
ಬೀದರ, ನ 09: ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿ ಸುಧಾರಣೆ ತಂದಿದ್ದಾರೆ ಎಂದು ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ತಿಳಿಸಿದರು.
ಅವರು ಶನಿವಾರ ನಗರದ ಪೂಜ್ಯ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಭಕ್ತ ಶ್ರೇಷ್ಠ ಕನಕದಾಸರ 538ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕನಕದಾಸರು ಸಮಾಜದ ಅಂಕುಡೊಂಕು, ಅಸಮಾನತೆ ಜಾತಿ ವ್ಯವಸ್ಥೆಯನ್ನು ತಮ್ಮ ಕೀರ್ತನೆಗಳ ಮೂಲಕ ಹೋಗಲಾಡಿಸಿದರು. ಕುಲ ಕುಲ ಎಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆನೇನಾದರು ಬಲ್ಲಿರಾ ಎಂದು ಹೇಳುತ್ತಾ ಜಾತಿ ವ್ಯವಸ್ಥೆಯನ್ನು ಕಟುವಾಗಿ ಖಂಡಿಸಿದ್ದಾರೆ. ಹಳ್ಳಿ ಹಳ್ಳಿಗೆ ಸಂಚಾರ ಮಾಡುವುದರ ಮೂಲಕ ಜನರಿಗೆ ಸತ್ಯ ಅಸತ್ಯತೆ ಬಗ್ಗೆ ಅರಿವು ಮೂಡಿಸಿದ್ದಾರೆ. ಮಹಾತ್ಮರು ಯಾವುದೇ ಒಂದು ಜಾತಿಗೆ ಸಂಬಂಧಸಿದವರಲ್ಲ, ಅವರು ಇಡೀ ಸಮಾಜದ ಏಳಿಗೆಗೆ ದುಡಿವುದರ ಮೂಲಕ ಸಮಾಜದಲ್ಲಿ ಸುಧಾರಣೆ ತಂದು ಶಾಂತಿ ಸಮಾನತೆ, ಭಾತೃತ್ವ ಸಾರಿದ್ದಾರೆ. ತಮ್ಮ ಸರ್ಕಾರ ರೈತರ ಪರವಾಗಿದ್ದು, ಆದಷ್ಟು ಬೇಗ ಸರ್ಕಾರದಿಂದ ಘೋಷಿಸಲ್ಪಟ ಹೆಚ್ಚುವರಿ 8500 ರೂ.ನ್ನು ರೈತರ ಖಾತೆಗೆ ಜಮೆ ಮಾಡಲಾಗುವುದು ಎಂದರು.
ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಂ ಖಾನ್ ಅವರು ಮಾತನಾಡಿ, ಕನಕದಾಸರು ಹಾಕಿಕೊಟ್ಟ ಮಾರ್ಗದಲ್ಲಿ ನಾವೇಲ್ಲಾ ಸಾಗಿ, ಜಾತಿ, ಕುಲ, ಮತ ಎನ್ನದೆ ಒಂದಾಗಿ ಬಾಳಬೇಕು ಎಂದರು.
ಬೀದರ ದಕ್ಷಿಣ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರು ಮಾತನಾಡಿ, ಜಾತಿ, ಕುಲಕ್ಕಿಂತ ಮಾನವ ಧರ್ಮ ದೊಡ್ಡದು ಎಂದು ವಿಶ್ವಕ್ಕೆ ಸಂದೇಶ ಸಾರಿದ ಕನಕದಾಸರು ನಮ್ಮೆಲ್ಲರಿಗೆ ಮಾದರಿಯಾಗಿದ್ದಾರೆ ಎಂದರು.
ಮಾಜಿ ಸಚಿವ ಬಂಡೇಪ್ಪ ಖಾಶಂಪೂರ ಅವರು ಮಾತನಾಡಿ, ಕನಕದಾಸರು ಶ್ರೀಕೃಷ್ಣರ ಭಕ್ತರಾಗಿದ್ದರಿಂದ ಉಡುಪಿಗೆ ಹೋಗಿ ಕೃಷ್ಣನ ದರ್ಶನ ಪಡೆಯಲು ಹೋದಾಗ ಅವರಿಗೆ ದೇವಸ್ಥಾನದ ಒಳಗೆ ಬಿಡಲಿಲ್ಲ. ಅವಾಗ ಹೋರಗಡೆಯಿಂದ ಕೀರ್ತನೆ ಹಾಡುಗಳು ಹಾಡುತ್ತಿರುವಾಗ ಶ್ರೀ ಕೃಷ್ಣನೇ ಗೋಡೆ ಒಡದು ಮೂರ್ತಿ ತಿರುಗಿಸಿ ದರ್ಶನ ನೀಡಿದರು. ಆದ್ದರಿಂದ ಭಕ್ತಿ ಎನ್ನುವುದು ಅಂತರಾಳದಲ್ಲಿ ಇರಬೇಕೇ ಹೋರತು ತೋರಿಕಗಲ್ಲ ಎಂದರು.
ಈ ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಪ್ರಾದೇಶಿಕ ಕೇಂದ್ರ ಬೀದರ ಉಪನ್ಯಾಸಕರಾದ ಡಾ. ಸಂಗಪ್ಪಾ ತಾಡಿ ಅವರು ತಮ್ಮ ಅತಿಥಿ ಉಪನ್ಯಾಸ ನೀಡಿದರು.
ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಮಾಡಿ ಪೂಜೆ ಸಲ್ಲಿಸಿ ನಂತರ ಬೊಮಗೊಂಡೇಶ್ವರ ವೃತ್ತ ಬಳಿ ಕನಕದಾಸರ ಭಾವಚಿತ್ರ ಹೊತ್ತ ರಥ ಮೆರವಣಿಗೆಗೆ ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್, ಶಾಸಕ ಶೈಲೇಂದ್ರ ಬೆಲ್ದಾಳೆ, ಮಾಜಿ ಸಚಿವ ಬಂಡೇಪ್ಪ ಖಾಶಂಪೂರ, ಜಿಲ್ಲಾ ಗ್ಯಾರಂಟಿ ಅಧ್ಯಕ್ಷ ಅಮೃತರಾವ ಚಿಮಕೋಡೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಮ ಸಿಂಧೆ, ಔಧತಪೂರ ಶ್ರೀಗಳಾದ ಮಚೇಂದ್ರ ಮುತ್ಯಾ, ಬೀದರ ತಹಸಿಲ್ದಾರ್ ರವೀಂದ್ರ ಧಾಮಾ, ಸಮಾಜದ ಮುಖಂಡರಾದ ಬಾಬುರಾವ ಮಲ್ಕಾಪುರೆ, ಸಂಜುಕುಮಾರ ಅತಿಯಾಳ, ಪಂಡಿತರಾವ ಚಿದ್ರಿ, ಪೀರಪ್ಪಾ ಔರಾದ್ಕರ್, ಸಂಗಪ್ಪ ಮಲ್ಕಾಪುರೆ, ಸಂತೋಷ ಜೋಳ್ದಾಪೂಗಾ, ಹನುಮಂತ ಮಲ್ಕಾಪುರೆ, ವಿಜಯಕುಮಾರ ಸೋನಾರೆ, ರಾಜಕುಮಾರ ಕಂದಗುಳೆ ಸೇರಿದಂತೆ ಸಮಾಜದ ಮುಖಂಡರು ಹಾಗೂ ಇತರರು ಉಪಸ್ಥಿತರಿದ್ದರು.






















