ಡಿ. ೨೧ ರಂದು ಕನ್ನಡ ಸೇನೆಯ ಬೆಳ್ಳಿಹಬ್ಬ ಆಚರಣೆ

ತುಮಕೂರು, ಡಿ. ೧೯- ಜಿಲ್ಲಾ ಕನ್ನಡ ಸೇನೆಗೆ ೨೫ ವರ್ಷ ತುಂಬಿದ ಸಂದರ್ಭದಲ್ಲಿ ಡಿ. ೨೧ರಂದು ನಗರದ ಬಾಲಭವನದಲ್ಲಿ ಬೆಳ್ಳಿಹಬ್ಬ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ದಿನವಿಡೀ ಕನ್ನಡ ನಾಡುನುಡಿ ಮೆರೆಯುವ ಸಂಭ್ರಮದ ಕನ್ನಡ ಹಬ್ಬವಾಗಿ ಆಚರಿಸಲಾಗುವುದು. ಇದರ ಅಂಗವಾಗಿ ವಿವಿಧ ಸಾಂಸ್ಕೃತಿಕ, ಕ್ರೀಡಾ ಪ್ರದರ್ಶನ, ಸ್ಪರ್ಧೆ, ಆರೋಗ್ಯ ಶಿಬಿರ, ವಿಕಲಚೇತನರಿಗೆ ಪರಿಕರ ವಿತರಣೆ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಸೇನೆ ಜಿಲ್ಲಾಧ್ಯಕ್ಷ ಡಾ. ಧನಿಯಾಕುಮಾರ್ ತಿಳಿಸಿದ್ದಾರೆ.


ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ೨೫ ಜನರನ್ನು ಸನ್ಮಾನಿಸಲಾಗುವುದು. ಅಂದು ನಡೆಯುವ ಕಾರ್ಯಕ್ರಮವನ್ನು ಕೇಂದ್ರ ಸಚಿವ ವಿ.ಸೋಮಣ್ಣ ಉದ್ಘಾಟಿಸುವರು. ಮಾಜಿ ಸಚಿವ, ಶಾಸಕ ಕೆ.ಎನ್.ರಾಜಣ್ಣ ಅಧ್ಯಕ್ಷತೆ ವಹಿಸುವರು. ತಂಗನಹಳ್ಳಿ ಕಾಶಿ ಅನ್ನಪೂರ್ಣೇಶ್ವರಿ ಮಠದ ಬಸವಮಹಾಲಿಂಗ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು.

ಕನ್ನಡಸೇನೆ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್ ವಿಕಲಚೇತನರಿಗೆ ಪರಿಕರ ವಿತರಿಸುವರು, ಕನ್ನಡ ಚಳವಳಿ ನಾಯಕರಾದ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದ್, ಮಾಜಿ ಸಚಿವ ಸೊಗಡು ಶಿವಣ್ಣ, ವಿಧಾನಪರಿಷತ್ ಸದಸ್ಯ ಆರ್.ರಾಜೇಂದ್ರ, ವಿಧಾನಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಡಾ.ಎಸ್.ಪರಮೇಶ್, ಸ್ಫೂರ್ತಿ ಡೆವಲಪರ್ಸ್ ಮಾಲೀಕ ಎಸ್.ಪಿ.ಚಿದಾನಂದ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಕನ್ನಡ ಸೇನೆ ರಾಜ್ಯ ಕಾರ್ಯದರ್ಶಿ ಮುನಿಕೃಷ್ಣ, ಸಂಚಾಲಕ ಕೆ.ಎಸ್.ಸಂತೋಷ್, ಹಿರಿಯ ಕಲಾವಿದ ಡಾ.ಲಕ್ಷ್ಮಣದಾಸ್, ಚಲನಚಿತ್ರ ನಾಯಕನಟ ರಾಜು ನಾಯ್ಡು, ಬಯೋನೀಡ್ಸ್ ವಿನಯ್‌ಬಾಬು, ಬಿ.ಟಿ.ಕೊ ಭಾಸ್ಕರ್, ಹೆಬ್ಬಾಕ ಮಲ್ಲಿಕಾರ್ಜುನ್, ಮಲ್ಲಸಂದ್ರಶಿವಣ್ಣ, ಎಂ.ಕೆ.ವೆಂಕಟಸ್ವಾಮಿ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.


ಇದರ ಅಂಗವಾಗಿ ಬೆಂಗಳೂರಿನ ಸ್ಪರ್ಶ ಆಸ್ಪತ್ರೆ ತಜ್ಞವೈದ್ಯರ ತಂಡದಿಂದ ಬೆಳಿಗ್ಗೆ ೯ ಗಂಟೆಯಿಂದ ಆರೋಗ್ಯ ತಪಾಸಣಾ ಶಿಬಿರ, ಬೆಳಿಗ್ಗೆ ೧೦ರಿಂದ ಚಿತ್ರಕಲಾ ಸ್ಪರ್ಧೆ, ೧೧ರಿಂದ ರಂಗೋಲಿ ಸ್ಪರ್ಧೆ, ನಂತರ ವಿವಿಧ ಸಾಂಸ್ಕೃತಿಕ, ಮನರಂಜನಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಇದೇ ವೇಳೆ ವಿವಿಧ ಕರಾಟೆ ಶಾಲೆ ವಿದ್ಯಾರ್ಥಿಗಳಿಂದ ಆಕರ್ಷಕ ಕರಾಟೆ ಪ್ರದರ್ಶನವಿರುತ್ತದೆ. ವಿಕಲಚೇತನ ವಿದ್ಯಾರ್ಥಿಗಳಿಗೆ ವ್ಹೀಲ್ ಚೇರ್, ಕಮೋಡ್ ಚೇರ್, ವಾಕರ್, ಊರುಗೋಲು, ಬ್ಲೂಟೂತ್ ಬಾಕ್ಸ್ ವಿತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.


ಚಿತ್ರಕಲಾ ಸ್ಪರ್ಧೆಯಲ್ಲಿ ಕ್ರಮವಾಗಿ ಮೊದಲ ಮೂರು ಸ್ಥಾನಗಳ ವಿಜೇತರಿಗೆ ತಲಾ ೫೦೦೧, ೨೦೦೧, ೧೦೦೧ ರೂ.ಗಳ ನಗದು ಬಹುಮಾನ ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವವರು ನೋಂದಣಿ ಮತ್ತು ವಿವರಗಳಿಗಾಗಿ ಡಾ.ಧನಿಯಾಕುಮಾರ್ (೯೮೪೪೩೪೩೪೬೮), ಗುರುರಾಘವೇಂದ್ರ (೯೯೮೬೫೫೫೫೮೭) ರವರನ್ನು ಸಂಪರ್ಕಿಸಬಹುದಾಗಿದೆ.