ಐಸಿಎಸ್‌ಇ, ಸಿಬಿಎಸ್‌ಇ ಇತರ ಸಂಸ್ಥೆಗಳಲ್ಲಿ ಕನ್ನಡ ಕಲಿಕೆಗೆ ಕಡ್ಡಾಯ

ಬೆಳಗಾವಿ, ಡಿ.೧೬- ಐಸಿಎಸ್‌ಇ, ಸಿಬಿಎಸ್‌ಇ, ಹಾಗೂ ಇನ್ನೀತರ ಪಠ್ಯಕ್ರಮ ಬೋಧಿಸುವ ಶಿಕ್ಷಣ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷಾ ಕಲಿಕೆಗೆ ಒತ್ತು ನೀಡಲು ಸೂಚನೆ ನೀಡಿ ನಿರಂತರ ನಿಗಾ ವಹಿಸಲಾಗಿದೆ ಎಂದು ಶಾಲಾ ಶಿಕ್ಷಣ ಸಚಿವರಾದ ಎಸ್. ಮಧು ಬಂಗಾರಪ್ಪ ಮೇಲ್ಮನೆಯಲ್ಲಿ ತಿಳಿಸಿದರು.

ಪ್ರಶ್ನೊತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಎನ್ ರವಿಕುಮಾರ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಕನ್ನಡ ಭಾಷಾ ಕಲಿಕಾ ಅಧಿನಿಯಮವನ್ನು ಪಾಲಿಸದ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಪಟ್ಟ ಉಪ ನಿರ್ದೇಶಕರು (ಆಡಳಿತ) ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮುಖಾಂತರ ನೋಟಿಸ್ ಜಾರಿ ಮಾಡಿ, ಭಾಷಾ ಕಲಿಕಾ ಅಧಿನಿಯಮವನ್ನು ಅನುಷ್ಠಾನಗೊಳಿಸಲಾಗಿದ್ದು ಎಂದು ಹೇಳಿದರು.

ಕನ್ನಡ ಭಾಷಾ ಕಲಿಕಾ ಅಧಿನಿಯಮವನ್ನು ಪಾಲಿಸದ ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯ ಆಣೆಕಲ್ ತಾಲೂಕಿನ ದೊಮ್ಮಸಂದ್ರದ ದಿ ಬೆಂಗಳೂರು ಇಂಟೆರ್ ಶಾಲೆ ಮತ್ತು ದೊಡ್ಡಕಣ್ಣಹಳ್ಳಿಯ ಇನೋವೆಟೀವ್ ಶಾಲೆಯ ಮೇಲೆ ನಿಯಮದಂತೆ ದಂಡ ವಿಧಿಸಲಾಗಿದೆ ಎಂದು ಸಚಿವರು ವಿವರಿಸಿದರು.

ಕನ್ನಡ ಭಾಷಾ ಕಲಿಕಾ ಅಧಿನಿಯಮ ೨೦೧೫ನ್ನು ೨೦೧೫ನೇ ಸಾಲಿನಲ್ಲಿ ಜಾರಿಗೆ ತರಲಾಗಿದ್ದು, ಕನ್ನಡ ಭಾಷಾ ಕಲಿಕಾ ನಿಯಮಗಳನ್ನು ಶಿಕ್ಷಣ ಇಲಾಖೆಯ ವತಿಯಿಂದ ೨೦೧೭ನೇ ಸಾಲಿನಲ್ಲಿ ರೂಪಿಸಿ ಜಾರಿಗೊಳಿಸಲಾಗಿದೆ ಎಂದರು.

ರಾಜ್ಯದಲ್ಲಿ ಖಾಸಗಿ ಶಾಲೆಗಳನ್ನು ನೊಂದಣಿ ಮಾಡುವಾಗ, ಕನ್ನಡ ಭಾಷಾ ಕಲಿಕಾ ಅಧಿನಿಯಮದಂತೆ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಬೋಧಿಸಲು ಇಲಾಖಾ ನಿಯಮಗಳನ್ನು ರೂಪಿಸಲಾಗಿದ್ದು, ಅದರಂತೆ ಷರತ್ತುಗಳಿಗೆ ಒಳಪಡಿಸಿ, ನೊಂದಣಿಯನ್ನು ನೀಡಲಾಗುತ್ತಿದೆ. ಖಾಸಗಿ ಶಾಲೆಗಳ ಮಾನ್ಯತೆ ನವೀಕರಣ ಮಾಡುವ ಸಂದರ್ಭದಲ್ಲಿಯೂ ಸಹ ಕನ್ನಡ ಭಾಷಾ ಕಲಿಕಾ ಅಧಿನಿಯಮದ ಷರತ್ತುಗಳಿಗೆ ಒಳಪಡಿಸಿ, ಮಾನ್ಯತೆಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯ ಪಠ್ಯಕ್ರಮವನ್ನು ಅನುಸರಿಸುತ್ತಿರುವ ಶಾಲೆಗಳು ಇತರ ಪಠ್ಯಕ್ರಮಕ್ಕೆ ಸಂಯೋಜನೆ ಹೊಂದಲು ನಿರಾಕ್ಷೇಪಣ ಪತ್ರಕ್ಕೆ ಮನವಿ ಸಲ್ಲಿಸುವಾಗ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಬೋಧಿಸುವುದಾಗಿ ಮುಚ್ಚಳಿಕೆ ಪತ್ರ ಸಲ್ಲಿಸಿ, ಕನ್ನಡ ಕಲಿಕಾ ಅಧಿನಿಯಮವನ್ನು ಪಾಲಿಸುವುದಾಗಿ ಪ್ರಮಾಣಿಕರಿಸಿದಲ್ಲಿ ಮಾತ್ರ, ಸದರಿ ಶಾಲೆಗಳಿಗೆ ಕನ್ನಡ ಭಾಷಾ ಕಲಿಕಾ ಅಧಿನಿಯಮದ ಷರತ್ತುಗಳಿಗೆ ಒಳಪಡಿಸಿ, ನಿರಾಕ್ಷೇಪಣ ಪತ್ರ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.