Home ಜಿಲ್ಲೆ ಶ್ರೀಶೈಲ ಪಾದಯಾತ್ರೆ ಭಕ್ತರಿಗೆ ಕೊಣ್ಣೂರಲ್ಲಿ ಕರೀಸಿದ್ದೇಶ್ವರ ಆಟೋ ರಿಕ್ಷಾ ಯುನಿಯನ್ ಸೇವೆ

ಶ್ರೀಶೈಲ ಪಾದಯಾತ್ರೆ ಭಕ್ತರಿಗೆ ಕೊಣ್ಣೂರಲ್ಲಿ ಕರೀಸಿದ್ದೇಶ್ವರ ಆಟೋ ರಿಕ್ಷಾ ಯುನಿಯನ್ ಸೇವೆ

ಸಂಜೆ ವಾಣಿ ವಾರ್ತೆ
ಜಮಖಂಡಿ:ಮಾ.೫: ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಕರೀಸಿದ್ದೇಶ್ವರ ಆಟೋ ರಿಕ್ಷಾ ಯುನಿಯನ್ ವತಿಯಿಂದ ಆಂಧ್ರ ಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಜಮಖಂಡಿ ತಾಲೂಕಿನಿಂದ ಪಾದಯಾತ್ರೆ ಮೂಲಕ ತೆರಳುತ್ತಿದ್ದ ಭಕ್ತರಿಗೆ ಎಳನೀರು, ತಂಪು ಪಾನೀಯಗಳು ಸೇರಿದಂತೆ ವಿವಿಧ ಪ್ರಸಾದ ವಿತರಣೆ ಮಾಡಿ ಮಾನವೀಯ ಸೇವೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಆಟೋ ರಿಕ್ಷಾ ಯುನಿಯನ್ ಅಧ್ಯಕ್ಷ ಆನಂದ ಮೇತ್ರಿ ಹಾಗೂ ಪ್ರಮುಖರಾದ ಹಣಮಂತ ಮೆಳ್ಳಿಗೇರಿ ಮಾತನಾಡಿ, “ನಮ್ಮ ಯುನಿಯನ್ ಹಾಗೂ ನಮ್ಮ ಗ್ರಾಮದ ಅನ್ನಪೂರ್ಣೇಶ್ವರಿ ಹೋಟೆಲ್ ಮಾಲಿಕ ಮುದಿಯಪ್ಪ ಮರನೂರ ಅವರು ಕಳೆದ ೧೩ ವರ್ಷಗಳಿಂದ ನಿರಂತರವಾಗಿ ಸಾವಿರಾರು ಭಕ್ತರಿಗೆ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಭಕ್ತರಿಗೆ ನೆರವಾಗುವುದು ನಮ್ಮ ಧ್ಯೇಯವಾಗಿದೆ,” ಎಂದು ಹೇಳಿದರು.
ಭಕ್ತರಿಗೆ ಎಳನೀರು ಸೇವೆ ಸಲ್ಲಿಸಿದ ಮುದಿಯಪ್ಪ ಮರನೂರ ಅವರು ಸಹ ಮಾತನಾಡಿ, ಪಾದಯಾತ್ರೆ ಮೂಲಕ ದೂರ ಪ್ರಯಾಣ ಮಾಡುವ ಭಕ್ತರಿಗೆ ಶಕ್ತಿ ನೀಡುವ ಉದ್ದೇಶದಿಂದ ಈ ಸೇವಾ ಕಾರ್ಯವನ್ನು ಕೈಗೊಂಡಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಟೋ ರಿಕ್ಷಾ ಯುನಿಯನ್ ಉಪಾಧ್ಯಕ್ಷ ಯಲ್ಲಪ್ಪ ಹೆಗ್ಗಣ್ಣವರ, ಕಾರ್ಯದರ್ಶಿ ರವಿ ಕಾಂಬಳೆ, ಖಜಾಂಚಿ ರವಿ ಈರಗಾರ, ಪ್ರಮುಖರಾದ ಸಂಜಯ ಮೇತ್ರಿ, ವಿಜಯ ಚಲವಾದಿ, ರಾಮಣ್ಣ ಗೋಣಿ, ಪರಸಪ್ಪ ಈರಗಾರ, ರಮೇಶ್ ಮುದೆನ್ನವರ, ಶಿವಾನಂದ ಹುಗಾರ, ಶೇಖರ ಬಜಂತ್ರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.