Home ಜಿಲ್ಲೆ ಕಲಬುರಗಿ ಕನ್ನಡ ಕಂಪನಿ ನಾಟಕಗಳು: ಪ್ರಸ್ತುತಿ ಮತ್ತು ಪರಂಪರೆ

ಕನ್ನಡ ಕಂಪನಿ ನಾಟಕಗಳು: ಪ್ರಸ್ತುತಿ ಮತ್ತು ಪರಂಪರೆ

ಕಲಬುರಗಿ, ಫೆ 23: ಕಲಬುರಗಿ ನಾಟಕೋತ್ಸವ – 26 ರ ಅಂಗವಾಗಿ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರಂಗಭೂಮಿ ಸಂವಾದ ಕಾರ್ಯಕ್ರಮದಲ್ಲಿ ಕನ್ನಡ ಕಂಪನಿ ನಾಟಕಗಳು: ಪ್ರಸ್ತುತಿ ಮತ್ತು ಪರಂಪರೆ ಕುರಿತಂತೆ ಹಿರಿಯ ರಂಗಕರ್ಮಿ ಹಾಗೂ ನಟಿ ಬಿ ಜಯಶ್ರೀ ಅವರು ತಮ್ಮ ತಂಡದೊಂದಿಗೆ ಹಳೆಯ ನಾಟಕಗಳ ಹಾಡುಗಳೊಂದಿಗೆ ಪ್ರಸ್ತುತಿ ಪಡಿಸಿದ ಕಾರ್ಯಕ್ರಮ ವಿಶೇಷವಾಗಿತ್ತು.
ಕನ್ನಡದ ಕಂಪನಿ ನಾಟಕಗಳ ಪ್ರಖ್ಯಾತ ಹಾಡುಗಳು ಪ್ರಸ್ತುತಿಯೊಂದಿಗೆ ಅದರ ಇತಿಹಾಸ ಹಾಗೂ ಹಾಡಿನ ಸುತ್ತಾ ನಡೆದ ಘಟನೆಗಳನ್ನು ಮೆಲುಕು ಹಾಕುತ್ತ ಸಂವಾದದಲ್ಲಿ ಮಾತನಾಡಿದ ಅವರು ಹಳೆಯ ಕಾಲದಲ್ಲಿ ಗ್ರಾಮೀಣ ಭಾಗದಲ್ಲಿ ಕಲ್ಚರ್ ಹಾಗೂ ಅಗ್ರಿಕಲ್ಚರ್ ನಡುವಿನ ಸಂಬಂಧವನ್ನು ಮನ ಮುಟ್ಟುವಂತೆ ವಿವರಿಸಿದರು.
“ರಂಗಭೂಮಿ ಅಂದರೆ ಕೇವಲ ವೇದಿಕೆಯಲ್ಲ, ಅದೊಂದು ಜೀವಂತ ಸಂಸ್ಕøತಿ. ಕಂಪನಿ ನಾಟಕದ ಶಿಸ್ತು ಒಬ್ಬ ಕಲಾವಿದನನ್ನು ಮನುಷ್ಯನನ್ನಾಗಿ ಮಾಡುತ್ತದೆ.” ಎಂದು ಹೇಳಿದರು.
ಅಜ್ಜ ಗುಬ್ಬಿ ವೀರಣ್ಣನವರ ಕಾಲದ ರಂಗ ಸಜ್ಜಿಕೆ, ಶಿಸ್ತು ಮತ್ತು ಪ್ರೇಕ್ಷಕರನ್ನು ಆಕರ್ಷಿಸುತ್ತಿದ್ದ ಪರಿ ಹಾಗೂ ಹಾಡುಗಳನ್ನು ಕಟ್ಟುತ್ತಿದ್ದ ರೀತಿಯ ಕುರಿತು ಮಾತನಾಡಿದರು.
ಕಂಪನಿ ನಾಟಕಗಳ ಪರಂಪರೆಯ ಮುಂದುವರಿಕೆಯಾಗಿ ವೃತ್ತಿ ರಂಗಭೂಮಿಯ ಹಾಡುಗಾರಿಕೆ ಮತ್ತು ಅಭಿನಯದ ಶೈಲಿಯನ್ನು ಇಂದಿನ ತಲೆಮಾರಿಗೆ ತಮ್ಮ ‘ಸ್ಪಂದನ’ ತಂಡದ ಮೂಲಕ ಜೀವಂತವಾಗಿಡಲಾಗಿದೆ.
​​ಕಂಪನಿ ನಾಟಕಗಳ ಪ್ರಸ್ತುತಿ ಒಂದು ವಿಶೇಷ ಕಲೆ. ಅಲ್ಲಿ ಸಂಗೀತ, ನೃತ್ಯ ಮತ್ತು ಮಾತುಗಳ ಸಮ್ಮಿಲನವಿರುತ್ತದೆ.

​ಹಾಡುಗಾರಿಕೆಯ ವೈಭವವನ್ನು ನಾವು ಕಂಪನಿ ನಾಟಕಗಳಲ್ಲಿ ನೋಡಬಹುದಾಗಿದೆ. ಹಾಡುಗಳು ಕೇವಲ ಬಿಡುವಿನ ಸಂದರ್ಭವಲ್ಲ, ಅದು ಕಥೆಯನ್ನು ಮುನ್ನಡೆಸುವ ಶಕ್ತಿಯಾಗಿದೆ ಎಂದರು.
ಜಯಶ್ರೀ ಅವರ ಕಂಠಸಿರಿಯಲ್ಲಿ ‘ಸದರಮೆ’, ‘ಕುರುಕ್ಷೇತ್ರ’ ಸೇರಿದಂತೆ ಅನೇಕ ನಾಟಕಗಳ ಹಾಡುಗಳು ಸಂವಾದದಲ್ಲಿ ಜನಮನ ಸೆಳೆದವು.
ಸಂವಾದ​ ಕಾರ್ಯಕ್ರಮದಲ್ಲಿ ರಂಗಶಂಕರದ ಅರುಂಧತಿ ನಾಗ್, ಸುರೇಂದ್ರನಾಥ, ಕಲಬುರಗಿ ರಂಗಾಯಣದ ನಿರ್ದೇಶಕಿ ಸುಜಾತ ಜಂಗಮಶೆಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.