ಕೆಎಚ್‌ಎಂ, ಮಹದೇವಪ್ಪ, ಪರಂಗೆ ಕೊಕ್

ಚಾಮರಾಜನಗರ, ಡಿ. ೨- ಆಡಳಿತರೂಢ ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿ ಮಂಡಲ ಪುನರ್‌ರಚನೆಯಾದರೆ, ಸಚಿವರಾದ ಕೆ.ಹೆಚ್.ಮುನಿಯಪ್ಪ, ಎಚ್.ಸಿ. ಮಹದೇವಪ್ಪ ಹಾಗೂ ಡಾ.ಜಿ.ಪರಮೇಶ್ವರ್ ಸೇರಿದಂತೆ ಎಲ್ಲರಿಗೂ ಕೊಕ್ ನೀಡಲಿದೆ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.


ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ೨ನೇ ಬಾರಿಗೆ ಉಪಹಾರ ಸಭೆ ನಡೆಸಿದ ಬಗ್ಗೆ ಕೊಳ್ಳೇಗಾಲದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಡಿ.ಕೆ. ಶಿವಕುಮಾರ್, ಯಾವತ್ತು ಸಿದ್ದರಾಮಯ್ಯ ಅವರ ಮನೆಗೆ ಭೇಟಿ ನೀಡಿಲ್ಲ. ಅದೇ ರೀತಿ ಸಿದ್ದರಾಮಯ್ಯ ಕೂಡ ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿಲ್ಲ. ಅಧಿಕಾರ ಆಸೆಗಾಗಿ ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲು ಅವರ ಮನೆಗೆ ಹೋಗಿದ್ದಾರೆ ಎಂದು ವ್ಯಂಗ್ಯವಾಡಿದರು.


ಉಪಹಾರ ಕೂಟ ಕೇವಲ ನೆಪಮಾತ್ರಕ್ಕೆ. ಮನಸ್ಸುಗಳೇ ಬ್ರೇಕ್ ಆಗಿರುವಾಗ ಬ್ರೇಕ್ ಪಾಸ್ಟ್ ತೇಪೆ ಹಚ್ಚುತ್ತಾ ಹೇಳಿ ಎಂದು ಪ್ರಶ್ನಿಸಿದ ಅವರು ರಾಜ್ಯದ ಅಭಿವೃದ್ಧಿ ರೈತರು ಹಾಗೂ ದಲಿತರ ಸಮಸ್ಯೆಗಳ ಬಗ್ಗೆ ಚರ್ಚಿಸದೆ ಕೇವಲ ಉಪಹಾರ ಸಭೆ ಮಾಡಿ ಜನರ ದಾರಿ ತಪ್ಪಿಸಿದ್ದಾರೆ ಎಂದು ಟೀಕಿಸಿದರು.


ಕಾಂಗ್ರೆಸ್‌ನಲ್ಲಿ ದಲಿತರಿಗೆ ಕುರ್ಚಿಯಿಲ್ಲ ಎಂಬುದು ಮತ್ತೆ ಸಾಬೀತಾಗಿದೆ. ದಲಿತರ ಸಮಾಧಿಯನ್ನು ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ಕಟ್ಟಿದೆ ಎಂದ ಅವರು ಸಂಪುಟ ಪುನರ್‌ರಚನೆಯಾದರೆ ಪರಮೇಶ್ವರ್, ಮಹದೇವಪ್ಪ ಹಾಗೂ ಮುನಿಯಪ್ಪ ಅವರುಗಳು ಅವರನ್ನು ಸಂಪುಟದಿಂದ ಕೈಬಿಡಲಾಗುತ್ತದೆ. ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆಯವರನ್ನು ದಲಿತ ಮುಖ್ಯಮಂತ್ರಿಯಾಗಿ ಅಗಲು ಬಿಡುವುದಿಲ್ಲ ಎಂದರು.


ಪ್ರಿಯಾಂಕ್ ಖರ್ಗೆ ಯವರನ್ನು ಮುಖ್ಯಮಂತ್ರಿ ಅಥವಾ ಡಿಸಿಎಂ ಮಾಡುತ್ತಾರೆ. ಎಐಸಿಸಿ ಹೈಕಮಾಂಡ್ ಆದರೆ ನಾನು ಈ ಕುರ್ಚಿ ಕಿತ್ತಾಟದ ಬಗ್ಗೆ ಗಮನಕ್ಕೆ ತರುತ್ತೇನೆ ಎಂದು ಹೇಳುತ್ತಾರೆ. ಹೀಗಾಗಿ ಕಾಂಗ್ರೆಸ್ ಪಕ್ಷದಂತಹ ಕೆಟ್ಟ ಪಕ್ಷ ಮತ್ತೊಂದಿಲ್ಲ. ಕಾಂಗ್ರೆಸ್ ಸರ್ವ ನಾಶವಾದರೆ ಸಾರ್ವಜನಿಕರು ಉದ್ಧಾರವಾಗುತ್ತಾರೆ ಎಂದು ಹೇಳಿದರು.