ಬೆಂಗಳೂರು,ಆ.೧-ಟ್ಯೂಷನ್ ಮುಗಿಸಿ ಮನೆಗೆ ಬರುತ್ತಿದ್ದ ಬಾಲಕ ನಿಶ್ಚಿತ್‌ನನ್ನು ಅಪಹರಿಸಿ ೫ ಲಕ್ಷ ಹಣಕ್ಕೆ ಬೇಡಿಕೆಯಿಟ್ಟು ಬರ್ಬರವಾಗಿ ಕೊಲೆಗೈದು ಬೆಂಕಿ ಹಚ್ಚಿದ ಇಬ್ಬರು ಆರೋಪಿಗಳಿಗೆ ಹುಳಿಮಾವು ಪೊಲೀಸರು ಗುಂಡು ಹೊಡೆದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರ ಗುಂಡೇಟು ತಗುಲಿ ಗಾಯಗೊಂಡಿರುವ ಕೊಲೆಗಾರರಾದ ಗುರುಮೂರ್ತಿ ಹಾಗೂ ಗೋಪಾಲಕೃಷ್ಣ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇವರೊಂದಿಗೆ ಬಾಲಕನ ಅಪಹರಣ ಕೊಲೆ ಕೃತ್ಯದಲ್ಲಿ ಭಾಗಿಯಾಗಿರುವ ಇನ್ನಿತರ ಆರೋಪಿಗಳ ಪತ್ತೆಗೆ ಶೋಧ ನಡೆಸಲಾಗಿದೆ.
ಬಾಲಕ ನಿಶ್ಚಿತ್‌ನನ್ನು ಅಪಹರಿಸಿ ಬರ್ಬರವಾಗಿ ಕೊಲೆಗೈದು ಬೆಂಕಿ ಹಚ್ಚಿದ್ದ ಆರೋಪಿಗಳು ನಿನ್ನೆ ಮಧ್ಯರಾತ್ರಿ ಕಗ್ಗಲೀಪುರ ರಸ್ತೆಯ ಬಳಿ ಅಡಗಿರುವ ಮಾಹಿತಿಯನ್ನು ಆಧರಿಸಿ ಬಂಧಿಸಲು ಹುಳಿಮಾವು ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ.
ಪೊಲೀಸರನ್ನು ಕಂಡು ತಪ್ಪಿಸಿಕೊಳ್ಳಲು ಮಾರಕಾಸ್ತ್ರಗಳಿಂದ ಆರೋಪಿಗಳು ದಾಳಿಗೆ ಮುಂದಾದಾಗ, ಆತ್ಮರಕ್ಷಣೆಗೆ ಇನ್ಸ್‌ಪೆಕ್ಟರ್ ಕುಮಾರಸ್ವಾಮಿ ಹಾಗೂ ಪಿಎಸ್‌ಐ ಅರವಿಂದ್ ಕುಮಾರ್ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ. ಆದರೆ ಪರಾರಿಯಾಗಲು ಯತ್ನಿಸಿದಾಗ ಆರೋಪಿಗಳ ಕಾಲಿಗೆ ಗುಂಡು ಹೊಡೆದು ವಶಕ್ಕೆ ಪಡೆದಿದ್ದಾರೆ.
ಘಟನೆಯಲ್ಲಿ ಗುರುಮೂರ್ತಿಯ ಎರಡು ಕಾಲುಗಳು ಹಾಗೂ ಗೋಪಾಲಕೃಷ್ಣನ ಒಂದು ಕಾಲಿಗೆ ಗುಂಡು ತಗುಲಿದೆ, ಇಬ್ಬರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಕರಣದ ವಿವರ:
ಅರಕೆರೆಯ ಶಾಂತಿನಿಕೇತನ ಲೇಔಟ್‌ನಲ್ಲಿ ನಿಶ್ಚಿತ್ ಮತ್ತು ಆತನ ಪೋಷಕರು ವಾಸವಾಗಿದ್ದರು, ಪ್ರತಿಷ್ಠಿತ ಕಾಲೇಜ್‌ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದ ನಿಶ್ಚಿತ್ ತಂದೆಯ ಬಳಿ ಆರೋಪಿ ಗುರುಮೂರ್ತಿ ಹೆಚ್ಚುವರಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದನು.
ಆಗಾಗ ಮನೆಗೆ ಹೋಗಿ ಬರುತ್ತಿದ್ದ ಗುರುಮೂರ್ತಿ, ನಿಶ್ಚಿತ್‌ನನ್ನು ಅಪಹರಿಸಿ ಹಣಕ್ಕೆ ಬೇಡಿಕೆಯಿಡುವ ಸಂಚು ರೂಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
೫ ಲಕ್ಷಕ್ಕೆ ಬೇಡಿಕೆ:

ಕೊಲೆಯಾದ ಕ್ರೈಸ್ಟ್ ಶಾಲೆಯ ವಿದ್ಯಾರ್ಥಿ ನಿಶ್ಚಿತ್‌ನ ಆತ್ಮಕ್ಕೆ ಶಾಂತಿ ಕೋರಿ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕಿಯರು ಇಂದು ಪ್ರಾರ್ಥನೆ ಸಲ್ಲಿಸಿದರು.
ಬಾಲಕ ನಿಶ್ಚಿತ್ ನಿನ್ನೆ ಸಂಜೆ ಟ್ಯೂಷನ್ ಮುಗಿಸಿ ಸೈಕಲ್‌ನಲ್ಲಿ ಮನೆಯತ್ತ ಬರುತ್ತಿದ್ದ ನಿಶ್ಚಿತ್‌ನನ್ನು ಆರೋಪಿಗಳು ಅಪಹರಿಸಿದ್ದರು. ಟ್ಯೂಷನ್ ಮುಗಿದು ಸುಮಾರು ಗಂಟೆಗಳಾದರೂ ಮನೆಗೆ ಬಾರದ ಮಗನ ಬಗ್ಗೆ ಪೋಷಕರು ಆಂತಕದಿಂದ ಹುಡುಕಾಟ ನಡೆಸಿದ್ದರು.ನಿರಂತರ ಶೋಧದ ಬಳಿಕವೂ ಮಗನ ಸುಳಿವು ಸಿಗದಿದ್ದಾಗ ಹುಳಿಮಾವು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಅಷ್ಟೊತ್ತಿಗಾಗಲೇ ಬಾಲಕನ ತಂದೆಗೆ ಕರೆ ಮಾಡಿದ್ದ ಆರೋಪಿಗಳು ’ಮಗನನ್ನು ಜೀವಂತವಾಗಿ ನೋಡುವ ಆಸೆಯಿದ್ದರೆ, ೫ ಲಕ್ಷ ರೂ ನೀಡುವಂತೆ’ ಡಿಮ್ಯಾಂಡ್ ಮಾಡಿದ್ದರು. ಹಣ ನೀಡುವುದಾಗಿ ಪೋಷಕರೂ ಸಹ ಒಪ್ಪಿಕೊಂಡಿದ್ದರು. ಇತ್ತ ವಿಷಯ ತಿಳಿದ ಪೊಲೀಸರು ಅಪಹರಣಕಾರರ ಪೋನ್ ಕರೆ ಆಧರಿಸಿ ತನಿಖೆ ಆರಂಭಿಸಿದ್ದರು.
ಬಾಲಕನ ಶವ ಪತ್ತೆ:
ಆದರೆ ಅಷ್ಟರಲ್ಲಾಗಲೇ ಬನ್ನೇರುಘಟ್ಟ ಅರಣ್ಯ ಪ್ರದೇಶದಲ್ಲಿ ಕತ್ತು ಕೊಯ್ದು, ಸುಟ್ಟ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆಯಾಗಿದೆ. ಮುಖ ಚಹರೆ ತಿಳಿಯದಿರಲು ಪೆಟ್ರೋಲ್ ಸುರಿದ ಬೆಂಕಿ ಹಚ್ಚಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿತ್ತು.ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಡಿಸಿಪಿ ನಾರಾಯಣ್ ಹಾಗೂ ಗ್ರಾಮಾಂತರ ಜಿಲ್ಲಾ ಎಸ್‌ಪಿ ಸಿ.ಕೆ. ಬಾಬಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಗುರಮೂರ್ತಿ ಸೂತ್ರಧಾರ:
ಅಪರಾಧ ಹಿನ್ನೆಲೆ ಹೊಂದಿರುವ ಗುರುಮೂರ್ತಿ ಈ ಅಪಹರಣಕ್ಕೆ ಸಂಚು ರೂಪಿಸಿದ್ದ ಎಂದು ತಿಳಿದು ಬಂದಿದೆ. ಆದರೆ ಕೃತ್ಯಕ್ಕೆ ಕಾರಣವೇನು, ಇನ್ನೂ ಯಾರಾದರೂ ಭಾಗಿಯಾಗಿದ್ದಾರಾ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾನೂನು ಸುವ್ಯವಸ್ಥೆ ಕುಸಿತ: ಅಶೋಕ್ ಕಿಡಿ
ಬೆಂಗಳೂರಿನ ಅರೆಕೆರೆಯಲ್ಲಿ ಪಾಠ ಮುಗಿಸಿಕೊಂಡು ಬರುತ್ತಿದ್ದ ೧೩ ವರ್ಷದ ಬಾಲಕನನ್ನು ಅಪಹರಣ ಮಾಡಿ ಹಣಕ್ಕೆ ಬೇಡಿಕೆ ಇಟ್ಟು ಕೊಲೆ ಮಾಡಿರುವ ಘಟನೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸತ್ತು ಹೋಗಿದೆ ಎಂಬುದಕ್ಕೆ ಸಾಕ್ಷಿ ಎಂದು ಪ್ರತಿ ಪಕ್ಷ ನಾಯಕ ಆರ್. ಅಶೋಕ್ ಟ್ವೀಟ್ ಮಾಡಿದ್ದಾರೆ.
ಟ್ಯೂಷನ್ ಮುಗಿಸಿಕೊಂಡು ಬರುತ್ತಿದ್ದ ೧೩ ವರ್ಷದ ಬಾಲಕನನ್ನು ಕತ್ತು ಕೊಯ್ದು ಕೊಲೆ ಮಾಡಿ ಮೃತದೇಹವನ್ನು ಪೆಟ್ರೋಲ್ ಹಾಕಿ ಸುಟ್ಟಿರುವ ದಾರುಣ ಘಟನೆ ಎಂತಹವರನ್ನು ಬೆಚ್ಚಿ ಬೀಳಿಸುತ್ತದೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರೇ ನಿಮ್ಮ ಇಲಾಖೆ ಎಚ್ಚೆತ್ತುಕೊಳ್ಳಲು ಇನ್ನು ಎಷ್ಟು ಜನರ ಬಲಿಯಾಗಬೇಕು. ಇನ್ನೂ ಎಂತೆಂತಹ ದುರ್ಘಟನೆಗಳು ನಡೆಯಬೇಕು ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಪ್ರಿಯಾಂಕ ವಿರುದ್ಧವೂ ಟೀಕೆ: ಮೈಕು ಸಿಕ್ಕರೆ ಸಾಕು ರಾಷ್ಟ್ರೀಯ ಅಂತಾರಾಷ್ಟ್ರೀಯ ಸೇರಿದಂತೆ ಪ್ರಪಂಚದ ಎಲ್ಲ ಉಸಾಬರಿಗಳ ಬಗ್ಗೆ ಮೂಗು ತೂರಿಸಿ ಉಪದೇಶ ಮಾಡುವ ಸ್ವಯಂಘೋಷಿತ ಮಹಾನ್ ಮೇಧಾವಿ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕಖರ್ಗೆ ಅವರಿಗೆ ತಮ್ಮ ತವರು ಜಿಲ್ಲೆಯಲ್ಲಿ ನಡೆಯುತ್ತಿರುವ ರೈತರ ಆತ್ಮಹತ್ಯೆಗಳು ಕಾಣುತ್ತಿಲ್ಲವೇ ಎಂದು ಮತ್ತೊಂದು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.
ಸಚಿವ ಪ್ರಿಯಾಂಕಖರ್ಗೆಯವರೇ ಪ್ರಪಂಚದ ಉಸಾಬರಿ ಬಿಟ್ಟು ನಿಮ್ಮ ಇಲಾಖೆ, ನಿಮ್ಮ ಜಿಲ್ಲೆ, ನಿಮ್ಮ ಊರಿನ ಸಮಸ್ಯೆಗಳ ಬಗ್ಗೆ ಗಮನ ಕೊಡಿ. ಆತ್ಮಹತ್ಯೆಗೆ ಶರಣಾಗುತ್ತಿರುವ ರೈತರ ಕಷ್ಟ ಕೇಳಿ ಅವರಿಗೆ ಸ್ಪಂದಿಸಿ ಎಂದು ಅಶೋಕ್ ಒತ್ತಾಯಿಸಿದ್ದಾರೆ.

































