Home ಜಿಲ್ಲೆ ಜಾನಪದ ಕಲಾವಿದ ದೇವದಾಸ ಚಿಮಕೋಡ್‍ಗೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ

ಜಾನಪದ ಕಲಾವಿದ ದೇವದಾಸ ಚಿಮಕೋಡ್‍ಗೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ

ಬೀದರ್: ಗ್ರಾಮೀಣ ಸೊಗಡಿನ ಜಾನಪದ ಗಾಯನ, ಸುಗ್ಗಿ ಕುಣಿತ ಹಾಗೂ ಸಾಂಪ್ರದಾಯಿಕ ಕಲಾಪ್ರಕಾರಗಳ ಉಳಿವು ಮತ್ತು ಬೆಳವಣಿಗೆಗೆ ನಿರಂತರ ಶ್ರಮಿಸುತ್ತಿರುವ ಜಿಲ್ಲೆಯ ಹಿರಿಯ ಜಾನಪದ ಕಲಾವಿದ ದೇವದಾಸ ಚಿಮಕೋಡ್ ಅವರು ಕರ್ನಾಟಕ ಜಾನಪದ ಅಕಾಡೆಮಿಯ ಪ್ರಸಕ್ತ ಸಾಲಿನ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಬೀದರ್ ತಾಲ್ಲೂಕಿನ ಚಿಮಕೋಡ್ ಗ್ರಾಮದಲ್ಲಿ 1970ರ ಜೂನ್ 1ರಂದು ಕೃಷಿಕ ದಂಪತಿ ಹಣಮಂತ ಹಾಗೂ ನರಸಮ್ಮ ಅವರ ಪುತ್ರನಾಗಿ ಜನಿಸಿದ ದೇವದಾಸ ಅವರು ಬಾಲ್ಯದಿಂದಲೇ ಗ್ರಾಮೀಣ ಪರಿಸರದಲ್ಲಿ ಜಾನಪದ ಸಂಸ್ಕøತಿಯ ಪ್ರಭಾವಕ್ಕೆ ಒಳಗಾಗಿ ಕಲೆಯತ್ತ ಒಲವು ಬೆಳೆಸಿಕೊಂಡರು. ಜಾನಪದ ಗೀತೆಗಳ ಗಾಯನದೊಂದಿಗೆ ಸುಗ್ಗಿ ಕುಣಿತ, ತಮಟೆ ಹಾಗೂ ಹಲಗೆ ಬಾರಿಸುವ ಕಲೆಯಲ್ಲಿ ಪರಿಣತಿ ಗಳಿಸಿದ್ದಾರೆ.
ಜಾನಪದ ಕಲೆಯನ್ನೇ ಬದುಕಿನ ಭಾಗವಾಗಿಸಿಕೊಂಡಿರುವ ದೇವದಾಸ ಅವರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಒಂದು ಸಾವಿರಕ್ಕೂ ಅಧಿಕ ಜಾನಪದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಅಲ್ಲದೆ, ಯುವ ಕಲಾವಿದರಿಗೆ ತಮಟೆ ಮತ್ತು ಹಲಗೆ ಬಾರಿಸುವ ತರಬೇತಿ ನೀಡುವ ಮೂಲಕ ಸಾಂಪ್ರದಾಯಿಕ ಕಲೆಯ ಸಂರಕ್ಷಣೆ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಹೆಸರಾಂತ ಜಾನಪದ ಕಲಾವಿದರಾದ ಅಪ್ಪಗೆರೆ ತಿಮ್ಮರಾಜು, ಪಿಚ್ಚಳ್ಳಿ ಶ್ರೀನಿವಾಸ, ಮಂಜಮ್ಮ ಜೋಗತಿ, ಗೊಲ್ಲಹಳ್ಳಿ ಶಿವಪ್ರಸಾದ ಹಾಗೂ ಟಾಕಪ್ಪ ಟೂಕಪ್ಪ ಸೇರಿದಂತೆ ಹಲವು ಕಲಾವಿದರೊಂದಿಗೆ ವೇದಿಕೆ ಹಂಚಿಕೊಂಡು ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಹೈದರಾಬಾದ್ ನಿವಾಸದಲ್ಲಿ ಆಯೋಜಿಸಿದ್ದ ಜಾನಪದ ಉತ್ಸವದಲ್ಲಿಯೂ ಕಲಾ ಪ್ರದರ್ಶನ ನೀಡಿ ಮೆಚ್ಚುಗೆ ಗಳಿಸಿದ್ದಾರೆ.
ಆರಂಭದಲ್ಲಿ ಸಂಪೂರ್ಣ ಸಾಕ್ಷರತಾ ಕಲಾ ಜಾಥಾ ತಂಡದೊಂದಿಗೆ ರಾಜ್ಯದ ವಿವಿಧೆಡೆ ಸಂಚರಿಸಿ ಜನಜಾಗೃತಿ ಮೂಡಿಸಿದ್ದ ದೇವದಾಸ ಅವರು, ನಂತರ ಜಾನಪದ ಕಲಾಸೇವೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರು. ಗ್ರಾಮೀಣ ಜಾನಪದ ಸಂಸ್ಕೃತಿಯನ್ನು ಜೀವಂತವಾಗಿರಿಸುವ ನಿಟ್ಟಿನಲ್ಲಿ ಇಂದಿಗೂ ನಿರಂತರವಾಗಿ ಶ್ರಮಿಸುತ್ತಿದ್ದಾರೆ.
ಇವರ ಕಲಾಸೇವೆಯನ್ನು ಗುರುತಿಸಿ ಈ ಹಿಂದೆ ಸಾಕ್ಷರತಾ ಅನುಷ್ಠಾನ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಜಾನಪದ ಸಂಗೀತ ರತ್ನ ಪ್ರಶಸ್ತಿ, ಸಂಗೀತ ಗಂಗೋತ್ರಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಇದೀಗ ಕರ್ನಾಟಕ ಜಾನಪದ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಇವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿದೆ.
ಮಂಡ್ಯದಲ್ಲಿ ಪ್ರಶಸ್ತಿ ಪ್ರದಾನ: ಅಕ್ಟೋಬರ್ ತಿಂಗಳ ಅಂತ್ಯದಲ್ಲಿ ಮಂಡ್ಯದಲ್ಲಿ ನಡೆಯಲಿರುವ ಕರ್ನಾಟಕ ಜಾನಪದ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದೇವದಾಸ ಚಿಮಕೋಡ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು 25 ಸಾವಿರ ನಗದು, ಸ್ಮರಣಿಕೆ ಹಾಗೂ ಪ್ರಮಾಣಪತ್ರ ಒಳಗೊಂಡಿದೆ ಎಂದು ಅಕಾಡೆಮಿ ಮೂಲಗಳು ತಿಳಿಸಿವೆ.