ಕ್ಷಮೆ ಕೇಳದಿದ್ದರೆ ಕಮಲ್ ಚಿತ್ರಕ್ಕೆ ನಿರ್ಬಂಧಕ್ಕೆ ಪತ್ರ

ಬೆಂಗಳೂರು, ಮೇ ೨೯- ಕನ್ನಡ ಭಾಷೆಯ ಕುರಿತಾಗಿ ಅವಹೇಳನಕಾರಿಯಾಗಿ ಮಾತನಾಡಿರುವ ನಟ ಕಮಲಹಾಸನ್ ಕನ್ನಡಿಗರ ಕ್ಷಮೆಯಾಚಿಸದಿದ್ದರೆ ಅವರು ನಟಿಸಿರುವ ಚಲನಚಿತ್ರಗಳಿಗೆ ಕರ್ನಾಟಕದಲ್ಲಿ ನಿರ್ಬಂಧ ವಿಧಿಸಬೇಕು ಎಂದು ಕನ್ನಡ ಸಂಸ್ಕೃತಿ ಸಚಿವ ಶಿವರಾಜ್ ಎಸ್. ತಂಗಡಗಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ತಿಳಿಸಿದ್ದಾರೆ.


ಈ ಬಗ್ಗೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಿಗೆ ಪತ್ರ ಬರೆದಿರುವ ಸಚಿವ ಶಿವರಾಜ್ ಎಸ್. ತಂಗಡಗಿ, ತಮಿಳು ಚಿತ್ರರಂಗದ ನಟ ಕಮಲಹಾಸನ್ ಅವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಕನ್ನಡ ಭಾಷೆ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ.

ಅವರು ಕನ್ನಡ ಭಾಷೆ ಕುರಿತು ಮಾತನಾಡಿರುವುದು ಸಮಸ್ತ ಕನ್ನಡಿಗರಿಗೆ ಹಾಗೂ ನನಗೆ ತೀವ್ರ ನೋವಾಗಿದೆ ಮತ್ತು ಕನ್ನಡಿಗರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ತಿಳಿಸಿದ್ದಾರೆ.


ನಟ ಕಮಲಹಾಸನ್ ಅವರು ಹಿರಿಯ ನಟರಾಗಿ ಕನ್ನಡ ಭಾಷೆಯ ಬಗ್ಗೆ ಈ ರೀತಿ ಮಾತನಾಡಿರುವುದು ಅವರಿಗೆ ಶೋಭೆ ತರುವಂತಹದ್ದಲ್ಲ. ಕನ್ನಡದ ನೆಲ, ಜಲ ಹಾಗೂ ಭಾಷೆ ವಿಚಾರದಲ್ಲಿ ಯಾರೂ ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಅವರಿಂದ ಇಂತಹ ಹೇಳಿಕೆಗಳನ್ನು ಸಹಿಸಲು ಸಾಧ್ಯವಿಲ್ಲ. ಆದ್ದರಿಂದ ಕಮಲಹಾಸನ್ ಅವರು ಕೂಡಲೇ ಕನ್ನಡಿಗರ ಕ್ಷಮೆಯಾಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.


ನಟ ಕಮಲಹಾಸನ್ ಅವರು ಕನ್ನಡಿಗರ ಕ್ಷಮೆ ಕೇಳದಿದ್ದರೆ ಅವರು ನಟಿಸಿರುವ ಚಲನಚಿತ್ರಗಳಿಗೆ ರಾಜ್ಯದಲ್ಲಿ ನಿರ್ಬಂಧ ಹೇರಬೇಕು ಎಂದು ಸಚಿವ ಶಿವರಾಜ್ ಎಸ್. ತಂಗಡಗಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.