
ವಿಜಯಪುರ, ನ. 9: “ಸಮಾಜದಲ್ಲಿದ್ದ ಅಸಮಾನತೆ, ಅನಿಷ್ಠ ಪದ್ಧತಿಗಳ ವಿರುದ್ಧ ತಮ್ಮ ಕೀರ್ತನೆಗಳ ಮೂಲಕ ಸಮರ ಸಾರಿದ ದಾಸಶ್ರೇಷ್ಠರು ಕನಕದಾಸರು. ಅವರ ಚಿಂತನೆಗಳು, ವಿಚಾರಗಳು ಮತ್ತು ಸಮಾಜ ಸುಧಾರಣೆಯ ದೃಷ್ಟಿಕೋನಗಳು ಇಂದಿಗೂ ಪ್ರಸ್ತುತ” ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿ ಪೆÇ್ರ.ವಿಜಯಾ ಬಿ ಕೋರಿಶೆಟ್ಟಿ ಹೇಳಿದರು.
ಅವರು ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕನಕದಾಸ ಅಧ್ಯಯನ ಪೀಠದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಕನಕದಾಸ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
“ಮೂಲತಃ ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದ ತಿಮ್ಮಪ್ಪ ನಾಯಕ, ತಮ್ಮ ಜೀವನದಲ್ಲಿ ನಡೆದ ಹಲವು ಘಟನೆಗಳಿಂದ ಕನಕದಾಸರಾಗಿ ಪರಿವರ್ತನೆಯಾದರು. ಬಳಿಕ ಹಲವು ಸ್ಥಳಿಗಳಿಗೆ ಭೇಟಿ ನೀಡಿ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮೂಲಕ ಜನರ ಮನೋಭಾವನೆಗಳನ್ನು ಪರಿವರ್ತಿಸಿದರು. ಅವರು ಕೀರ್ತನೆಗಳು ಹಾಗೂ ಕಾವ್ಯಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ” ಎಂದರು.
ಸಮಾರಂಭದಲ್ಲಿ ಮಾತನಾಡಿದ ಕುಲಸಚಿವ ಶಂಕರಗೌಡ ಸೋಮನಾಳ, “ಕನಕದಾಸರು 15-16 ನೇ ಶತಮಾನದಲ್ಲಿ ಸಮಾಜಿಕ ಸಮಾನತೆಗಾಗಿ ಹೋರಾಡಿದವರು. ಸಮಾಜದ ಢಾಂಬಿಕತೆ, ವರ್ಗ ಸಂಘರ್ಷದ ವಿರುದ್ಧ ಧ್ವನಿ ಎತ್ತಿದವರು. ಅವರು ಸಾಹಿತ್ಯ ಮೂಲಕ ಮಹಿಳಾ ಸಬಲೀಕರಣ ಹಾಗೂ ಸ್ತ್ರೀ ಸ್ವಾತಂತ್ರ್ಯದ ಅಗತ್ಯತೆಯ ಕುರಿತಾಗಿಯೂ ಮಾತನಾಡಿದ್ದಾರೆ. ಅಷ್ಟೇ ಅಲ್ಲದೇ ದಾಸ ಸಾಹಿತ್ಯವನ್ನು ಜನಸಾಮಾನ್ಯರಿಗೆ ತಲುಪಿಸುವ ಮೂಲಕ ಸಮಾಜದಲ್ಲಿ ಧನಾತ್ಮಕ ಬದಲಾವಣೆಗಳನ್ನು ತಂದಿದ್ದಾರೆ” ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಐಕ್ಯೂಎಸಿ ನಿರ್ದೇಶಕ ಪೆÇ್ರ.ಪಿ.ಜಿ.ತಡಸದ, “ಪಾಳೇಗಾರನಾಗಿದ್ದ ಕನಕದಾಸರು, ವ್ಯಾಸರಾಯರಿಂದ ಪ್ರೇರಿತರಾಗಿ ಎಲ್ಲವನ್ನೂ ತೊರೆದು, ಭಕ್ತಿಗಾಗಿ, ಸಮಾಜ ಸುಧಾರಣೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರು. ದಾಸ ಸಾಹಿತ್ಯವನ್ನು ಸಾಮಾನ್ಯ ಜನರಿಗೆ ತಲುಪಿಸಿದ್ದು ಮಾತ್ರವಲ್ಲದೇ, ಕೃತಿಗಳ, ಕೀರ್ತನೆಗಳ ಮೂಲಕ ಆ ಕಾಲದ ಸಮಾಜದ ಓರೆಕೋರೆಗಳನ್ನು ತಿದ್ದುವ ಮಹತ್ವದ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಸಂಗೀತ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾದದ್ದು” ಎಂದರು.
ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ವಿಶ್ವವಿದ್ಯಾನಿಲಯದ ಮೌಲ್ಯಮಾಪನ ಕುಲಸಚಿವ ಪೆÇ್ರ.ಬಿ.ಎಲ್.ಲಕ್ಕಣ್ಣನವರ, ವಿವಿಧ ವಿಭಾಗಗಳ ಮುಖ್ಯಸ್ಥರು ಮತ್ತು ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕ ಸಂದೀಪ್ ಸ್ವಾಗತಿಸಿ, ವಂದಿಸಿದರು.

























