ಕಮಠಾಣಾ, ಮನ್ನಾಎಖೇಳ್ಳಿ ಪಟ್ಟಣ ಪಂಚಾಯಿತಿ: ಸತತ ಪ್ರಯತ್ನಕ್ಕೆ ಫಲ

ಬೀದರ್ : ನ.28:ಬೀದರ್ ದಕ್ಷಿಣ ಕ್ಷೇತ್ರದ ಕಮಠಾಣಾ ಹಾಗೂ ಮನ್ನಾಎಖೇಳ್ಳಿ ಗ್ರಾಮ ಪಂಚಾಯಿತಿಗಳನ್ನು ಸರ್ಕಾರ ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಿದೆ. ಕಳೆದ ಎರಡೂವರೆ ವರ್ಷಗಳಿಂದ ನಾನು ಇದಕ್ಕಾಗಿ ಮಾಡುತ್ತಿದ್ದ ಸತತ ಪ್ರಯತ್ನಕ್ಕೆ ಫಲ ಸಿಕ್ಕಿದೆ ಎಂದು ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಸಂತಸ ವ್ಯಕ್ತಪಡಿಸಿದ್ದಾರೆ.

ಕಮಠಾಣಾ ಹಾಗೂ ಮನ್ನಾಎಖೆಳ್ಳಿ ಗ್ರಾಪಂಗಳನ್ನು ಪಟ್ಟಣ ಪಂಚಾಯಿತಿಗೆ ಮೇಲ್ದರ್ಜೆಗೇರಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡಿರುವುದು ಸ್ವಾಗತಾರ್ಹ. ದಕ್ಷಿಣ ಕ್ಷೇತ್ರವು ಸಂಪೂರ್ಣ ಹಳ್ಳಿಗಳಿಂದಲೇ ಕೂಡಿದೆ. ಮೊದಲ ಬಾರಿಗೆ ಇಲ್ಲಿ ಎರಡು ಹೋಬಳಿ ಕೇಂದ್ರಗಳಿಗೆ ಪಟ್ಟಣ ಪಂಚಾಯಿತಿ ಭಾಗ್ಯ ದೊರಕಿದೆ. ಹೆಚ್ಚು ಜನಸಂಖ್ಯೆ ಇರುವ ಎರಡೂ ಗ್ರಾಮಗಳ ಜನತೆಗೆ ಉತ್ತಮ ಮೂಲಸೌಕರ್ಯ ಒದಗಿಸಿ ಹೆಚ್ಚಿನ ಅಭಿವೃದ್ಧಿಪಡಿಸಲು ಇದರಿಂದ ಬಲ ತುಂಬಿದಂತಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಕಮಠಾಣಾ, ಮನ್ನಾಎಖ್ಖೆಳ್ಳಿಗೆ ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಲು ನಾನು ಶಾಸಕನಾದಾಗಿನಿಂದ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡುತ್ತಿದ್ದೇನೆ. ಹಿಂದಿನ ವಿಧಾನಸಭೆ ಅಧಿವೇಶನಗಳಲ್ಲಿ ಸಹ ಕ್ಷೇತ್ರದ ಜನರ ಹಿತದ ಈ ವಿಷಯ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದಿದ್ದೇನೆ. ಸ್ಥಳೀಯ ಗ್ರಾಪಂ ಪ್ರತಿನಿಧಿಗಳು, ಪ್ರಮುಖರ ನಿಯೋಗದೊಂದಿಗೆ ಪೌರಾಡಳಿತ ಸಚಿವರಿಗೆ ಭೇಟಿ ಮಾಡಿ ಮನವಿ ಮಾಡಲಾಗಿತ್ತು. ಸಚಿವ ಸಂಪುಟದಲ್ಲಿ ಇದಕ್ಕೆ ಸಮ್ಮತಿ ನೀಡಿದ್ದಕ್ಕಾಗಿ ಕ್ಷೇತ್ರದ ಜನರ ಪರವಾಗಿ ಸರ್ಕಾರಕ್ಕೆ, ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಪೌರಾಡಳಿತ ಸಚಿವ ರಹೀಮ್ ಖಾನ್ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಬೆಲ್ದಾಳೆ ಹೇಳಿದ್ದಾರೆ.

ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರುವ ಎರಡೂ ಕೇಂದ್ರಕ್ಕೆ ಬರುವ ದಿನಗಳಲ್ಲಿ ಮೂಲಸೌಕರ್ಯ ಕಾಮಗಾರಿಗೆ ಹೆಚ್ಚಿನ ಅನುದಾನ ಬಂದು ಅಭಿವೃದ್ಧಿಗೆ ವೇಗ ಸಿಗಲು ಅನುಕೂಲವಾಗುತ್ತದೆ. ಈ ಹಿಂದೆ ಬೊಮ್ಮಾಯಿ ಸರ್ಕಾರದಲ್ಲಿ ಬೀದರ್ ನಗರಸಭೆಗೆ ಮಹಾನಗರ ಪಾಲಿಕೆ ಮಾಡುವ ಘೋಷಣೆ ಮಾಡಿದ್ದು, ಅದು ಸಹ ಈಗ ಕಾರ್ಯರೂಪಕ್ಕೆ ಬಂದಿದೆ. ಬೀದರ್ ಪಾಲಿಕೆಗೆ ದಕ್ಷಿಣ ಕ್ಷೇತ್ರದ ಮೂರು ಗ್ರಾಪಂಗಳ ಎಂಟು ಹಳ್ಳಿಗಳು ಸೇರಿವೆ. ಇವುಗಳಿಗೂ ಸಹ ಹೆಚ್ಚಿನ ಅನುದಾನದ ಬರುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.