Home ಜಿಲ್ಲೆ ಕನ್ನಡ ನಮ್ಮ ಸಂಸ್ಕೃತಿ ಮತ್ತು ಅಸ್ಮಿತೆಯ ಪ್ರತೀಕ: ಮಲ್ಲಪ್ಪ ಸಂಕೀನ್

ಕನ್ನಡ ನಮ್ಮ ಸಂಸ್ಕೃತಿ ಮತ್ತು ಅಸ್ಮಿತೆಯ ಪ್ರತೀಕ: ಮಲ್ಲಪ್ಪ ಸಂಕೀನ್

ಯಾದಗಿರಿ: ಕನ್ನಡವು ಕೇವಲ ಸಂವಹನದ ಮಾಧ್ಯಮವಲ್ಲ, ಅದು ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಅಸ್ಮಿತೆಯ ಪ್ರತೀಕವಾಗಿದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಹೇಳಿದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ರವಿವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಕನ್ನಡ ನಾಡಿನ ಏಕೀಕರಣದ ಹೋರಾಟ ಹಾಗೂ ಶ್ರೀಮಂತ ಸಾಹಿತ್ಯ ಪರಂಪರೆ ನಮ್ಮ ನಾಡಿನ ಹೆಮ್ಮೆಯಾಗಿದೆ. ಜಾಗತೀಕರಣದ ಇಂದಿನ ಯುಗದಲ್ಲಿ ಇತರ ಭಾಷೆಗಳನ್ನು ಕಲಿಯುವುದರ ಜೊತೆಗೆ ಮಾತೃಭಾಷೆಯ ಬೇರುಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಿದೆ ಎಂದರು.
ಕನ್ನಡದ ಮೇಲಿನ ಪ್ರೀತಿ ಕೇವಲ ನವೆಂಬರ್ ತಿಂಗಳ ಆಚರಣೆಗೆ ಸೀಮಿತವಾಗಬಾರದು. ನಮ್ಮ ದೈನಂದಿನ ಮಾತುಕತೆ, ಶಿಕ್ಷಣ, ತಂತ್ರಜ್ಞಾನ ಹಾಗೂ ಮುಂದಿನ ಪೀಳಿಗೆಯ ಬದುಕಿನಲ್ಲಿ ಕನ್ನಡ ಭಾಷೆ ಸದಾ ಜೀವಂತವಾಗಿರಬೇಕು ಎಂದು ಕರೆ ನೀಡಿದರು.
ಒಂದು ಕಾಲದಲ್ಲಿ ಕನ್ನಡ ಮಾತನಾಡುವ ಜನರು ವಿವಿಧ ಆಡಳಿತ ಪ್ರಾಂತ್ಯಗಳಲ್ಲಿ ಹಂಚಿಹೋಗಿದ್ದರು. ಕನ್ನಡಿಗರನ್ನು ಒಂದೇ ರಾಜ್ಯದ ಅಡಿಯಲ್ಲಿ ಒಗ್ಗೂಡಿಸಬೇಕೆಂಬ ಕನಸಿಗೆ ಅನೇಕ ಹೋರಾಟಗಾರರು, ಸಾಹಿತಿಗಳು, ಚಿಂತಕರು ಹಾಗೂ ಕನ್ನಡಾಭಿಮಾನಿಗಳು ಶ್ರಮಿಸಿದ್ದಾರೆ. ಕನ್ನಡ ಕುಲಪುರೋಹಿತ ಆಲೂರು ವೆಂಕಟರಾಯರು ಸೇರಿದಂತೆ ಅನೇಕ ಮಹನೀಯರು ಕನ್ನಡಿಗರಲ್ಲಿ ಏಕತೆಯ ಅರಿವು ಮೂಡಿಸಲು ಶ್ರಮಿಸಿದರು ಎಂದು ಸ್ಮರಿಸಿದರು.
ಅವರ ಪರಿಶ್ರಮ ಹಾಗೂ ಕನ್ನಡಿಗರ ನಿರಂತರ ಹೋರಾಟದ ಫಲವಾಗಿ ೧೯೫೬ರ ನವೆಂಬರ್ ೧ರಂದು ವಿಶಾಲ ಮೈಸೂರು ರಾಜ್ಯ ಉದಯವಾಯಿತು. ನಂತರ ೧೯೭೩ರ ನವೆಂಬರ್ ೧ರಂದು ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರ ನೇತೃತ್ವದಲ್ಲಿ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಇದು ಕೇವಲ ಭೂಪ್ರದೇಶಗಳ ವಿಲೀನವಲ್ಲ, ಕನ್ನಡ ಭಾಷೆಯ ಮೂಲಕ ಬೆಸೆದುಕೊಂಡ ಜನರ ಭಾವನೆಗಳ ಐತಿಹಾಸಿಕ ಸಂಗಮವಾಗಿದೆ ಎಂದು ಹೇಳಿದರು.
ನಾಡಿನ ಏಕೀಕರಣಕ್ಕಾಗಿ ಶ್ರಮಿಸಿದ ಮಹನೀಯರನ್ನು ಸ್ಮರಿಸುವುದರ ಜೊತೆಗೆ ಅವರ ಆಶಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಹನುಮಂತ ಪಿ., ಪತ್ರಕರ್ತರಾದ ರವಿಕುಮಾರ ನರಬೋಳಿ, ಮಹೇಶ್ ಗಣೇರ್, ಭೀರಲಿಂಗಪ್ಪ ಕಿಲ್ಲನಕೇರಾ, ಸುಧೀರ್ ಕೋಟೆ ಹಾಗೂ ಆಂಜನೇಯ ದೇವರಮನಿ ಉಪಸ್ಥಿತರಿದ್ದರು.