
ಕಲಬುರಗಿ: ಸಮಾಜ ಸೇವೆ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿರುವ ಅಪಾರ ಕೊಡುಗೆಯನ್ನು ಗುರುತಿಸಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ ಅವರಿಗೆ ದೆಹಲಿ ಕರ್ನಾಟಕ ಸಂಘ ಹಾಗೂ ಕಲ್ಯಾಣ ಕನ್ನಡಿಗರ ಸಾಂಸ್ಕøತಿಕ ಟ್ರಸ್ಟ್ ವತಿಯಿಂದ ಪ್ರತಿಷ್ಠಿತ “ಕಲ್ಯಾಣ ಕರ್ನಾಟಕ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸೆಪ್ಟೆಂಬರ್ 27ರಂದು ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ವರ್ಣರಂಜಿತ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಡಾ. ದಾಕ್ಷಾಯಿಣಿ ಅವ್ವಾಜಿ ಅವರ ಅನುಪಸ್ಥಿತಿಯಲ್ಲಿ, ಅವರ ಪರವಾಗಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ ಅವರು ಪ್ರಶಸ್ತಿ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ರೇಣುಕುಮಾರ್ ಆರ್. ಸೇರಿದಂತೆ ಎರಡೂ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಶಸ್ತಿ ಪ್ರದಾನ ಮಾಡಿದ ಬಳಿಕ ಮಾತನಾಡಿದ ರೇಣುಕುಮಾರ್ ಅವರು, ಶಿಕ್ಷಣ ಕ್ಷೇತ್ರದಲ್ಲಿ ಡಾ. ದಾಕ್ಷಾಯಿಣಿ ಅವ್ವಾಜಿ ಅವರು ಸಲ್ಲಿಸುತ್ತಿರುವ ಸೇವೆಯನ್ನು ಶ್ಲಾಘಿಸಿದರು. ಅಗತ್ಯವಿರುವವರ ಬಗ್ಗೆ ಅವರು ಹೊಂದಿರುವ ಕಾಳಜಿ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಮತ್ತು ಶರಣಬಸವ ವಿಶ್ವವಿದ್ಯಾಲಯದ ಅಧೀನದಲ್ಲಿರುವ ಎಲ್ಲ ಶೈಕ್ಷಣಿಕ ಸಂಸ್ಥೆಗಳನ್ನು ಸಮರ್ಥವಾಗಿ ಮುನ್ನಡೆಸುವ ಮೂಲಕ ಅವುಗಳ ಸರ್ವತೋಮುಖ ಶ್ರೇಷ್ಠತೆಗೆ ಶ್ರಮಿಸುತ್ತಿರುವುದನ್ನು ಅವರು ಪ್ರಶಂಸಿಸಿದರು.


























