Home ಜಿಲ್ಲೆ ವಿಶ್ವನಾಥರಡ್ಡಿ ದರ್ಶನಾಪೂರುಗೆ “ಕರ್ನಾಟಕ ಸಹಕಾರ ಶಿರೋಮಣಿ” ಗೌರವ

ವಿಶ್ವನಾಥರಡ್ಡಿ ದರ್ಶನಾಪೂರುಗೆ “ಕರ್ನಾಟಕ ಸಹಕಾರ ಶಿರೋಮಣಿ” ಗೌರವ

ಬೆಂಗಳೂರು: ಫೆ.೮:ಸಹಕಾರ ಚಳವಳಿಯನ್ನು ನೆಲಮಟ್ಟದಿಂದ ಶಿಖರದವರೆಗೆ ಕೊಂಡೊಯ್ದ ಅಪರೂಪದ ಸಂಘಟನಾ ಶಕ್ತಿ, ರೈತಪರ ಅಚಲ ಬದ್ಧತೆ ಹಾಗೂ ದೀರ್ಘಕಾಲದ ನಿಸ್ವಾರ್ಥ ಸೇವೆಗೆ ರಾಜ್ಯಮಟ್ಟದ ಗರಿಷ್ಠ ಗೌರವವಾದ ೨೦೨೫ನೇ ಸಾಲಿನ “ಕರ್ನಾಟಕ ಸಹಕಾರ ಶಿರೋಮಣಿ” ಪ್ರಶಸ್ತಿ ಯಾದಗಿರಿ ಜಿಲ್ಲೆಯ ಗಿರಿನಾಡಿನ ಸಹಕಾರಿ ಧುರೀಣ ಶ್ರೀ ವಿಶ್ವನಾಥರಡ್ಡಿ ದರ್ಶನಾಪೂರು ಅವರಿಗೆ ಲಭಿಸಿದೆ.
ನಗರದ ರಾಜಭವನ ರಸ್ತೆ, ವಸಂತನಗರದಲ್ಲಿರುವ ದಿ ಕ್ಯಾಪಿಟಲ್ ಹೋಟೆಲ್ ಸಭಾಂಗಣದಲ್ಲಿ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಸಂಯುಕ್ತ ಆಶ್ರಯದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು. ರಾಜ್ಯದ ಗಣ್ಯರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮವನ್ನು ಕೃಷಿ ಸಚಿವರಾದ ಶ್ರೀ ಚಲುವ ನಾರಾಯಣಸ್ವಾಮಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ, ಸಹಕಾರ ಚಳವಳಿ ಬಲವರ್ಧನೆಯಲ್ಲಿ ಸಾಧಕರ ಪಾತ್ರ ಅಮೂಲ್ಯವೆಂದು ಪ್ರಶಂಸಿಸಿದರು. ಜವಳಿ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲರು ಸಹ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರಗು ನೀಡಿದರು.
ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅವರು ವಿಶ್ವನಾಥರಡ್ಡಿ ದರ್ಶನಾಪೂರು ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ಗ್ರಾಮೀಣ ಆರ್ಥಿಕತೆಯನ್ನು ಸದೃಢಗೊಳಿಸುವಲ್ಲಿ, ರೈತ ಸಂಘಟನೆಗಳನ್ನು ಬಲಪಡಿಸುವಲ್ಲಿ ಹಾಗೂ ಸಹಕಾರಿ ಸಂಸ್ಥೆಗಳ ಬೆಳವಣಿಗೆಯಲ್ಲಿ ಅವರು ತೋರಿದ ದಿಟ್ಟ ನಾಯಕತ್ವವನ್ನು ಈ ವೇಳೆ ವಿಶೇಷವಾಗಿ ಕೊಂಡಾಡಲಾಯಿತು.
ಯಾದಗಿರಿ ಜಿಲ್ಲೆಯ ಮಣ್ಣಿನ ಮಗನಾದ ದರ್ಶನಾಪೂರು ಅವರು ಸಹಕಾರ ಕ್ಷೇತ್ರದಲ್ಲಿ ತೋರಿದ ದಕ್ಷತೆ, ಪಾರದರ್ಶಕ ಆಡಳಿತ ಹಾಗೂ ರೈತರ ಸಂಕಷ್ಟಗಳಿಗೆ ಸ್ಪಂದಿಸಿದ ಮಾನವೀಯ ಮನೋಭಾವವೇ ಅವರನ್ನು ರಾಜ್ಯಮಟ್ಟದ ಶ್ರೇಷ್ಠ ಗೌರವಕ್ಕೆ ಪಾತ್ರರನ್ನಾಗಿಸಿದೆ ಎಂಬ ಅಭಿಪ್ರಾಯವನ್ನು ಗಣ್ಯರು ವ್ಯಕ್ತಪಡಿಸಿದರು.
ರಾಜ್ಯದ ವಿವಿಧ ಜಿಲ್ಲೆಗಳ ಸಹಕಾರ ಧುರೀಣರು, ರಾಜಕೀಯ ಮುಖಂಡರು, ಸಂಘಟನೆ ಪ್ರತಿನಿಧಿಗಳು ಹಾಗೂ ಅಭಿಮಾನಿಗಳು ಸಮಾರಂಭದಲ್ಲಿ ಭಾಗವಹಿಸಿ ಸಾಧಕನನ್ನು ಅಭಿನಂದಿಸಿದರು. ಸಹಕಾರ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಹಲವಾರು ಗಣ್ಯರಿಗೂ ಇದೇ ವೇದಿಕೆಯಲ್ಲಿ ಪ್ರಶಸ್ತಿಗಳನ್ನು ಪ್ರದಾನಿಸಲಾಯಿತು.
ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಪ್ರಧಾನ ಸಂಪಾದಕರಾದ ರವಿ ಹೆಗಡೆ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಭವ್ಯವಾಗಿ, ಶಿಸ್ತಿನಿಂದ ನೆರವೇರಿತು. ಸಮಾರಂಭವು ಸಹಕಾರ ಕ್ಷೇತ್ರದ ಕಾರ್ಯಕರ್ತರಿಗೆ ಹೊಸ ಉತ್ಸಾಹ ತುಂಬಿದ ಸ್ಮರಣೀಯ ಕ್ಷಣವಾಗಿ ದಾಖಲಾಗಿದೆ.