
ಬೆಂಗಳೂರು, ಮಾ. ೧೦- ಬೆಂಗಳೂರಿನ ನಗರದ ತ್ಯಾಜ್ಯ ನೀರನ್ನು ಎರಡು ಹಂತಗಳಲ್ಲಿ ಸಂಸ್ಕರಿಸಿ ಕೆ.ಸಿ. ವ್ಯಾಲಿ ಯೋಜನೆ ಮೂಲಕ ಪಂಪ್ ಮಾಡಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳನ್ನು ತುಂಬಿಸುತ್ತಿರುವ ನೀರು ಮಲಿನವಾಗಿದೆ. ಈ ನೀರನ್ನು ೩ನೇ ಹಂತದಲ್ಲಿ ಸಂಸ್ಕರಿಸಿ ಎಂದು ಜೆಡಿಎಸ್‌ನ ಸಮೃದ್ಧಿ ಮಂಜುನಾಥ್ ಸರ್ಕಾರವನ್ನು ಆಗ್ರಹಿಸಿ, ಬಾಟಲಿಯಲ್ಲಿ ನೀರನ್ನು ಸದನದಲ್ಲಿ ಪ್ರದರ್ಶಿಸಿದರು.
ಪ್ರಶ್ನೋತ್ತರ ಸಂದರ್ಭದಲ್ಲಿ ಕೆ.ಸಿ. ವ್ಯಾಲಿ ಯೋಜನೆಯ ಮೂಲಕ ಕೊಳಚೆ ನೀರನ್ನು ೨ ಹಂತದಲ್ಲಿ ಸಂಸ್ಕರಿಸಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಿಗೆ ಬಿಡುತ್ತಿರುವ ಬಗ್ಗೆ ಪ್ರಶ್ನೆ ಕೇಳಿದ್ದ ಸಮೃದ್ಧಿ ಮಂಜುನಾಥ್ ಅವರು, ಈ ಜಿಲ್ಲೆಗಳಿಗೆ ಬಿಡುತ್ತಿರುವ ನೀರು ವಿಷವಾಗಿದೆ. ಮುಂದಿನ ಪೀಳಿಗೆಗೆ ನಾವು ಇಂತಹ ವಿಷದ ನೀರನ್ನು ಕೊಡುವುದು ಬೇಡ. ೩ನೇ ಹಂತದಲ್ಲಿ ಕೊಳಚೆ ನೀರನ್ನು ಸಂಸ್ಕರಿಸಿ ಎಂದು ಒತ್ತಾಯಿಸಿ, ಬೆಂಗಳೂರಿಗೆ ಒದಗಿಸುತ್ತಿರುವ ನೀರು ಹಾಗೂ ಕೆ.ಸಿ. ವ್ಯಾಲಿ ಯೋಜನೆ ಮೂಲಕ ಒದಗಿಸುತ್ತಿರುವ ನೀರಿನ ಎರಡು ಬಾಟಲ್‌ಗಳನ್ನು ಸದನದಲ್ಲಿ ಪ್ರದರ್ಶಿಸಿದರು.
ಜೆಡಿಎಸ್‌ನ ಸಮೃದ್ಧಿ ಮಂಜುನಾಥ್ ರವರು ನೀರಿನ ಬಾಟಲ್‌ಗಳನ್ನು ಪ್ರದರ್ಶಿಸಿದ್ದಕ್ಕೆ ಸಭಾಧ್ಯಕ್ಷ ಯು.ಟಿ. ಖಾದರ್ ಅಸಮಾಧಾನ ವ್ಯಕ್ತಪಡಿಸಿ, ಈ ರೀತಿ ಸದನದಲ್ಲಿ ಮಾಡುವುದು ಸರಿಯಲ್ಲ. ನಿಯಮಾವಳಿಗಳಂತೆ ನಡೆದುಕೊಳ್ಳಿ. ಏನೇ ಹೇಳುವುದಿದ್ದರೂ ಪ್ರಶ್ನೆ ಕೇಳಿ. ಈ ರೀತಿ ಸದನಕ್ಕೆ ನೀರಿನ ಬಾಟಲ್‌ಗಳನ್ನು ತರುವುದು ಸರಿಯಲ್ಲ ಎಂದರು.
ಜೆಡಿಎಸ್ ಸದಸ್ಯರ ಪ್ರಶ್ನೆಗೆ ಉತ್ತರ ನೀಡಿದ್ ಸಚಿವ ಭೋಸರಾಜು ಅವರು, ಎರಡು ಜಿಲ್ಲೆಗಳ ಶಾಸಕರ ಸಭೆ ಕರೆದು ಈ ಬಗ್ಗೆ ಚರ್ಚಿಸಿದ್ದೇವೆ. ನೀರನ್ನು ಅಂತರ್ಜಲ ಹೆಚ್ಚಿಸಲು ಮಾತ್ರ ಬಳಕೆ ಮಾಡಲಾಗುತ್ತಿದೆ. ಕುಡಿಯಲು ಬಳಸುತ್ತಿಲ್ಲ. ಹಾಗಾಗಿ ೨ ಹಂತಗಳಲ್ಲಿ ಸಂಸ್ಕರಿಸಿ ಕೆರೆ ತುಂಬಿಸಲಾಗುತ್ತಿದೆ ಎಂದು ಹೇಳಿದರು.
ಇಷ್ಟಾದರೂ ಜೆಡಿಎಸ್‌ನ ಸಮೃದ್ಧಿ ಮಂಜುನಾಥ್ ಅವರು ನೀರಿನ ಗುಣಮಟ್ಟ ಸರಿಯಿಲ್ಲ ಎಂದು ಹೇಳುತ್ತಲೇ ಇದ್ದರು. ಆಗ ಕಂದಾಯ ಸಚಿವ ಕೃಷ್ಣಬೈರೇಗೌಡ ಎದ್ದುನಿಂತ ಸಚಿವ ಭೋಸರಾಜು ರವರ ಅನುಮತಿ ಮೇರೆಗೆ ಉತ್ತರ ಕೊಡುತ್ತೇನೆ ಎಂದು ಹೇಳಿ, ಕೆ.ಸಿ. ವ್ಯಾಲಿ ಯೋಜನೆ ಮೂಲಕ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೊಳಚೆ ನೀರನ್ನು ೨ ಹಂತಗಳಲ್ಲಿ ಸಂಸ್ಕರಿಸಿ ಕೆರೆ ತುಂಬಿಸುತ್ತಿದ್ದೇವೆ. ಸದಸ್ಯರು ಯಾವುದೇ ವೈಜ್ಞಾನಿಕ ಆಧಾರ ಇಲ್ಲದೆ ಸುಮ್ಮನೆ ಈ ಬಗ್ಗೆ ಅಪಪ್ರಚಾರ ಮಾಡಿ ತಪ್ಪು ಅಭಿಪ್ರಾಯ ಮೂಡಿಸುವುದು ಸರಿಯಲ್ಲ. ಪ್ರತಿ ೩ ತಿಂಗಳಿಗೊಮ್ಮೆ ದೇಶದಲ್ಲೇ ಪ್ರತಿಷ್ಟಿತ ಸಂಸ್ಥೆಯಾದ ಭಾರತೀಯ ವಿಜ್ಞಾನ ಸಂಸ್ಥೆಯಿಂದ ಕೆ.ಸಿ. ವ್ಯಾಲಿ ನೀರನ್ನು ಪರೀಕ್ಷಿಸಲಾಗುತ್ತಿದೆ.
ಬೆಳೆ ಪರೀಕ್ಷೆಯನ್ನು ಮಾಡಲಾಗುತ್ತಿದೆ. ಮತ್ತೆ ನೀರಿನ ಪರೀಕ್ಷೆ ಮತ್ತು ಬೆಳ ಪರೀಕ್ಷೆಯನ್ನು ೫ ವರ್ಷಗಳಿಗೆ ವಿಸ್ತರಿಸಿದ್ದೇವೆ. ಅನಗತ್ಯವಾಗಿ ಆಧಾರ ಇಲ್ಲದೆ ವೈಜ್ಞಾನಿಕ ಸಂಸ್ಥೆಗಳ ವರದಿಗಳಿಲ್ಲದೆ ಈ ರೀತಿ ಸದನದಲ್ಲಿ ಮಾತನಾಡುವುದು ಸರಿಯಲ್ಲ. ಸದಸ್ಯರು ರಾಜಕೀಯ ಪಕ್ಷದ ಹೆಸರು ಉಲ್ಲೇಖಿಸಿದ್ದಾರೆ. ಹಾಗಾಗಿ ನಾನು ಮಾತನಾಡುತ್ತಿದ್ದೇನೆ. ೨೦೦೬ ರಲ್ಲಿ ಭದ್ರಾ ನದಿಯಿಂದ ಕೋಲಾರ ಜಿಲ್ಲೆಯಿಂದ ನೀರು ತರುತ್ತೇವೆ ಎಂದು ಗುದ್ದಲಿ ಪೂಜೆ ಮಾಡಿದವರು ಯಾರು, ಅಧಿಕಾರದಲ್ಲಿದ್ದಾಗ ಏನನ್ನೂ ಮಾತನಾಡದೇ ಈಗ ಮಾತನಾಡುವುದು ಸರಿಯಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ಕೆ.ಸಿ. ವ್ಯಾಲಿಯಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ವಿಶ್ವಬ್ಯಾಂಕ್, ಕೇಂದ್ರ ಸರ್ಕಾರದ ಜಲಸಂಪನ್ಮೂಲ ಇಲಾಖೆ. ವಿಶ್ವಸಂಸ್ಥೆ ಎಲ್ಲವೂ ಶ್ಲಾಘಿಸಿವೆ. ವಿಶ್ವಬ್ಯಾಂಕ್ ಈ ಯೋಜನೆಯನ್ನು ಮೆಚ್ಚಿ ಈ ಯೋಜನೆ ವಿಸ್ತರಣೆಗೆ ಸಾಲವನ್ನು ನೀಡಿದೆ. ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಮಾಧುಸ್ವಾಮಿ ಅವರು ಅಂದಿನ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿರವರನ್ನು ಒಪ್ಪಿಸಿ ವೃಷಭಾವತಿ ಕಣಿವೆ ಮೂಲಕ ತುಮಕೂರಿನವರೆಗೂ ಕೆರೆಗಳನ್ನು ತುಂಬಿಸುವ ಯೋಜನೆಯನ್ನು ರೂಪಿಸಿದ್ದರು ಎಂದರು.
ಈ ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ಡಿ.ಕೆ. ಶಿವಕುಮಾರ್ ಅವರು ಜಲಸಂಪನ್ಮೂಲ ಸಚಿವರಾಗಿದ್ದಾಗ ಕೇಂದ್ರ ಸರ್ಕಾರ ಆಗಿನ ಜಲಸಂಪನ್ಮೂ ಸಚಿವರೇ ಕೆ.ಸಿ. ವ್ಯಾಲಿ ಯೋಜನೆಯ ಸ್ಥಳಕ್ಕೆ ಭೇಟಿ ನೀಡಿ ಈ ಯೋಜನೆ ಇಡೀ ರಾಷ್ಟ್ರಕ್ಕೆ ಅನ್ವಯಿಸುವ ಯೋಜನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹೀಗಿರುವಾಗ ಈ ಯೋಜನೆಯ ಬಗ್ಗೆ ಅಪಪ್ರಚಾರ ಮೂಡಿಸುವ ರೀತಿಯಲ್ಲಿ ಯಾವುದೇ ವೈಜ್ಞಾನಿಕ ಆಧಾರ ಇಲ್ಲದೆ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.
ನಾವು ಈ ಯೋಜನೆಯ ಸುಧಾರಣೆಗೆ ತೆರೆದ ಮನಸ್ಸು ಹೊಂದಿದ್ದೇವೆ. ಸುಧಾರಣೆಗಳಿದ್ದರೆ ಹೇಳಲಿ, ಸುಮ್ಮನೆ ರಾಜಕೀಯ ಕಾರಣಗಳಿಗೆ ಸದನದಲ್ಲಿ ಮಾತನಾಡುವುದು ಸರಿಯಲ್ಲ ಎಂದು ಕೃಷ್ಣಬೈರೇಗೌಡ ಹೇಳಿದರು.
ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿ ಮಾತನಾಡಿದ ಸಚಿವ ಕೆ.ಹೆಚ್. ಮುನಿಯಪ್ಪ ಅವರು ಕೆ.ಸಿ. ವ್ಯಾಲಿ ಮೂಲಕ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೆರೆ ತುಂಬಿಸುವ ಯೋಜನೆಯನ್ನು ಪಕ್ಷಾತೀತವಾಗಿ ಎಲ್ಲಾ ಶಾಸಕರ ಜತೆ ಚರ್ಚಿಸಿಯೇ ಮಾಡಿದ್ದೇವೆ. ಇದು ಕುಡಿಯುವ ನೀರಿಗೆ ರೂಪಿಸಿ ಯೋಜನೆಯಲ್ಲ. ಕುಡಿಯುವ ನೀರಿಗೆ ಎತ್ತಿನಹೊಳೆ ಯೋಜನೆಯನ್ನು ಮಾಡಿದ್ದೇವೆ. ಇದು ಕೆರೆ ತುಂಬಿಸುವ ಮಾಡಿರುವ ಯೋಜನೆ. ಕುಡಿಯುವ ನೀರಿಗಾದರೆ ೩ ಹಂತದ ಸಂಸ್ಕರಣೆ ಬೇಕು. ಕೆರೆ ತುಂಬಿಸುವ ಯೋಜನೆಗೆ ೨ ಹಂತದ ಸಂಸ್ಕರಣೆ ಸಾಕು. ಈ ಬಗ್ಗೆ ಶಾಸಕರಿಗೆ ಅರಿವು ಮೂಡಿಸಲು ಎರಡು ಜಿಲ್ಲೆಗಳ ಶಾಸಕರ ಸಭೆ ಕರೆಯುವಂತೆ ಸಚಿವ ಭೋಸರಾಜುರವರಿಗೆ ಮನವಿ ಮಾಡಿದರು.























