
ನವದೆಹಲಿ, ಮೇ ೧೧- ತಮಿಳುನಾಡಿನಲ್ಲಿ ನೂತನ ಮುಖ್ಯಮಂತ್ರಿ ಪ್ರಮಾಣ ವಚನಕ್ಕೂ ಮುನ್ನ ಭಾರಿ ರಾಜಕೀಯ ಹೈಡ್ರಾಮ ನಡೆದು ಎಲ್ಲವೂ ಸುಖಾಂತ್ಯ ಕಂಡರೆ, ಕೇರಳಂನಲ್ಲಿ ಮುಖ್ಯಮಂತ್ರಿ ಆಯ್ಕೆ ಇನ್ನೂ ಕಗ್ಗಂಟಾಗಿಯೇ ಉಳಿದಿದೆ.
ಕೇರಳಂನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ದಿಗ್ವಿಜಯ ಸಾಧಿಸಿದ್ದರೂ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಿಗೆ ಇನ್ನೂ ಪರಿಹಾರ ಕಂಡುಕೊಳ್ಳಲು ಕಾಂಗ್ರೆಸ್ ಹೈಕಮಾಂಡ್‌ನಿಂದ ಸಾಧ್ಯವಾಗಿಲ್ಲ.
ಕಳೆದ ೪ ದಿನಗಳ ಹಿಂದೆಯೇ ಕಾಂಗ್ರೆಸ್ ಪಕ್ಷದ ವೀಕ್ಷಕರಾದ ಅಜೇಯ್ ಮಾಕೆನ್, ಮುಖುಲ್ ವಾಸ್ಮಿಕ್ ಇವರುಗಳು ಕೇರಳಂಗೆ ತೆರಳಿ ಶಾಸಕರ ಜತೆ ಸಭೆ ನಡೆಸಿ ಅವರ ಅಭಿಪ್ರಾಯ ಆಲಿಸಿ, ಶಾಸಕಾಂಗ ಪಕ್ಷದ ಸಭೆ ನಡೆಸಿ ಅಲ್ಲಿ ಮುಖ್ಯಮಂತ್ರಿ ಆಯ್ಕೆ ಮಾಡುವ ತೀರ್ಮಾನವನ್ನು ಹೈಕಮಾಂಡ್‌ಗೆ ಬಿಡುವ ನಿರ್ಧಾರವನ್ನು ಕೈಗೊಳ್ಳಲಾಗಿತ್ತು.
ಕಾಂಗ್ರೆಸ್ ಶಾಸಕರ ಅಭಿಪ್ರಾಯಗಳ ಸಮಗ್ರ ವರದಿಯನ್ನು ವೀಕ್ಷಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಲ್ಲಿಸಿದ್ದರು.
ನಿನ್ನೆ ಭಾನುವಾರ ಕೇರಳಂನ ನೂತನ ಮುಖ್ಯಮಂತ್ರಿ ಆಯ್ಕೆಯ ಹೆಸರನ್ನು ಪ್ರಕಟಿಸಲು ಹೈಕಮಾಂಡ್ ನಿರ್ಧರಿಸಿತ್ತು. ಆದರೆ, ಮುಖ್ಯಮಂತ್ರಿ ಹುದ್ದೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಕೇರಳದ ವಿರೋಧ ಪಕ್ಷದ ನಾಯಕರಾಗಿದ್ದ ವಿ.ಡಿ. ಸತೀಶನ್ ಮತ್ತು ಹಿರಿಯ ನಾಯಕ ರಮೇಶ್ ಚನ್ನಿಕಲಾ ನಡುವೆ ಪೈಪೋಟಿ ಇದ್ದು, ಯಾರನ್ನು ಮುಖ್ಯಮಂತ್ರಿಯಾಗಿಸಬೇಕು ಎಂಬುದು ಹೈಕಮಂಡ್‌ಗೆ ತಲೆ ನೋವಾಗಿದೆ.
ಈ ಮೂವರು ನಾಯಕರು ಮುಖ್ಯಮಂತ್ರಿ ಪಟ್ಟಕ್ಕಾಗಿ ಪಟ್ಟು ಹಿಡಿದಿದ್ದು, ಇವರನ್ನು ಸಮಾಧಾನಪಡಿಸಿ ಮುಖ್ಯಮಂತ್ರಿ ಹುದ್ದೆಗೆ ಒಬ್ಬರ ಹೆಸರನ್ನು ಅಂತಿಮಗೊಳಿಸುವ ಹೈಕಮಾಂಡ್ ಪ್ರಯತ್ನಗಳು ಫಲ ನೀಡಿಲ್ಲ ಹಾಗಾಗಿ ಕೇರಳಂನಲ್ಲಿ ಮುಖ್ಯಮಂತ್ರಿ ಆಯ್ಕೆ ಸಮಸ್ಯೆ ಇನ್ನೂ ಬಗೆಹರಿದಿಲ್ಲ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ, ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ಇವರುಗಳು ನಿನ್ನೆಯಿಂದ ಎರಡೆರಡು ಬಾರಿ ಸಭೆ ನಡೆಸಿದರೂ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಬಗ್ಗೆ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಿಲಲ್ಲ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಆ ಯ್ಕೆ ಮಾಡಲು ಒಲವು ತೋರಿದ್ದರಾದರೂ ಪ್ರಬಲ ಮುಖಂಡರಾದ ವಿ.ಡಿ.ಸತೀಶನ್ ಮತ್ತು ರಮೇಶ್ ಚನ್ನಿಕಲಾ ತಮಗೆ ಮುಖ್ಯಮಂತ್ರಿ ಪಟ್ಟ ನೀಡುವಂತೆ ಪಟ್ಟು ಹಾಕಿದ್ದಾರೆ. ಜತೆಗೆ ಯುಡಿಎಫ್‌ನ ಮೈತ್ರಿ ಪಕ್ಷಗಳಾದ ಮುಸ್ಲಿಂ ಲೀಗ್ ಸತೀಶನ್ ಪರ ಒಲವು ವ್ಯಕ್ತಪಡಿಸಿದೆ. ಹಾಗಾಗಿ ಕೇರಳಂ ಮುಖ್ಯಮಂತ್ರಿ ಆಯ್ಕೆ ಹೈಕಮಾಂಡ್‌ಗೆ ಸಂಕಷ್ಟ ತಂದೊಡ್ಡಿದೆ.
ಈ ಮೂವರಲ್ಲಿ ಯಾರನ್ನು ಆಯ್ಕೆ ಮಾಡಿದರೆ ಬಣ ರಾಜಕೀಯ ತಲೆ ಎತ್ತುವ ಸಾಧ್ಯತೆ ಇರುವುದರಿಂದ ಮೂವರ ಜತೆಯೂ ಸಮಾಲೋಚಿಸಿ ಎಲ್ಲರ ಮನವೊಲಿಸಿ ಸರ್ವಸಮ್ಮತ ಅಭ್ಯರ್ಥಿಯನ್ನು ಮುಖ್ಯಮಂತ್ರಿ ಗಾದೆ ಮೇಲೆ ಕೂರಿಸಲು ಹೈಕಮಾಂಡ್ ಕಸರತ್ತು ನಡೆಸಿದೆ.
ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಾಗಿರುವ ಕೆ.ಸಿ. ವೇಣುಗೋಪಾಲ್, ವಿ.ಡಿ. ಸತೀಶನ್ ಹಾಗೂ ರಮೇಶ್ ಚನ್ನಿಕಲಾ ಇವರುಗಳ ಜತೆ ರಾಹುಲ್‌ಗಾಂಧಿ ಸೇರಿದಂತೆ ವರಿಷ್ಠ ನಯಾಕರು ಪ್ರತ್ಯೇಕವಾಗಿ ಮಾತನಾಡಿದರೂ ಮೂವರು ತಮ್ಮ ಪಟ್ಟನ್ನು ಸಡಿಲಿಸಿಲ್ಲ. ಹಾಗಾಗಿ ಕೇರಳಂನಲ್ಲಿ ಮುಖ್ಯಮಂತ್ರಿ ಆಯ್ಕೆ ಇನ್ನು ಎರಡು ಮೂರುದಿನ ಸಮಯ ತೆಗೆದುಕೊಳ್ಳಬಹುದು.
ಇಂದು ಸಂಜೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ, ರಾಹುಲ್‌ಗಾಂಧಿ ಮತ್ತು ಸೋನಿಯಾಗಾಂಧಿ ಅವರು ಕೇರಳಂ ಮುಖ್ಯಮಂತ್ರಿ ಆಯ್ಕೆ ಬಗ್ಗೆ ಮತ್ತೊಂದು ಸುತ್ತಿನ ಸಭೆ ನಡೆಸುವ ಸಾಧ್ಯತೆ ಇದ್ದು, ಅಲ್ಲಿ ಬಹುತೇಕ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಅಂತಿಮವಾಗಲಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
ಇನ್ನು ೨-೩ ದಿನಗಳಲ್ಲಿ ಕೇರಳಂನಲ್ಲಿ ನೂತನ ಮುಖ್ಯಮಂತ್ರಿಯ ಪ್ರಮಾಣ ವಚನ ನಡೆಯಲಿದೆ.

























