ವಿಶ್ವದಲ್ಲೇ ಶ್ರೇಷ್ಠ ಭಾಷೆ ಕನ್ನಡ: ಡಾ.ರೇವಣಸಿದ್ಧ ಶಿವಾಚಾರ್ಯ

ಕಲಬುರಗಿ,ನ.23-70ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 29 ಮಂದಿ ಸಾಧಕರಿಗೆ ಜಿಲ್ಲಾ ಮಟ್ಟದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ, ಕವಿಗೋಷ್ಠಿ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ಇಲ್ಲಿನ ನಗರದ ಅನ್ನಪೂರ್ಣ ಕ್ರಾಸ್ ಸಮೀಪದಲ್ಲಿರುವ ಕಲಾಮಂಡಳ ಸಭಾಗೃಹದಲ್ಲಿ ಜರುಗಿತು.
ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀನಿವಾಸ ಸರಡಗಿಯ ಹಿರೇಮಠ ಸಂಸ್ಥಾನದ ಡಾ.ರೇವಣಸಿದ್ಧ ಶಿವಾಚಾರ್ಯರು, ಎಲ್ಲ ಭಾಷೆಗಳಲ್ಲೂ ಅತ್ಯಂತ ಶ್ರೇಷ್ಟವಾದ ಭಾಷೆ ಎಂದರೆ ಕನ್ನಡ, ಇದಕ್ಕೆ ತನ್ನದೇಯಾದ ಇತಿಹಾಸ ಹೊಂದಿದೆ, ಇದಕ್ಕೆ ಮೀರಿಸುವ ಭಾಷೆ ಯಾವುದೂ ಇಲ್ಲ ಎಂದು ಹೇಳಿದರು.
ಕನ್ನಡಕ್ಕಾಗಿ, ಕನ್ನಡ ನೆಲಕ್ಕಾಗಿ, ಮಣ್ಣಿಗಾಗಿ ಬಹಳಷ್ಟು ಕವಿ, ಚಿಂತಕರು ,ಸಾಹಿತಿಗಳು ಹೋರಾಟ ಮಾಡಿದ್ದಾರೆ, ಕನ್ನಡ ಭಾಷೆ ಶ್ರೀಮಂತ ಭಾಷೆಗಳಲ್ಲಿ ಮೊದಲ ಸಾಲಿನಲ್ಲಿ ಬರುತ್ತದೆ, ಕನ್ನಡ ಉಳಿಸುವ ಹಾಗೂ ಬೆಳೆಸುವ ಕೆಲಸ ಸಾಹಿತಿಗಳದ್ದಷ್ಟೇ ಅಲ್ಲ, ನಮ್ಮ ನಿಮ್ಮೆಲ್ಲರ ಕೆಲಸವಾಗಿದೆ ಎಂದು ತಿಳಿಸಿದರು.
ಕನ್ನಡ ಉಳಿಸಿ ಬೆಳೆಸುವಂತಹ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕೆಲಸ ಬಿ.ಎಚ್.ನಿರಗುಡಿ ಅವರು ಕೆಲಸ ಮಾಡುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಕನ್ನಡದ ಇನ್ನೂ ಹೆಚ್ಚಿನ ಕೆಲಸ ಮಾಡಲು ಕನ್ನಡ ಸಾಹಿತ್ಯ ಪರಿಷತ್ತಿಗೆ ಅವಕಾಶ ಮಾಡಿಕೊಟ್ಟರೆ ನಾಡಿನಲ್ಲಿ ಮತ್ತಷ್ಟು ಸಾಹಿತಿಕ ಕಾರ್ಯಕ್ರಮಗಳು ನಡೆಯಲಿವೆ. ಅವರಿಗೆ ಕನ್ನಡದ ತೇರು ಎಳೆಯುವ ಅವಕಾಶ ಸಿಗಲಿ. ಯಾವುದೇ ಫಲಾಪೇಕ್ಷೆ ಇಲ್ಲದೆ ಕಾರ್ಯಕ್ರಮ ನಡೆಸುವ ನಿರಗುಡಿ ಅವರು ಎಲ್ಲರಿಗೆ ಪ್ರೇರಣೆಯಾಗಲಿ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆಕೆಆರ್ ಟಿಸಿ ಅಧ್ಯಕ್ಷ ಅರುಣಕುಮಾರ ಎಂ.ವೈ. ಪಾಟೀಲ್, ನಾಡಿನಾದ್ಯಂತ ನಿರಂತರವಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಆಗುತ್ತೀರುವದು ಸಂತಸವಾಗಿದೆ. ಕನ್ನಡ ನಮ್ಮೆಲ್ಲರ ಅನ್ನದ ಭಾಷೆಯಾಗಿದ್ದು ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಒಳಗಾಗಬೇಡಿ. ಕನ್ನಡ ಭಾಷೆ ಉಳಿಸಿ ಬೆಳೆಸಲು ನಾವು ನೀವು ಎಲ್ಲರೂ ಶ್ರಮಿಸಬೇಕಾಗಿದೆ ಎಂದು ಹೇಳಿದರು.
ರೈತ ಹೋರಾಟಗಾರ ದಯಾನಂದ ಪಾಟೀಲ್, ಡಾ. ಮಲ್ಲಿಕಾರ್ಜುನ್ ಯಡ್ರಾಮಿ ರಚಿತದ ‘ಅಂತರಂಗದ ಪ್ರಣತಿ’ ಎಂಬ ಪುಸ್ತಕವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ಕಸಾಪ ಮಾಜಿ ಅಧ್ಯಕ್ಷ ಮಹಿಪಾಲರೆಡ್ಡಿ ಬಿಡುಗಡೆಗೊಂಡ ಪುಸ್ತಕ ಕುರಿತು ತುಂಬಾ ಅದ್ಭುತವಾಗಿ ಮಾತನಾಡುತ್ತಾ ತನಗ ಪ್ರಕಾರದ ಜಿಲ್ಲೆಯ ಪ್ರಥಮ ವಿಶೇಷ ಕೃತಿ ಇದಾಗಿದೆ, ಬಿ.ಎಚ್ ನಿರಗುಡಿ ಅವರು ಮುಂದಿನ ದಿನಗಳಲ್ಲಿ ‘ಕೃಷಿ ಸಾಹಿತ್ಯ ಸಮ್ಮೇಳನ’ ಆಯೋಜಿಸುವರು ಎಂದು ಭರವಸೆ ನೀಡಿ ಮಾತನಾಡಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಕಲ್ಯಾಣರಾವ ಪಾಟೀಲ್ ಅವರು ಪ್ರಶಸ್ತಿ ವಿತರಿಸಿ, ಮಾತನಾಡಿದರು.
ಪ್ರತಿಷ್ಠಾನದ ಅಧ್ಯಕ್ಷ, ಪುಸ್ತಕ ಪ್ರಾಧಿಕಾರದ ಸದಸ್ಯ ಬಿ.ಎಚ್.ನಿರಗುಡಿ ಪ್ರಸ್ತಾವಿಕವಾಗಿ ಮಾತನಾಡಿ, ಪ್ರತಿಷ್ಠಾನದ ಅಡಿಯಲ್ಲಿ ಪ್ರತಿವರ್ಷ ಕಲಬುರಗಿಯಲ್ಲಿ ಸಾಹಿತ್ಯ, ಸಾಂಸ್ಕೃತಿಕ, ಪುಸ್ತಕ ಬಿಡುಗಡೆ, ಕವಿಗೋಷ್ಠಿ, ವಿಚಾರ ಸಂಕಿರಣ,ನಾಟಕ ಪ್ರದರ್ಶನ ಪುಸ್ತಕ ಸಂತೆ ಹೀಗೆ ವಿವಿಧ ಹಲವಾರು ಕನ್ನಡದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕನ್ನಡ ಕಟ್ಟುವ ಕೆಲಸ ಮಾಡಲಾಗುತ್ತಿದೆ. ಈ ವರ್ಷವೂ 29ಕ್ಕೂ ಹೆಚ್ಚು ಸಾಧಕರನ್ನು ಗುರುತಿಸಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ಕವಿಗೋಷ್ಠಿ ಕಾರ್ಯಕ್ರಮದಲ್ಲಿ 10ಜನ ಕವಿಗಳು ನಾಡು, ನುಡಿ, ಇತರ ವಿಷಯಗಳ ಬಗ್ಗೆ ತಮ್ಮ ಕವನಗಳನ್ನು ವಾಚಿಸುವ ಮೂಲಕ ಗಮನ ಸೆಳೆದರು.
ಕಾಂಗ್ರೆಸ್ ಮುಖಂಡರಾದ ಕಿಶೋರ ಗಾಯಕ್ವಾಡ್, ಡಾ.ಎಸ್.ಎಸ್.ಗುಬ್ಬಿ, ಮಲ್ಲಿಕಾರ್ಜುನ್ ಯಡ್ರಾಮಿ ಮತ್ತಿತರರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅಣ್ಣಾರಾಯ ಶೆಳ್ಳಗಿ, ನಾಗಪ್ಪ ಗೋಗಿ, ಶಾಂತಾ ಪ್ರಸ್ಥಾಪುರ್, ಜಿ.ಎಸ್.ಮಾಲಿಪಾಟೀಲ್, ಸರಸ್ವತಿ ಅಪ್ಪಾಸಾಬ ತೀರ್ಥೆ, ಸುನೀಲ್ ಮಾನ್ಪಡೆ, ದಸ್ತಗೀರ ನದಾಫ್, ಮಲ್ಲಯ್ಯ ಜಳಕಿಮಠ, ಡಾ. ಕೆ ಗಿರಿಮಲ್, ಡಾ. ವಿ ಬಿ ಮಠಪತಿ, ಲಕ್ಷ್ಮಿಕಾಂತ ಜೋಳದ ,ಸಂಗಣ್ಣ ಅಲ್ಲಿ, ಮಲ್ಲಿಕಾರ್ಜುನ್ ಇಬ್ರಾಹಿಂಪುರ, ವಿಶ್ವನಾಥ ತೋಟ್ನಳ್ಳಿ ಸೇರಿದಂತೆ ಹಲವರನ್ನು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರೇವಣಸಿದ್ದಪ್ಪ ದುಕಾನ್, ಮಾಲಾ ಕಣ್ಣಿ, ರಾಜೇಂದ್ರ ಜಳಕಿ, ಶಿವಯ್ಯ ಮಠಪತಿ, ಬಾಬು ಜಾಧವ, ಪರಮಾನಂದ ಸರಸಂಬಿ, ರಾಹುಲ್ ಕಟ್ಟಿ ನಾಡು ನುಡಿ ಬಗ್ಗೆ ಕವನ ವಾಚಿಸಿದರು
ಸಾಹಿತಿ ಕೆ.ಗಿರಿಮಲ್ಲ ನಿರೂಪಿಸಿದರು. ಸೂರ್ಯಕಾಂತ್ ಪೂಜಾರಿ ಪ್ರಾರ್ಥನೆ ಮಾಡಿದರು. ಅಂಬಾರಾಯ ಕೋಣೆ ವಂದಿಸಿದರು