ಪೋಲೆನಹಳ್ಳಿ ದಲಿತ ವ್ಯಕ್ತಿ ಹತ್ಯೆ: ಸೂಕ್ತ ಪರಿಹಾರಕ್ಕೆ ಒತ್ತಾಯ

ಮಧುಗಿರಿ, ಸೆ. ೧೮- ಪೋಲೆನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಹತ್ಯೆಗೀಡಾದ ದಲಿತ ಆನಂದನ ಕುಟುಂಬಕ್ಕೆ ತಕ್ಷಣ ಸರ್ಕಾರ ಐದು ಎಕರೆ ಜಮೀನು ಮಂಜೂರು ಮಾಡಬೇಕು ಮತ್ತು ೨೫ ಲಕ್ಷ ರೂ. ಹಣ ಪರಿಹಾರ ನೀಡಬೇಕು ಎಂದು ರಾಜ್ಯ ಮೀಸಲಾತಿ ಹೋರಾಟದ ಒಕ್ಕೂಟಗಳ ಸಮಿತಿಯ ರಾಜ್ಯ ಮುಖಂಡ ಬಸವರಾಜ ಕೌತಾಳ್ ಸರ್ಕಾರವನ್ನು ಆಗ್ರಹಿಸಿದರು.


ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಪೋಲೆನಹಳ್ಳಿ ಗ್ರಾಮದ ಮೃತ ಕುಟುಂಬಸ್ಥರ ನಿವಾಸಕ್ಕೆ ರಾಜ್ಯ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ದಲಿತಪರ, ಪ್ರಗತಿಪರ ಹೋರಾಟಗಾರರು ಭೇಟಿ ನೀಡಿ ಸಾಂತ್ವಾನ ಹೇಳಿ ಘಟನೆಯ ನೈಜತೆಯ ಬಗ್ಗೆ ಕುಟುಂಬದವರಿಂದ ಮಾಹಿತಿ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಲೆಯಾಗಿರುವ ಆನಂದನ ಪತ್ನಿಗೆ ಸರ್ಕಾರ ಉದ್ಯೋಗ ನೀಡಬೇಕು ಮತ್ತು ಆನಂದನ ಮಗುವಿಗೆ ಉನ್ನತ ಶಿಕ್ಷಣದವರೆಗೂ ಉಚಿತ ಶಿಕ್ಷಣ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.


ಅಲ್ಲದೆ ಆರೋಪಿ ನಾಗೇಶನ ತಂದೆ-ತಾಯಿಯನ್ನು ಆಪಾದನೆ ಪಟ್ಟಿಯಲ್ಲಿ ಸೇರಿಸಿ ಬಂಧಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ ಪರಮೇಶ್ವರ್, ಶಾಸಕ ಕೆ.ಎನ್. ರಾಜಣ್ಣ ಇದನ್ನು ಗಂಭೀರವಾಗಿ ಪರಿಗಣಿಸಿ ಕಾನೂನಾತ್ಮಕವಾಗಿ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.


ಪ್ರಗತಿಪರ ಚಿಂತಕ ಪ್ರೊ. ನರಸಿಂಹಪ್ಪ ಕಾಳೆನಳ್ಳಿ ಮಾತನಾಡಿ, ಸೌಹಾರ್ದಯುತವಾಗಿ ಬಾಳಿ ಬದುಕಬೇಕಾದ ಎಸ್ಸಿ-ಎಸ್ಟಿ ಸಮುದಾಯಗಳು ಈ ರೀತಿ ಸಣ್ಣ ವಿಷಯಕ್ಕೆ ಜಗಳವಾಡಿ ಕೊಲೆಯಲ್ಲಿ ಅಂತ್ಯವಾಗಿರುವುದು ನೋವಿನ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿ, ಜಿಲ್ಲಾ ಉಸ್ತುವಾರಿ ಸಚಿವರು ದಲಿತರಾಗಿದ್ದು ರಾಜಕೀಯ ಜನ್ಮ ನೀಡಿದ ಮಧುಗಿರಿ ತಾಲ್ಲೂಕಿನಲ್ಲಿ ಆಗಿರುವ ಘಟನೆಗಳ ಬಗ್ಗೆ ಗಂಭೀರವಾಗಿ ಪರಿಗಣಿಸಿ ಶೋಷಿತರ ಪರ ನಿಲ್ಲಬೇಕಾಗಿದ್ದು ಇದುವರೆಗೂ ಸ್ಥಳಕ್ಕೆ ಭೇಟಿ ನೀಡದೆ ಇರುವುದು ದಲಿತರ ಮೇಲೆ ಇವರಿಗಿರುವ ಕಾಳಜಿ ಎಂತಹುದು ಎಂದು ಗೊತ್ತಾಗುತ್ತದೆ. ಅದೇ ರೀತಿ ಕೇಂದ್ರ ಸಚಿವ ವಿ. ಸೋಮಣ್ಣ ಮತ್ತು ಶಾಸಕ ಕೆ. ಎನ್. ರಾಜಣ್ಣ ಸ್ಥಳಕ್ಕೆ ಆಗಮಿಸಿ ನೊಂದ ಕುಟುಂಬಕ್ಕೆ ನೆರವು ಮತ್ತು ಅಗತ್ಯತೆಗಳನ್ನು ಒದಗಿಸಲು ಮುಂದಾಗಬೇಕು ಎಂದು ತಿಳಿಸಿದರು.


ಕೈಗಾರಿಕೋದ್ಯಮಿ ಹಾಗೂ ದಲಿತ ಮುಖಂಡ ಡಿ.ಟಿ. ವೆಂಕಟೇಶ್ ಮಾತನಾಡಿ, ಕೊಲೆಯಾದ ಆನಂದ ಕುಟುಂಬಕ್ಕೆ ಸಮಾಜ ಕಲ್ಯಾಣ ಇಲಾಖೆ ಮತ್ತು ಗ್ರಾಮ ಪಂಚಾಯ್ತಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು ಮತ್ತು ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು ಧೈರ್ಯದಿಂದ ಬದುಕುವ ವಾತಾವರಣ ನಿರ್ಮಾಣ ಮಾಡಬೇಕು ಮತ್ತು ಕುಟುಂಬಕ್ಕೆ ಅಗತ್ಯ ರಕ್ಷಣೆ ನೀಡಬೇಕು ಎಂದರು.


ಹಿರಿಯ ಚಿಂತಕ ಪ್ರೊ. ದೊರೆರಾಜು ಮಾತನಾಡಿ, ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು. ಗ್ರಾಮದಲ್ಲಿ ಜನತೆ ಧೈರ್ಯದಿಂದ ಬದುಕುವ ವಾತಾವರಣ ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ರೇಷ್ಮೆ ಇಲಾಖೆ ನಿವೃತ್ತ ಉಪ ನಿರ್ದೇಶಕ ಬಾಲಕೃಷ್ಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ರವಿಕುಮಾರ್ ನೀಹ, ದಸಸಂ ಜಿಲ್ಲಾ ಸಂಚಾಲಕ ದೊಡ್ಡೇರಿ ಕಣಿಮಯ್ಯ ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹರಾಜು, ಜಾಗೃತ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಅನಿಲ್ ಕುಮಾರ್ ಚಿ.ದಾಳ ವಟ, ತೊಂಡೋಟಿ
ರಾಮಾಂಜಿನಪ್ಪ, ವಕೀಲ ನರಸಿಂಹಮೂರ್ತಿ, ಜೀವಿಕ ಮಂಜು, ಚಿಕ್ಕಮ್ಮ, ನಿವೃತ್ತ ಪ್ರಾಂಶುಪಾಲ ಮುನೀಂದ್ರ ಕುಮಾರ್ ಉಪನ್ಯಾಸಕ ರಾಮಚಂದ್ರಪ್ಪ ಉಪಸ್ಥಿತರಿದ್ದರು.