
ಕಲಬುರಗಿ,ನ.26-ಭಾರತ ಚುನಾವಣಾ ಆಯೋಗದ ದಿನಾಂಕ:12-09-2025ರ ವೇಳಾಪಟ್ಟಿಗನುಗುಣವಾಗಿ ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ನವೆಂಬರ್ 25 ರಂದು (ಮಂಗಳವಾರ) ಕರಡು ಮತದಾರರ ಪಟ್ಟಿಯನ್ನು ಪ್ರಚುರಪಡಿಸಲಾಗಿದ್ದು, ಈ ಕರಡು ಮತದಾರರ ಪಟ್ಟಿಯಲ್ಲಿ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಸಂಬಂಧಪಟ್ಟ ಮತದಾರರು ಲಿಖಿತವಾಗಿ ಆಯಾ ಸಹಾಯಕ ಮತದಾರರ ನೋಂದಣಾಧಿಕಾರಿಗಳಿಗೆ 2025ರ ಡಿಸೆಂಬರ್ 10 ರೊಳಗಾಗಿ ಆಕ್ಷೇಪಣೆಯನ್ನು ಸಲ್ಲಿಸಬಹುದಾಗಿದೆ ಎಂದು ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರರ ನೋಂದಣಿ ಅಧಿಕಾರಿಗಳು ಮತ್ತು ಚುನಾವಣಾಧಿಕಾರಿಗಳು ಆದ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಜಹೀರಾ ನಸೀಮ ಅವರು ತಿಳಿಸಿದ್ದಾರೆ.
ಸದರಿ ಕರಡು ಮತದಾರರ ಪಟ್ಟಿಯ ಭೌತಿಕ ಪ್ರತಿಯು ಸಂಬಂಧಪಟ್ಟ ಕ್ಷೇತ್ರದ ವ್ಯಾಪ್ತಿಯ ಎಲ್ಲಾ ಸಹಾಯಕ ಮತದಾರರ ನೋಂದಣಾಧಿಕಾರಿಗಳಾದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ, ಆಯುಕ್ತರು ಮಹಾನಗರ ಪಾಲಿಕೆ ಹಾಗೂ ತಹಸೀಲ್ದಾರ ಕಚೇರಿಗಳಲ್ಲಿ ಲಭ್ಯವಿದ್ದು, ಮತದಾರರು ಪರಿಶೀಲಿಸಿಕೊಳ್ಳಬಹುದಾಗಿದೆ. ಇದನ್ನು ಹೊರತುಪಡಿಸಿ ಸರ್ಕಾರದ ಅಧಿಕೃತ ಅಂರ್ತಜಾಲದಲ್ಲಿಯೂ ಸಹ ಮಾಹಿತಿಗಾಗಿ ಲಭ್ಯವಿದ್ದು, ಇದನ್ನು ಮತದಾರರು ಅವಲೋಕಿಸಬಹುದಾಗಿದೆ.
ಇದೊಂದು ನಿರಂತರ ನೋಂದಣಿ ಪ್ರಕ್ರಿಯೆಯಾಗಿರುವ ಹಿನ್ನೆಲೆಯಲ್ಲಿ ಅರ್ಹ ಮತದಾರರು ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕದವರೆಗೂ ಅವಶ್ಯಕ ದಾಖಲೆಗಳೊಂದಿಗೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಅವಕಾಶವಿರುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

























