
ಬೀದರ :ಮೇ.೨೧:ನಗರದಲ್ಲಿ ಸೋಲಾರ್ ಅಳವಡಿಸದ ಮನೆಗಳಿಗೆ ನಿಯಮ ಉಲ್ಲಂಘಿಸಿ ವಿದ್ಯುತ್ ಸಂಪರ್ಕ ನೀಡಲಾಗಿದೆ ಎಂದು ಆರೋಪಿಸಿ, ಜೆಸ್ಕಾಂನ ಹಲವು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ)ದ ವತಿಯಿಂದ ಇಂದು ಜೆಸ್ಕಾಂ ನಿಗಮ ಕಾರ್ಯಾಲಯ ಕಲಬುರ್ಗಿಯ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.
ಬೀದರ ನಗರದಲ್ಲಿ ಹೊಸ ಮನೆಗಳಿಗೆ ಸೋಲಾರ್ ಅಳವಡಿಕೆ ಕಡ್ಡಾಯವಾಗಿದ್ದರೂ, ಅನೇಕ ಮನೆಗಳಿಗೆ ಯಾವುದೇ ಸೋಲಾರ್ ವ್ಯವಸ್ಥೆ ಇಲ್ಲದೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಕುರಿತು ಈಗಾಗಲೇ ಕಾರ್ಯನಿರ್ವಾಹಕ ಅಭಿಯಂತರರು ಹಾಗೂ ಅಧೀಕ್ಷಕ ಅಭಿಯಂತರರಿಗೆ ಹಲವು ಬಾರಿ ದೂರು ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ದೂರಲಾಗಿದೆ.
ಮಾಹಿತಿ ಹಕ್ಕು ಅಧಿನಿಯಮ ೨೦೦೫ರಡಿ ಬೀದರ ನಗರದ ಡಿ-೧ ರಿಂದ ಡಿ-೭ ವರೆಗಿನ ಹೊಸ ಮನೆಗಳ ಮಾಹಿತಿ, ಸೋಲಾರ್ ಅಳವಡಿಸಿದ ಮನೆಗಳ ಪಟ್ಟಿ, ಆರ್.ಆರ್. ಸಂಖ್ಯೆಗಳು ಹಾಗೂ ಭಾವಚಿತ್ರಗಳನ್ನು ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಜೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಲು ರೂ.೨೧,೪೦,೬೦೦ ಶುಲ್ಕ ಪಾವತಿಸುವಂತೆ ಸೂಚಿಸಿರುವುದು ಸಾರ್ವಜನಿಕರನ್ನು ದಾರಿ ತಪ್ಪಿಸುವ ಪ್ರಯತ್ನವಾಗಿದೆ ಎಂದು ಆರೋಪಿಸಲಾಗಿದೆ.
ಈ ಕುರಿತು ಜಿಲ್ಲಾದ್ಯಂತ ಪ್ರತಿಭಟನೆ ನಡೆಸಿದರೂ ಯಾವುದೇ ಕ್ರಮ ಕೈಗೊಳ್ಳದಿರುವುದು, ಸಂಬAಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಭ್ರಷ್ಟಾಚಾರದಲ್ಲಿ ತೊಡಗಿರುವುದನ್ನು ಮೇಲ್ನೋಟಕ್ಕೆ ತೋರಿಸುತ್ತಿದೆ ಎಂದು ಮನವಿದಾರರು ತಿಳಿಸಿದ್ದಾರೆ.
ಹೀಗಾಗಿ, ಅಧೀಕ್ಷಕ ಅಭಿಯಂತರರು (ವಿ) ಕಾರ್ಯ ಮತ್ತು ಪಾಲನೆ ವೃತ್ತ ಜೆಸ್ಕಾಂ ಬೀದರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ವಿ) ಜೆಸ್ಕಾಂ ಬೀದರ, ಕಾರ್ಯನಿರ್ವಾಹಕ ಅಭಿಯಂತರರು (ವಿ) ಜೆಸ್ಕಾಂ ಬೀದರ, ಸಂಬAಧಪಟ್ಟ ಜೆ.ಇ. ಹಾಗೂ ಗುತ್ತಿಗೆದಾರರ ವಿರುದ್ಧ ಸಮಗ್ರ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ಒಂದು ವಾರದೊಳಗೆ ಕ್ರಮ ಕೈಗೊಳ್ಳದಿದ್ದಲ್ಲಿ ಜೆಸ್ಕಾಂ ಕಲಬುರ್ಗಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ)ದ ಜಿಲ್ಲಾಧ್ಯಕ್ಷರಾದ ಚರಣಜೀತ ಆಣದೂರೆ, ಮಹಾಂತೇಶ ಗೌರಕರ್, ಸುಧೀರ ಕಾಂಬಳೆ, ಧಮ್ಮವೀರ ಗೊಡಬೊಲೆ, ಅಮಿತ್ ಜಿರೋಬೆ, ಧನರಾಜ ಸಾಂಗವಿಕರ್, ಸೋಪಾನ ಸಕ್ಪಾಲ, ಚಂದ್ರಕಾAತ ಹೆಗಡೆ, ಹಾಗೂ ಮಹ್ಮದ್ ಹಾಜಿ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.





















