ತುಮಕೂರು, ಏ. ೧೧- ಬಿಜೆಪಿ ಹಾಗೂ ಆರೆಸ್‌ಎಸ್ ವಿಷ ಸರ್ಪವಿದ್ದಂತೆ ಎಂದು ಹೇಳಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಹೇಳಿಕೆ ಖಂಡಿಸಿ ಜಿಲ್ಲಾ ಬಿಜೆಪಿ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಿ, ಖರ್ಗೆ ವಿರುದ್ಧಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಮುಖಂಡರು ಹೇಳಿಕೆ ಹಿಂಪಡೆಯವಂತೆ ಆಗ್ರಹಿಸಿದರು.
ಬಿಜಿಎಸ್ ವೃತ್ತದಲ್ಲಿ ಸಮಾವೇಶಗೊಂಡು ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಶಾಸಕ ಜಿ.ಬಿ. ಜ್ಯೋತಿಗಣೇಶ್, ಬಿಜೆಪಿ, ಆರೆಸ್‌ಎಸ್ ವಿರುದ್ಧ ಅವಹೇಳನಾಕಾರಿಯಾಗಿ ಮಾತನಾಡಿರುವುದು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಶೋಭೆ ತರುವುದಲ್ಲ. ದೇಶ ಮೊದಲು, ಆಮೇಲೆ ಪಕ್ಷ ಹಾಗೂ ವ್ಯಕ್ತಿ ಎಂಬ ಧ್ಯೇಯದ ಆರೆಸ್‌ಎಸ್ ಮಾರ್ಗದರ್ಶನದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ. ಶಾಂತಿಪ್ರಿಯತೆಗೆ ಹೆಸರಾದ ಬೌದ್ಧಧರ್ಮ ಪ್ರತಿಪಾದಿಸುವ ಖರ್ಗೆಯವರು, ಅಲ್ಪಸಂಖ್ಯಾತರನ್ನು ಹಿಂದೂಗಳ ಮೇಲೆ ಎತ್ತಿಕಟ್ಟುವ ಮಾತುಗಳು ಆಕ್ಷೇಪಾರ್ಹ, ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಖರ್ಗೆಅವರ ಮಾತುಗಳನ್ನು ಬಲವಾಗಿ ಖಂಡಿಸುತ್ತೇವೆ. ಅವರು ತಮ್ಮ ಮಾತನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಪ್ರಸ್ತುತ ದೇಶ ದೇಶಗಳ ನಡುವೆ ಯುದ್ಧ ನಡೆಯುತ್ತಿದೆ. ಭಾರತ ಉಳಿದಿದೆಯೆಂದರೆ ಅದು ಆರೆಸ್‌ಎಸ್ ಹಾಕಿಕೊಟ್ಟ ಮಾರ್ಗದರ್ಶನ, ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಿಂದ ಮಾತ್ರ.ಬೇರೆ ಪಕ್ಷಗಳಾಗಿದ್ದರೆ ಅಧಿಕಾರಕ್ಕೋಸ್ಕರ ದೇಶದ ಭದ್ರತೆಯನ್ನೂ ಕಡೆಗಣಿಸುತ್ತಿದ್ದವು. ಆರೆಸ್‌ಎಸ್ ಹಾಕಿಕೊಟ್ಟ ಬೂನಾದಿಯ ಆಡಳಿತದಲ್ಲಿಂದು ನಮ್ಮದೇಶ ಸುಭದ್ರವಾಗಿದೆ. ಅದನ್ನು ಸಹಿಸಲಾಗದೆ ಮಲ್ಲಿಕಾರ್ಜುನಖರ್ಗೆ ಯವವರು ದೇಶ ಒಡೆಯುವ ಹೇಳಿಕೆ ನೀಡಿರುವುದು ಖಂಡನೀಯ.ಅವರುದೇಶದಜನರಕ್ಷಮೆ ಕೇಳಬೇಕು ಎಂದು ಜ್ಯೋತಿಗಣೇಶ್ ಒತ್ತಾಯಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್. ರವಿಶಂಕರ್ ಹೆಬ್ಬಾಕ ಮಾತನಾಡಿ, ಅಲ್ಪಸಂಖ್ಯಾತರ ಓಲೈಕೆಗಾಗಿ ಮಲ್ಲಿಕಾರ್ಜುನಖರ್ಗೆ ಯವರು ಆರೆಸ್‌ಎಸ್, ಬಿಜೆಪಿಯನ್ನು ವಿಷಸರ್ಪಕ್ಕೆ ಹೋಲಿಕೆ ಮಾಡಿರುವುದು ಖಂಡನೀಯ. ಬಿಜೆಪಿ ಯಾವತ್ತೂ ಮುಸ್ಲೀಮರನ್ನು ವಿರೋಧ ಮಾಡಿಲ್ಲ, ಯಾರೇ ಆಗಲಿ ದೇಶದ್ರೋಹಿಗಳನ್ನು ಸಹಿಸುವುದಿಲ್ಲ. ಮತ ಓಲೈಕೆಗಾಗಿ ಖರ್ಗೆಯವರು ಕೀಳುಮಟ್ಟದ ಹೇಳಿಕೆ ನೀಡುವುದನ್ನು ಬಿಡಬೇಕು ಎಂದರು.
ಇಂತಹ ಹೇಳಿಕೆಗಳಿಂದಲೇ ದೇಶದ ಜನ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸುತ್ತಾ ಕಾಂಗ್ರೆಸ್ ಮುಕ್ತ ದೇಶ ಮಾಡುತ್ತಿದ್ದಾರೆ. ಈಗ ೨೨-೨೩ ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿದೆ. ಕಾಂಗ್ರೆಸ್ ಆಡಳಿತವಿರುವ ಕರ್ನಾಟಕವನ್ನು ಕಾಂಗ್ರೆಸ್ ಪಕ್ಷ ಎಟಿಎಂ ಮಾಡಿಕೊಂಡಿದೆ. ಯಾವುದೇ ಅಭಿವೃದ್ಧಿ ಮಾಡದೆ, ತೆರಿಗೆ ಹೆಚ್ಚಳ ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ಜನ ತಕ್ಕ ಪಾಠ ಕಲಿಸುತ್ತಾರೆಎಂದರು.
ಪ್ರತಿಭಟನೆಯಲ್ಲಿ ರಾಜ್ಯ ಬಿಜೆಪಿ ಕಾರ್ಯದರ್ಶಿ ಅಂಬಿಕಾ ಹುಲಿನಾಯ್ಕರ್, ನಿಕಟಪೂರ್ವ ನಗರಾಧ್ಯಕ್ಷ ಟಿ.ಹೆಚ್. ಹನುಮಂತರಾಜು, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ನವಚೇತನ್, ಒಬಿಸಿ ಮೋರ್ಚಾಅಧ್ಯಕ್ಷ ಕೆ.ವೇದಮೂರ್ತಿ, ಜಿಲ್ಲಾ ವಕ್ತಾರ ಟಿ.ಆರ್. ಸದಾಶಿವಯ್ಯ, ನಗರಪಾಲಿಕೆ ಮಾಜಿ ಸದಸ್ಯರಾದ ವಿಷ್ಣುವರ್ಧನ್, ಸಿ.ಎನ್.ರಮೇಶ್, ಮಲ್ಲಿಕಾರ್ಜುನ್, ಇಂದ್ರಕುಮಾರ್, ಮುಖಂಡರಾದ ಮನೋಹರಗೌಡ, ಮಹೇಶ್‌ಬಾಬು, ಜ್ಯೋತಿತಿಪ್ಪೇಸ್ವಾಮಿ, ಬಂಬೂ ಮೋಹನ್, ಜೆ.ಜಗದೀಶ್, ಹನುಮಂತರಾಜು, ನಿಸರ್ಗರಮೇಶ್, ಅಂಜನ್‌ಮೂರ್ತಿ, ವಸಂತಮ್ಮ, ಗಂಗಾಧರ್, ಪ್ರೀತಂಜೈನ್, ಕೊಪ್ಪಲ್ ನಾಗರಾಜು, ರೇಖಾ ಶಿವಕುಮಾರ್, ಲತಾಬಾಬು, ಮರಿತಿಮ್ಮಯ್ಯ, ವೆಂಕಟೇಶಾಚಾರ್, ಆಟೋ ಯಡಿಯೂರಪ್ಪ, ಪ್ರಸನ್ನಕುಮಾರ್, ಹರಿಪ್ರಸಾದ್, ದೇವರಾಜು ಮತ್ತಿತರರು ಭಾಗವಹಿಸಿದ್ದರು.























