಜೋಡಿಸಿದ್ದಾರೆಂದರು.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ ಕೇವಲ ಉತ್ಸವವಲ್ಲ ಇದು ವಿಜಯೋತ್ಸವ ಉತ್ಸವ ಎಂದರು. ಹನಮಂತ ನಿರಾಣಿ, ಚನ್ನರಾಜ ಹಟ್ಟಿಹೊಳಿ ಇನ್ನಿತರರು ಮಾತನಾಡಿದರು.
ಸಾನಿಧ್ಯ ಸಂಸ್ಥಾನ ಕಲ್ಮಠ ಶ್ರೀ ಮಡಿವಾಳ ರಾಜಯೋಗಿಂದ್ರ ಸ್ವಾಮಿಜೀ ವಹಿಸಿದ್ದರು. ಕೊಡಲ ಸಂಗಮದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮಿಜೀ ಮತ್ತು ಬೈಲೂರು ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಸ್ವಾಮಿಜೀ ಮಾತನಾಡಿದರು. ಶ್ರೀ ಬಸವಾನಂದ ಸ್ವಾಮಿಜೀ, ಉಪ್ಪಾರ ಅಭಿವೃದ್ಧಿ ನಿಗಮದ ಭರಮಣ್ಣ ಉಪ್ಪಾರ, ಎನ್‍ಡಬ್ಲೂಕೆಎಸ್‍ಆರ್‍ಟಿಸಿ ಉಪಾಧ್ಯಕ್ಷ ಸುನೀಲ್ ಹನಮನ್ನವರ, ಪಪಂ ಅಧ್ಯಕ್ಷ ಜೈಸಿದ್ರಾಮ ಮಾರಿಹಾಳ, ಡಿಸಿ ಮೊಹಮ್ಮದ ರೋಷನ್, ಎಸ್ಪಿ ಡಾ. ಭೀಮಾಶಂಕರ ಗುಳೇದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ತಹಶೀಲ್ದಾರುಗಳಾದ, ಕಲ್ಲನಗೌಡ ಪಾಟೀಲ, ಹನಮಂತ ಶಿರಹಟ್ಟಿ, ಸವದತ್ತಿ ತಹಶೀಲ್ದಾರರು ನಾಗರಾಳ ಸೇರಿದಂತೆ ಜಿಲ್ಲಾ ತಾಲೂಕ ಮಟ್ಟದ ಅಧಿಕಾರಿಗಳು, ಗಣ್ಯರಿದ್ದರು. ಉಪವಿಭಾಗಾಧಿಕಾರಿ ಪ್ರವೀಣ ಜೈನ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.























