
ಬೆಂಗಳೂರು,ಸೆ.೨೮- “ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡಬೇಕಾದಲ್ಲಿ ವಿದ್ಯಾರ್ಥಿಗಳು ಬಲಿಷ್ಠರಾಗಬೇಕು” ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದರು.
ಎಎಂಸಿ ಎಂಜಿನಿಯರಿಂಗ್ ಕಾಲೇಜು ಆಯೋಜಿಸಿದ್ದ ಮೊದಲ ವರ್ಷದ ಎಂಜಿನಿಯರಿಂಗ್ ತರಗತಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, “ಅಧಿಕಾರಿಗಳು, ರಾಜಕಾರಣಗಳಿಗಿಂತ ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡುವ ತಾಕತ್ತು ವಿದ್ಯಾರ್ಥಿಗಳ ಬಳಿ ಇದೆ. ಹೀಗಾಗಿ ವಿದ್ಯಾರ್ಥಿಗಳು ಮೊದಲು ಬಲಿಷ್ಠರಾಗಬೇಕು. ಆ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಕೈ ಜೋಡಿಸಬೇಕು” ಎಂದರು.
” ವಿದ್ಯಾರ್ಥಿಗಳು ಕಾಲೇಜಿನ ದಿನಗಳನ್ನು ಭವಿಷ್ಯದ ಬೆಳವಣಿಗೆಗೆ ಬಳಸಿಕೊಳ್ಳಬೇಕು. ದಿನ ನಿತ್ಯದ ಬದುಕಿನಲ್ಲಿ ಕಷ್ಟಗಳು ಇದ್ದೇ ಇದೆ. ಮರಣ ಹೊಂದಿದಾಗ ಮಾತ್ರವೇ ಕಷ್ಟಗಳು ಸಹ ಮಣ್ಣಾಗಲು ಸಾಧ್ಯ. ಹೀಗಾಗಿ ಹೆಚ್ಚಿನ ಸಮಯ ಒಳ್ಳೆಯ ಕಾರ್ಯಗಳಿಗೆ ಉಪಯೋಗಿಸಿ” ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಎಎಂಸಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ.ಕೆ.ಆರ್.ಪರಮಹಂಸ ಮಾತನಾಡಿ, “ನಮ್ಮಲ್ಲಿ ಎಲ್ಲ ರೀತಿಯ ಕೋರ್ಸ್ಗಳಿವೆ. ನಾವು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಿಕೊಡುತ್ತೇವೆ. ಇದನ್ನು ಉಪಯೋಗಿಸಿಕೊಂಡು ಎತ್ತರಕ್ಕೆ ಬೆಳೆಯುವುದು ನಿಮ್ಮ ಕೈಯಲ್ಲಿದೆ. ಮುಂದಿನ ನಾಲ್ಕು ವರ್ಷ ಸುಗಮವಾಗಿ ನಡೆಯಲಿ” ಎಂದು ಶುಭ ಹಾರೈಸಿದರು.
ಈ ವೇಳೆ ಎಎಂಸಿ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷರಾದ ಕೆ.ಗೀತಾ ಪರಮಹಂಸ, ಕಾರ್ಯನಿರ್ವಾಹಕ ಉಪಾಧ್ಯಕ್ಷರು ರಾಹುಲ್ ಕಲ್ಲೂರಿ, ಉಪಾಧ್ಯಕ್ಷೆ ಮೋನಿಕಾ ಕಲ್ಲೂರಿ, ಕಾಲೇಜಿನ ಪ್ರಾಂಶುಪಾಲ, ಡಾ.ಬಿ.ಎನ್.ಯುವರಾಜ್ ಇತರರು ಇದ್ದರು.
























