
ಭೋಪಾಲ್, ಅ.೮- ಮಧ್ಯಪ್ರದೇಶದಲ್ಲಿ ಕಲಬೆರಕೆ ಕೆಮ್ಮಿನ ಸಿರಪ್ ಕೋಲ್ಡ್ರಿಫ್ ಸೇವಿಸಿ ಅಸ್ವಸ್ಥತೆಯಿಂದ ಮೃತಪಟ್ಟ ಮಕ್ಕಳ ಸಂಖ್ಯೆ ೨೦ ಕ್ಕೆ ಏರಿಕೆಯಾಗಿದೆ. ಈ ಮೂಲಕ ಸಿರಪ್ ಸೇವಿಸಿದ್ದ ಮಕ್ಕಳ ಪೋಷಕರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದೆ.
ಸಿರಪ್ ಸೇವಿಸಿದ ಐದು ಮಕ್ಕಳು ಮೂತ್ರಪಿಂಡ ವೈಫಲ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ಸಿರಪ್ ಶಿಫಾರಸು ಮಾಡಿದ ಮಕ್ಕಳ ವೈದ್ಯರ ಬಂಧನವನ್ನು ವಿರೋಧಿಸಿ ವೈದ್ಯರು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿ ಔಷಧ ತಯಾರಕರು ಮತ್ತು ಅದರ ಬಳಕೆ ಅನುಮೋದಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಮಧ್ಯಪ್ರದೇಶದ ಉಪಮುಖ್ಯಮಂತ್ರಿ ರಾಜೇಂದ್ರ ಶುಕ್ಲಾ ಮಾಹಿತಿ ನೀಡಿದ ಕಲುಷಿತ ಕೆಮ್ಮಿನ ಸಿರಪ್ ಕುಡಿದು ಇಲ್ಲಿಯವರೆಗೆ ೨೦ ಮಕ್ಕಳು ಸಾವನ್ನಪ್ಪಿದ್ದಾರೆ ಮತ್ತು ಐದು ಮಕ್ಕಳು ಮೂತ್ರಪಿಂಡ ವೈಫಲ್ಯಕ್ಕೆ ಚಿಕಿತ್ಸೆಯಲ್ಲಿದ್ದಾರೆ ಎನ್ನುವುದನ್ನು ದೃಢಪಡಿಸಿದ್ದಾರೆ.
ಮೃತಪಟ್ಟ ೨೦ ಮಕ್ಕಳಲ್ಲಿ ೧೭ ಮಕ್ಕಳು ಛಿಂದ್ವಾರ ಜಿಲ್ಲೆಯವರು, ಇಬ್ಬರು ಬೇತುಲ್‌ನವರು ಮತ್ತು ಒಬ್ಬರು ಪಂಧುರ್ನಾಗೆ ಸೇರಿದವರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ
ಈ ನಡುವೆ ಸಿರಪ್ ಸೇವಿಸಿದ ಕೆಲವು ದೊಡ್ಡ ಮಕ್ಕಳು ಚೇತರಿಸಿಕೊಂಡಿದ್ದಾರೆ, ಕಲುಷಿತ ಸಿರಪ್ ಸೇವೆನೆಯಿಂದ ಒಟ್ಟು ೨೦ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ
.
“ಇಬ್ಬರು ಮಕ್ಕಳು ನಾಗ್ಪುರದ ಸರ್ಕಾರಿ ವೈದ್ಯಕೀಯ ಕಾಲೇಜು,, ಇಬ್ಬರು ಏಮ್ಸ್‌ನಲ್ಲಿ ಮತ್ತು ಒಬ್ಬರು ಖಾಸಗಿ ಆಸ್ಪತ್ರೆಯಲ್ಲಿದ್ದಾರೆ. ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಚಿಕಿತ್ಸೆಯ ಸಮಯದಲ್ಲಿ ಯಾವುದೇ ಸಮಸ್ಯೆಗಳನ್ನು ಅಥವಾ ಯಾವುದೇ ಆರ್ಥಿಕ ಹೊರೆ ಎದುರಿಸದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿದೆ” ಎಂದು ಅವರು ಹೇಳಿದ್ದಾರೆ.
ಜ್ವರ ಮತ್ತು ಶೀತದಿಂದ ಬಳಲುತ್ತಿದ್ದ ಮಕ್ಕಳು ’ಕೋಲ್ಡ್ರಿಫ್’ ಸಿರಪ್ ಸೇವಿಸಿದ್ದರಿಂದ ವಾಂತಿ ಮತ್ತು ಮೂತ್ರ ವಿಸರ್ಜನೆಯಲ್ಲಿ ತೊಂದರೆ ಉಂಟಾಯಿತು. ಸೆಪ್ಟೆಂಬರ್ ೨ ರಂದು ಮೊದಲ ಸಾವು ವರದಿಯಾಗಿದೆ. ಈ ಸಿರಪ್ ಅನ್ನು ತಮಿಳುನಾಡಿನ ಕಾಂಚಿಪುರಂನಲ್ಲಿರುವ ಸ್ರೆಸನ್ ಫಾರ್ಮಾಸ್ಯುಟಿಕಲ್ಸ್ ತಯಾರಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ತಿಂಗಳ ಆರಂಭದಲ್ಲಿ, ತಮಿಳುನಾಡು ಮತ್ತು ಮಧ್ಯಪ್ರದೇಶದ ಔಷಧ ನಿಯಂತ್ರಣ ಅಧಿಕಾರಿಗಳು ಸಿರಪ್‌ನಲ್ಲಿ ಶೇಕಡಾ ೪೫ ಕ್ಕಿಂತ ಹೆಚ್ಚು ಡೈಥಿಲೀನ್ ಗ್ಲೈಕಾಲ್ ಎಂಬ ರಾಸಾಯನಿಕದೊಂದಿಗೆ ಕಲಬೆರಕೆ ಮಾಡಿರುವುದನ್ನು ಪತ್ತೆ ಮಾಡಲಾಗಿತ್ತು. ಇದು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ, ಇದು ಎರಡೂ ರಾಜ್ಯಗಳು ಸಿರಪ್ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಮಧ್ಯಪ್ರದೇಶ ಪೊಲೀಸರು ಚಿಂದ್ವಾರಾದ ಪರಾಸಿಯಾದಲ್ಲಿ ಸರ್ಕಾರಿ ಮಕ್ಕಳ ತಜ್ಞ ಪ್ರವೀಣ್ ಸೋನಿ ಅವರನ್ನು ಅನೇಕ ಮಕ್ಕಳಿಗೆ ಔಷಧಿಯನ್ನು ಶಿಫಾರಸು ಮಾಡಿದ್ದಕ್ಕಾಗಿ ಬಂಧಿಸಿದ್ದಾರೆ. ಜೊತೆಗೆ ತಯಾರಕರ ವಿರುದ್ಧವೂ ದೂರು ದಾಖಲಿಸಿ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸಲಾಗಿದೆ.
ಚಿಕಿತ್ಸೆ ವೆಚ್ಚ ಸರ್ಕಾರದಿಂದ ಪಾವತಿ
ಕೆಮ್ಮಿನ ಸಿರಪ್ ಸೇವಿಸಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಹೇಳಿದ್ದಾರೆ.
ಈ ನಡುವೆ “ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ, ಚಿಂದ್ವಾರಾ ಜಿಲ್ಲಾಧಿಕಾರಿಗಳು ನಾಗ್ಪುರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳಿಗೆ ಸಹಾಯ ಮಾಡಲು ಮೂರು ತಂಡಗಳನ್ನು ರಚಿಸಿದ್ದಾರೆ” ಎಂದು ಸರ್ಕಾರದ ಹೇಳಿಕೆ ತಿಳಿಸಿದೆ.
ಅನಿರ್ದಿಷ್ಟ ಮುಷ್ಕರ
ಕೋಲ್ಡ್ರಿಫ್ ಸಿರಪ್ ಶಿಫಾರಸ್ಸು ಮಾಡಿದ್ದ ಮಕ್ಕಳ ವೈದ್ಯರ ಬಂಧನದ ಹಿನ್ನೆಲೆಯಲ್ಲಿ, ಹಲವಾರು ವೈದ್ಯರು ಪರಾಸಿಯಾದಲ್ಲಿ ಪ್ರದರ್ಶನ ನಡೆಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದ್ದಾರೆ.
ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕ ಬಂಧಿತ ಡಾ. ಸೋನಿ ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದೆ. ವೈದ್ಯರ ನಿಯೋಗವು ಚಿಂದ್ವಾರ ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಬಂಧಿತ ವೈದ್ಯರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದೆ.

































