
ತುಮಕೂರು, ಡಿ. ೧೭- ಎಲ್ಲರೂ ಒಟ್ಟಾಗಿ ಕನ್ನಡ ಭಾಷೆ, ನಾಡಿಗೆ ವಿಶೇಷ ಗೌರವ ಸಲ್ಲಿಸುವ ನಾಡ ಹಬ್ಬವಾಗಿ ಕನ್ನಡ ರಾಜ್ಯೋತ್ಸವ ಆಚರಿಸುತ್ತೇವೆ. ಎಲ್ಲ ಜಾತಿ, ಧರ್ಮ, ಸಮುದಾಯಗಳನ್ನು ಒಗ್ಗೂಡಿಸುವ ಸಾಮರ್ಥ್ಯ ಕನ್ನಡ ಭಾಷೆಗಿದೆ ಎಂದು ಮಾಜಿ ಶಾಸಕ ಡಾ.ಎಸ್.ರಫಿಕ್ ಅಹ್ಮದ್ ಅಭಿಪ್ರಾಯಪಟ್ಟರು.
ನಗರದ ರಿಂಗ್ ರಸ್ತೆಯ ದಾನಾ ಪ್ಯಾಲೇಸ್ ವೃತ್ತದಲ್ಲಿ ಸುವರ್ಣ ಕರ್ನಾಟಕ ಕಾರ್ಮಿಕರ ರಕ್ಷಣಾ ಪರಿಷತ್ ವತಿಯಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ ಧ್ವಜವಂದನೆ ಸ್ವೀಕರಿಸಿ ಅವರು ಮಾತನಾಡಿದರು
ನಾಡಹಬ್ಬವನ್ನು ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದ ಮಹನೀಯರ ಸೇವೆ ಸ್ಮರಿಸುವ ಹಾಗೂ ಕನ್ನಡ ನಾಡು, ನುಡಿ ಉಳಿವು, ಬೆಳವಿಗೆ ಸಂಕಲ್ಪ ಮಾಡುವ ದಿನವಾಗಿ ಆಚರಿಸಬೇಕು. ಕರ್ನಾಟಕ ಮಾತ್ರವಲ್ಲದೆ, ದೇಶದ ಹಾಗೂ ವಿಶ್ವದ ವಿವಿಧೆಡೆ ಇರುವ ಕನ್ನಡಿಗರು ರಾಜ್ಯೋತ್ಸವವನ್ನು ಅಭಿಮಾನದಿಂದ ಆಚರಿಸುತ್ತಾರೆ ಎಂದರು.
ಎರಡೂವರೆ ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ದೊರಕಿವೆ. ಕನ್ನಡ ಭಾಷೆ, ನಾಡು ರಕ್ಷಣೆಗೆ ಎಲ್ಲರೂ ಬದ್ಧರಾಗಬೇಕು. ಆದರೂ ರಾಜ್ಯದ ಗಡಿ ಭಾಗಗಳಲ್ಲಿ ಭಾಷೆ, ನಾಡಿಗೆ ಧಕ್ಕೆಯಾಗುವಂತಹ ಪ್ರಕರಣಗಳು ನಡೆಯುತ್ತಿರುತ್ತವೆ. ಅಂತಹ ತೊಂದರೆಗಳಾದಾಗ ಕನ್ನಡಿಗರೆಲ್ಲಾ ಒಗ್ಗಟ್ಟಾಗಿ ಶಾಂತಿಯುವ ಹೋರಾಟ ಮಾಡಿ ನಾಡು, ನುಡಿಗೆ ನ್ಯಾಯ ದೊರಕಿಸುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಮಾಜಿ ಶಾಸಕ ಎಸ್.ಷಫಿ ಅಹಮದ್ ಮಾತನಾಡಿ, ಕನ್ನಡ ಭಾಷೆ, ನೆಲ, ಜಲದ ಬಗ್ಗೆ ಅಭಿಮಾನ ಮೆರೆಯಲು ರಾಜ್ಯೋತ್ಸವ ಎಲ್ಲರಿಗೂ ಪ್ರೇರಣೆಯಾಗಬೇಕು. ಕನ್ನಡ ಭಾಷೆಗೆ ದೊಡ್ಡ ಇತಿಹಾಸವಿದೆ. ಅದರದ್ದೇ ಆದ ವಿಶಿಷ್ಠತೆ ಇದೆ. ಪಾರ್ಲಿಮೆಂಟಿನಲ್ಲೂ ಕನ್ನಡ ಮಾತನಾಡುವ ಅವಕಾಶವಿದ್ದು, ಹಲವರು ಕನ್ನಡದಲ್ಲೇ ಮಾತನಾಡಿ ಭಾಷೆಯ ಕೀರ್ತಿ ಬೆಳಗಿದ್ದಾರೆ ಎಂದರು.
ನಾಡ ಹಬ್ಬದಂದು ಸಂಘ ಸಂಸ್ಥೆಗಳು ಸಮಾಜ ಸೇವಾ ಕಾರ್ಯಗಳನ್ನು ಮಾಡುವುದು ಮಾದರಿ ಕಾರ್ಯವಾಗಿದೆ. ಕನ್ನಡ ರಾಜ್ಯೋತ್ಸವ ಆಚರಣೆ ಶಾಂತಿ, ಸೌಹಾರ್ದತೆಯ ಸಂಕೇತವಾಗಿ ಆಚರಣೆಯಾಗಬೇಕು. ಶಾಂತಿ, ಸಹಬಾಳ್ವೆಯಿಂದ ಎಲ್ಲರೂ ಒಂದಾಗಿ ದೇಶವನ್ನು ಕಾಪಾಡಬೇಕು ಎಂದರು.
ಬೆಳ್ಳಿ ಬ್ಲಡ್ ಬ್ಯಾಂಕಿನ ಬೆಳ್ಳಿ ಲೋಕೇಶ್ ಮಾತನಾಡಿ, ರಕ್ತದಾನ ಶ್ರೇಷ್ಠವಾದ ದಾನ. ರಕ್ತವನ್ನು ಕೃತಕವಾಗಿ ಉತ್ಪಾದನೆ ಮಾಡಲು ಸಾಧ್ಯವಿಲ್ಲ. ರಕ್ತದ ಅವಶ್ಯಕತೆ ಇದ್ದಾಗ ದಾನಿಯಿಂದಲೇ ರಕ್ತ ಪಡೆಯಬೇಕು. ರಕ್ತದಾನಕ್ಕೆ ಜಾತಿಬೇಧವಿಲ್ಲ. ಸಾವಿನಲ್ಲಿರುವ ರೋಗಿಗೆ ಯಾವ ಜಾತಿ, ಧರ್ಮದ ರಕ್ತ ಎಂಬುದು ಇರುವುದಿಲ್ಲ. ಹೀಗಾಗಿ ಎಲ್ಲರೂ ಶಾಂತಿ, ಸೌಹಾರ್ದತೆಯಿಂದ ಬಾಳಬೇಕು. ರಾಜ್ಯೋತ್ಸವ ಅಂತಹ ಸೌಹಾರ್ದತೆಗೆ ನಾಂದಿಯಾಗಬೇಕು ಎಂದು ಹೇಳಿದರು.
ಇದರ ಅಂಗವಾಗಿ ರಕ್ತದಾನ ಶಿಬಿರ, ಶಾಲಾ ಮಕ್ಕಳಿಗೆ ನೋಟ್ ಪುಸ್ತಕ, ಬ್ಯಾಗ್ ವಿತರಣೆ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮೆಹಬೂಬ್ ಪಾಷಾ, ನಗರಪಾಲಿಕೆ ಮಾಜಿ ಸದಸ್ಯರಾದ ನದೀಂ ಪಾಷ, ಜೆ.ಕುಮಾರ್, ಇನಾಯತ್ ಉಲ್ಲಾ ಖಾನ್, ಸುವರ್ಣ ಕರ್ನಾಟಕ ಕಾರ್ಮಿಕರ ರಕ್ಷಣಾ ಪರಿಷತ್ ಜಿಲ್ಲಾಧ್ಯಕ್ಷ ಸಾದಿಕ್ ಪಾಷಾ, ಉಪಾಧ್ಯಕ್ಷ ಸುಹೇಲ್ ಪಾಷಾ, ಪ್ರಧಾನ ಕಾರ್ಯದರ್ಶಿ ಶಾಹಬಾಜ್, ಕಾರ್ಯದರ್ಶಿ ಇನಾಯತ್ ಉಲ್ಲಾ ಖಾನ್, ಖಜಾಂಚಿ ಜಗದೀಶ್, ಮುಖಂಡರಾದ ಅದೀಬ್ ಅಹ್ಮದ್, ಮಹಮದ್ ಅಲಿ, ಮೆಹಬೂಬ್ ಪಾಷಾ, ಇಮ್ರಾನ್, ಜವಾದ್ ಮತ್ತಿತರರು ಭಾಗವಹಿಸಿದ್ದರು.




























