Home ಜಿಲ್ಲೆ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಕಂಬಿ ಐದೇಶಿ ವೈಭವ

ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಕಂಬಿ ಐದೇಶಿ ವೈಭವ

ಜಮಖಂಡಿ:ಎ.1:ನಗರದ ಶ್ರೀ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಕಂಬಿ ಐದೇಶಿ ಕಾರ್ಯಕ್ರಮವು ಸಾವಿರಾರು ಭಕ್ತರ ಮಧ್ಯೆ ಶ್ರದ್ಧಾ-ಭಕ್ತಿಯಿಂದ ವಿಜೃಂಭಣೆಯಿಂದ ಜರುಗಿತು.
ಬೆಳಗ್ಗಿನಿಂದಲೇ ದೇವಸ್ಥಾನದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಭಕ್ತಿಭಾವದಿಂದ ನೆರವೇರಿದವು. ಕಂಬಿ ಸೇವೆ, ಪಲ್ಲಕ್ಕಿ ಸೇವೆ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ಭಕ್ತರ ಸಕ್ರಿಯ ಭಾಗವಹಿಸುವಿಕೆಯಿಂದ ನಡೆಯಿತು. ಸಾವಿರಾರು ಮುತೈದಿಯರು ಆರತಿ ಹಿಡಿದು ಕಾರ್ಯಕ್ರಮಕ್ಕೆ ಭಕ್ತಿಭಾವದಿಂದ ಸಾಥ್ ನೀಡಿದ್ದು, ಉತ್ಸವದ ವೈಭವವನ್ನು ಹೆಚ್ಚಿಸಿತು.
ಕಾರ್ಯಕ್ರಮದ ಅಂಗವಾಗಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಷ. ಬ್ರ. ಶಿವಲಿಂಗ ಪಂಡಿತ್ತಾರಾಧ್ಯ ಶ್ರೀಗಳು ಅನ್ನಪ್ರಸಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅವರು ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಐದು ದಿನಗಳ ಕಾಲ ಕಂಬಿ ಐದೇಶಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿರುವುದಾಗಿ ತಿಳಿಸಿದರು. ಸಮಿತಿಯ ಅಧ್ಯಕ್ಷರು ಹಾಗೂ ಎಲ್ಲಾ ಸದಸ್ಯರು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿದ್ದು ಶ್ಲಾಘನೀಯ ಎಂದರು.
ಇನ್ನೂ ಸಮಿತಿ ಅಧ್ಯಕ್ಷ ಶ್ರೀಶೈಲ ಪಾಟೀಲ ಮಾತನಾಡಿ, ಐದು ದಿನಗಳ ಕಾಲ ನಿರಂತರವಾಗಿ ಪಲ್ಲಕ್ಕಿ ಸೇವೆ, ಪ್ರಸಾದ ವ್ಯವಸ್ಥೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಭಕ್ತರ ಸಹಕಾರದಿಂದ ಉತ್ಸವ ಯಶಸ್ವಿಯಾಗಿದೆ ಎಂದು ಹೇಳಿದರು.
ಸಮಾರೋಪ ಸಮಾರಂಭದ ಅಂಗವಾಗಿ ಆಯೋಜಿಸಿದ ಅನ್ನಪ್ರಸಾದದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ದೇವಸ್ಥಾನದ ಪರವಾಗಿ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಅನೇಕ ಭಕ್ತರು ತನು-ಮನ-ಧನಗಳಿಂದ ಸೇವೆ ಸಲ್ಲಿಸಿದ್ದು, ದಾಸೋಹ ಸೇವೆಯ ಮೂಲಕ ಉತ್ಸವಕ್ಕೆ ಮತ್ತಷ್ಟು ಭಕ್ತಿ ಸಂಭ್ರಮ ತುಂಬಿತು