ಶಿವಣ್ಣನಿಗೆ ಕನ್ನಡದಲ್ಲಿ ಶುಭ ಕೋರಿದ ಕಮಲಹಾಸನ್

ಬೆಂಗಳೂರು,ಜೂ.೧೧-ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಕನ್ನಡ ಚಿತ್ರರಂಗದಲ್ಲಿ ೪೦ ವರ್ಷಗಳನ್ನು ಪೂರೈಸಿದ್ದಾರೆ. ಈ ಸಂದರ್ಭದಲ್ಲಿ ಕನ್ನಡ ತಮಿಳಿನಿಂದ ಹುಟ್ಟಿದೆ ಎಂದು ನಟ ಕಮಲ್ ಹಾಸನ್ ಹೇಳಿಕೆ ನೀಡಿ ಭಾಷಾ ವಿವಾದಕ್ಕೆ ಕಾರಣರಾದ ಕಮಲ್ ಹಾಸನ್ ಶಿವಣ್ಣನಿಗೆ ಕನ್ನಡದಲ್ಲಿ ಶುಭ ಹಾರೈಸಿದ್ದಾರೆ. ನಾಗಾರ್ಜುನ ಮತ್ತು ಮೆಗಾ ಸ್ಟಾರ್ ಚಿರಂಜೀವಿ ಕೂಡ ಶುಭ ಕೋರಿದ್ದಾರೆ.


ಶಿವಣ್ಣ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ನೀವು ಹೆಚ್ಚಿನ ಸಿನಿಮಾಗಳನ್ನು ಮಾಡಬೇಕು ಮತ್ತು ನಿಮ್ಮ ಸಿನಿಮಾ ಪ್ರಯಾಣದ ೫೦ ನೇ ವರ್ಷವನ್ನು ಆಚರಿಸಲು ಮತ್ತೆ ಕುಳಿತು ಮಾತನಾಡೋಣ ಎಂದು ಕಮಲ್ ಹಾಸನ್ ಹೇಳಿದ್ದಾರೆ.


ಆನಂದ್ ಚಿತ್ರದ ಮೂಲಕ ಕನ್ನಡ ಬೆಳ್ಳಿತೆರೆಯಲ್ಲಿ ಮಿಂಚಿದ ಶಿವರಾಜ್‌ಕುಮಾರ್ ಪ್ರಸ್ತುತ ಭಾರತೀಯ ಚಲನಚಿತ್ರೋದ್ಯಮದ ಅತ್ಯಂತ ಬೇಡಿಕೆಯ ನಟ. ಈ ಚಿತ್ರ ಜೂನ್ ೧೯ ರಂದು ೪೦ ವರ್ಷಗಳನ್ನು ಪೂರೈಸುತ್ತಿದೆ. ಈ ಹಿನ್ನೆಲೆಯಲ್ಲಿ ಹ್ಯಾಟ್ರಿಕ್ ನಾಯಕನ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ದಕ್ಷಿಣ ಚಿತ್ರರಂಗದ ಸೂಪರ್‌ಸ್ಟಾರ್‌ಗಳು ಸಹ ಈ ಆಚರಣೆಯಲ್ಲಿ ಸೇರಿಕೊಂಡಿದ್ದಾರೆ. ಭಾಷಾ ವಿವಾದದಿಂದಾಗಿ ಇತ್ತೀಚೆಗೆ ಸುದ್ದಿಯಲ್ಲಿದ್ದ ತಮಿಳು ನಟ ಕಮಲ್ ಹಾಸನ್ ಈಗ ಕನ್ನಡದಲ್ಲಿ ಶಿವಣ್ಣ ಅವರನ್ನು ಹೊಗಳಿದ್ದಾರೆ. ತಮಿಳು ಮತ್ತು ಇಂಗ್ಲಿಷ್‌ನಲ್ಲಿ ಮಾತನಾಡಲು ಪ್ರಾರಂಭಿಸಿದ ಕಮಲ್ ಹಾಸನ್ ತಮ್ಮ ಭಾಷಣದಲ್ಲಿ ಕನ್ನಡವನ್ನು ಬಳಸಿದ್ದಾರೆ.