ಸಂಜೆವಾಣಿ ವಾರ್ತೆ,
ವಿಜಯಪುರ,ಸೆ.೨೮: ಕನ್ನಡ ಭಾಷೆಗೆ ಅತ್ಯಂತ ಗಟ್ಟಿಯಾದ ಇತಿಹಾಸವಿದ್ದು, ಕನ್ನಡದ ಈ ಪವಿತ್ರ ಮಣ್ಣಿನಲ್ಲಿ ಜನಿಸಿದ ನಾವು ನೀವೆಲ್ಲರೂ ನಿಜಕ್ಕೂ ಧನ್ಯರು ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅಭಿಪ್ರಾಯಪಟ್ಟರು.
ಶನಿವಾರ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಹಾಗೂ ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಕೃಷಿ ಸಂಘ ಕೃಷಿ ಮಹಾವಿದ್ಯಾಲಯ ವಿಜಯಪುರ ಇವರ ಸಹಯೋಗದಲ್ಲಿ ನಗರದಲ್ಲಿ ಜರುಗಿದ ದಾಸ ಸಾಹಿತ್ಯದ ಚಿಂತನಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ವಚನ ಸಾಹಿತ್ಯದ ನಂತರದಲ್ಲಿ ಇಡೀ ಕನ್ನಡ ನಾಡಿಗೆ ಕೀರ್ತನೆಗಳ ಮೂಲಕ ಕನ್ನಡ ನಾಡು ನುಡಿಯನ್ನು ಬೆಳಗಿ ಹೋದ ದಾಸವರೇಣ್ಯರು ನೀಡಿದ ಸಂದೇಶಗಳು ಇಂದು ನಮಗೆಲ್ಲ ದಾರಿದೀಪವಾಗಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷಿ ಮಹಾವಿದ್ಯಾಲಯದ ವಿದ್ಯಾಧಿಕಾರಿ ಅಶೋಕ ಸಜ್ಜನ ಅವರು ಮಾತನಾಡಿ, “ದಾಸ ಸಾಹಿತ್ಯ ಬೆಳೆದು ಬಂದ ದಾರಿ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಮುತ್ತಗಿಯ ಶ್ರೀ ರಾಮ ನರಸಿಂಹ ಗುರುಕುಲದ ಸಂಸ್ಕೃತ ಪಂಡಿತ ನರಹರಿ ಆಚಾರ್ಯ ಶ್ರೀನಿವಾಸಾಚಾರ್ಯ ಜೋಶಿ ಉಪನ್ಯಾಸ ನೀಡುತ್ತ ಮಾತನಾಡಿ, ದಾಸರಾಗಬೇಕಾದರೆ ಸದಾ ಭಗವಂತನ ಸ್ಮರಣೆ ಮಾಡಿ ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳುವಂತೆ ಮಾಡುವ ಜಗತ್ತಿನ ಶ್ರೇಷ್ಠ ಸಾಹಿತ್ಯ ದಾಸ ಸಾಹಿತ್ಯ.ಕೀರ್ತನೆ, ಉಗಾಭೋಗ, ಸುಳಾದಿಗಳ ಮೂಲಕ ಜಗತ್ತಿಗೆ ಸಂದೇಶ ನೀಡಿದ ದಾಸವರೇಣ್ಯರ ಕೀರ್ತನೆಗಳು ವಿಶ್ವ ಸಾಹಿತ್ಯಕ್ಕೆ ನೀಡಿದ ಶ್ರೇಷ್ಠ ಕೊಡುಗೆ ಎಂದರು.
“ದಾಸ ಸಾಹಿತ್ಯ ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಬನಹಟ್ಟಿಯ ವಿಶ್ರಾಂತ ಪ್ರಾಚಾರ್ಯ ಎಸ್.ಎಂ. ಶೇಖ ಮಾತನಾಡಿ, ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಕನ್ನಡ ಸಾಹಿತ್ಯದ ಎರಡು ಕಣ್ಣುಗಳಿದ್ದಂತೆ. ದಾಸರ ಕೀರ್ತನೆಗಳ ಮೂಲಕ ಸಾಮಾಜಿಕ ಸಾಮರಸ್ಯ, ಭಕ್ತಿ ಭಾವದ ಬೀಜ ಬಿತ್ತುವ ಮೂಲಕ ನಮ್ಮಲ್ಲಿಯ ಅಜ್ಞಾನವನ್ನು ಕಿತ್ತೊಗೆಯುವಲ್ಲಿ ದಾಸ ಸಾಹಿತ್ಯದ ಕೊಡುಗೆ ಅಪಾರ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಬಿ.ಎಂ.ಪಟೇಲ ಪಾಂಡು, ಕಸಾಪ ಕಾರ್ಯಕಾರಿಣಿ ಪ್ರತಿನಿಧಿ ಜಿ. ಕೆ. ತಳವಾರ, ಬಾಗಲಕೋಟೆ ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಕಲಬುರ್ಗಿ ಕಸಾಪ ಅಧ್ಯಕ್ಷ ತೇಗಲತಿಪ್ಪಿ , ವಿಜಯಪುರ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಮಾತನಾಡಿದರು.
ಕಸಾಪ ಗೌರವ ಕೋಶಾಧ್ಯಕ್ಷ ಅಭಿಷೇಕ ಚಕ್ರವರ್ತಿ ಸ್ವಾಗತಿಸಿ ಗೌರವಿಸಿದರು. ಗೌರವ ಕಾರ್ಯದರ್ಶಿ ಡಾ. ಮಾಧವ ಗುಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಲ್ಪಾ ಭಸ್ಮೆ ನಿರೂಪಿಸಿದರು. ಜಗದೀಶ ಬೋಳಸೂರ ವಂದಿಸಿದರು.
ಕಾರ್ಯಕ್ರಮದಲ್ಲಿ ಜಿ.ಎಸ್. ಬಳ್ಳೂರ, ರಾಜಕುಮಾರ ಜೊಲ್ಲೆ, ಸಿದ್ರಾಮಯ್ಯ ಲಕ್ಕುಂಡಿಮಠ, ಮಹ್ಹದಗೌಸ ಹವಾಲ್ದಾರ, ಸುರೇಶ ಚಾವಲರ, ಸಂಗಮೇಶ ಜಂಗಮಶೆಟ್ಟಿ, ಸಿದ್ಧರಾಮ ಬಿರಾದಾರ, ಮಹಮ್ಮದ ವಾಲೀಕಾರ, ಕೃಷಿ ಮಹಾವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿ ವರ್ಗ ಮತ್ತು ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
























