Home ಜಿಲ್ಲೆ ಬೆಂಗಳೂರು ಪರಿಸರ ಉಳಿಸಿ ಬೆಳೆಸಲು ಖಂಡ್ರೆ ಕರೆ

ಪರಿಸರ ಉಳಿಸಿ ಬೆಳೆಸಲು ಖಂಡ್ರೆ ಕರೆ

ಬೆಂಗಳೂರು, ಮೇ. ೨೩-ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ನಾವೆಲ್ಲರೂ ಪರಿಸರ ಉಳಿಸಲು ಬೆಳಸಲು ಶ್ರಮಿಸಬೇಕು. ಹವಮಾನ ಬದಲಾವಣೆ ಮತ್ತು ಬರ, ಬಿಸಿಲು ಮತ್ತು ಮಳೆ ಸಕಾಲಕ್ಕೆ ಆಗಬೇಕು ಆದರೆ ಹವಮಾನ ವೈಪರೀತ್ಯದಿಂದ ಪ್ರವಾಹ, ತಾಪಮಾನ ಹೆಚ್ಚಳವಾಗಲಿದೆ ಹಾಗೂ ತಾಪಮಾನ ೪೦ರಿಂದ ೪೮ಡಿಗ್ರಿವರೆಗೆ ತಲುಪುತ್ತಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆರವರು ತಿಳಿಸಿದರು.


ಯಶವಂತಪುರ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಸಂಸ್ಥೆಯ ಸಿಎಸ್‌ಆರ್ ನಿಧಿ ಅಡಿಯಲ್ಲಿ ಬಂಡೀಪುರ, ಮಲೆಮಹದೇಶ್ವರ ಬೆಟ್ಟ ದಟ್ಟ ಅರಣ್ಯ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರಣ್ಯ ಸಿಬ್ಬಂದಿಗಳಿಗೆ ಸುರಕ್ಷತೆಯ ದೃಷ್ಟಿಯಿಂದ ಸುರಕ್ಷಾ ಕ್ಯಾಬಿನ್ ಗಳನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕಾರವಾರ, ಶಿವಮೊಗ್ಗ, ದಕ್ಷಿಣ ಕನ್ನಡ ವಿವಿಧ ಜಿಲ್ಲೆಗಳಲ್ಲಿ ಅರಣ್ಯ ಹೇರಳವಾಗಿದೆ ವೈವಿಧ್ಯಮಯ ಪ್ರಾಣಿ , ಪಕ್ಷಿಗಳು ಜೀವಿಸುತ್ತಿವೆ. ಮಾನವ ಮತ್ತು ಪ್ರಾಣಿಗಳ ನಡುವೆ ಸಂಘರ್ಷ ಏರ್ಪಟ್ಟಿದೆ. ದುಬಾರೆ ಆನೆ ತರಬೇತಿ ಕೇಂದ್ರದಲ್ಲಿ ಆನೆ ದಾಳಿಯಿಂದ ಮಹಿಳೆ ಸಾವು ಸಂಭವಿಸಿರುವುದು ಶೋಚನೀಯ ಸಂಗತಿ ಎಂದ ಅವರು ಬಂಡೀಪುರದಲ್ಲಿ ಹುಲಿಗಳ ಸಂತತಿ ಹೆಚ್ಚಳವಾಗಿದೆ ದೇಶದಲ್ಲಿ ಎರಡನೇಯ ಸ್ಥಾನ ಹೊಂದಿದೆ ಮತ್ತು ದೇಶದಲ್ಲಿ ಅತಿ ಹೆಚ್ಚು ಆನೆಗಳ ಸಂತತಿ ನಮ್ಮ ರಾಜ್ಯದಲ್ಲಿ ಇದೆ.

ಮಾನವ ಮತ್ತು ಪ್ರಾಣಿಗಳ ಸಂಘರ್ಷದಲ್ಲಿ ಪ್ರತಿವರ್ಷ ೩೦ ರಿಂದ ೪೦ ಸಾವು ಸಂಭವಿಸುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಅರಣ್ಯಧಿಕಾರಿಗಳು, ಸಿಬ್ಬಂದಿಗಳು ಕಾರ್ಯನಿರತರಾಗಿದ್ದಾರೆ ಹಾಗೂ ಪ್ರಾಣಿಗಳ ದಾಳಿಯನ್ನು ತಡೆಯುವ ಮೂಲಕ ಆನೆ, ಹುಲಿ, ಚಿರತೆಗಳನ್ನು ಕಾಡಿಗೆ ಹಿಂತಿರುಗಿಸುವ ಕೆಲಸ ಮಾಡುತ್ತಾ ಮಾನವ ಮತ್ತು ಕಾಡು ಪ್ರಾಣಿಗಳ ಸಂಘರ್ಷವನ್ನು ತಡೆಗಟ್ಟುತ್ತಿದ್ದಾರೆ ಹಾಗೂ ನಮ್ಮ ಅಧಿಕಾರಿಗಳು ಅವರ ಜೀವದ ಹಂಗು ತೊರೆದು ಕೆಲಸ ನಿರ್ವಹಿಸುತ್ತಾರೆ ಎಂದರು.


ಬೆಂಗಳೂರಿನಲ್ಲಿ ರೂ ೧೦ಸಾವಿರ ಕೋಟಿ ರಾಜ್ಯದಲ್ಲಿ ರೂ ೫೦ಸಾವಿರ ಕೋಟಿ ವೆಚ್ಚದ ಒತ್ತುವರಿ ಅರಣ್ಯಭೂಮಿಯನ್ನು ಇಲಾಖೆ ವಶ ಪಡೆಯಲಾಗಿದೆ ಎಂದು ಸಚಿವರು ತಿಳಿಸಿದರು.


ಎಂಇಐ ಅಧ್ಯಕ್ಷ ಎಸ್.ಮನೋಹರ್ ಮಾತನಾಡಿ ಸಾಮಾಜಿಕ ಜವಾಬ್ದಾರಿ ಸಿ.ಎಸ್.ಆರ್.ನಿಧಿ ಅಡಿಯಲ್ಲಿ ಈಗಾಗಲೇ ಶಾಲೆಗಳಿಗೆ ಸ್ಪಾರ್ಟ್ ಕ್ಲಾಸ್ ಅನುದಾನ ನೀಡಲಾಗಿದೆ. ವನ್ಯ ಜೀವಿ ಪರಿಪಾಲಕರು, ಸಿಬ್ಬಂದಿಗಳಿಗೆ ಅನುಕೂಲವಾಗಲಿ ಎಂದು ಸುರಕ್ಷಾ ಕ್ಯಾಬಿನ್ ನೀಡಲಾಗುತ್ತಿದೆ. ಪರಿಸರ ಉಳಿದರೆ ಮಾನವ ಕುಲ ಉಳಿಯುತ್ತದೆ.


ಅರಣ್ಯ ಸಿಬ್ಬಂದಿಗಳು, ಆನೆ ದಾಳಿಗೆ ಒಳಗಾದ ವ್ಯಕ್ತಿಗಳಿಗೆ ಸಹಾಯಹಸ್ತ ಹಾಗೂ ಅರಣ್ಯ ಪ್ರದೇಶ ವ್ಯಾಪ್ತಿಯ ಶಾಲೆಗಳ ಅಭಿವೃದ್ದಿ, ಕುಡಿಯುವ ನೀರಿನ ವ್ಯವಸ್ಥೆ ಸಹ ನಮ್ಮ ಎಂಇಐ ಸಂಸ್ಥೆ ಮೂಲಕ ಸಿ.ಎಸ್.ಆರ್. ನಿಧಿ ಅಡಿಯಲ್ಲಿ ಮಾಡಲಾಗಿದೆ. ಅರಣ್ಯ ಭೂಮಿ ಉಳಿಸಲು ಸಚಿವರಾದ ಈಶ್ವರ್ ಖಂಡ್ರೆರವರು ಅಪಾರ ಶ್ರಮ ಹಾಕಿದ್ದಾರೆ ಎಂದು ಹೇಳಿದರು.


ಈ ಕಾರ್ಯಕ್ರಮದಲ್ಲಿ ಅಪರ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿಗಳಾದ ಕುಮಾರ್ ಪುಷ್ಕರ್, ವ್ಯವಸ್ಥಾಪಕ ನಿರ್ದೇಶಕರಾದ ಅನಿತಾ.ಸಿ ಹಾಗೂ ಲಕ್ಷ್ಮಣ್, ಕಂಪನಿ ಕಾರ್ಯದರ್ಶಿ ಕವಿತಾ, ಅಧಿಕಾರಿಗಳಾದ ಶರಣಪ್ಪ, ಸಂತೋಷ್, ಮಂಜುನಾಥ್, ಹುಲಿಯಪ್ಪ, ಬಾಬಾ ಸಾಹೇಬ್ ಮುಚ್ಚಂಡಿ,ತಿಮ್ಮಣ್ಣ, ರೇಖಾ, ಕೀರ್ತಿ ಹಾಗೂ ಕಾರ್ಮಿಕ ಸಂಘದವರು ಹಾಗೂ ಸಿಬ್ಬಂದಿವರ್ಗ ಉಪಸ್ಥಿತರಿದ್ದರು