ಬೀದರ: ಅ.೧೨:ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ನ್ಯಾಯ ದೊರಕಿಸಬೇಕೆಂಬ ಉದ್ದೇಶದಿಂದ ವೆಲಫೆರ್ ಪಾರ್ಟಿ ಆಫ್ ಇಂಡಿಯಾ ಈ ತಿಂಗಳ ೬ರಿಂದ ೧೩ನೇ ತಾರಿಖಿನ ವರೆಗೆ ಕಲ್ಯಾಣ ಕರ್ನಾಟಕ ನ್ಯಾಯಪೂರ್ಣ ಅಭಿವೃದ್ಧಿಗಾಗಿ ಜಾಥಾ ಹಮ್ಮಿಕೊಂಡು ನಾಳೆ ಸೋಮವಾರ ತೊಗರಿಯ ಕಣಜ ಕಲಬುರಗಿಯಲ್ಲಿ ಅಂತ್ಯಗೊಳ್ಳಲಿದೆ ಎಂದು ವೆಲ್ಲೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ನ್ಯಾಯವಾದಿ ತಹೆರ್ ಹುಸೇನ್ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಹೆಸರಿಗೆ ಮಾತ್ರ ಕಲ್ಯಾಣ ಕರ್ನಾಟಕ. ಆದರೆ ಎಲ್ಲಿ ಕಲ್ಯಾಣ ಆಗುತ್ತಿದೆ. ಬರೀ ಬೊಗಳೆ ಭಾಷಣ ಹಾಗೂ ಘೋಷಣೆಗೆ ಸೀಮಿತವಾಗಿದೆ ಎಂದರು.
ದೇಶಕ್ಕೆ ಸ್ವಾತಂತ್ರö್ಯ ಸಿಕ್ಕಿ ಸುಮಾರು ೭೮ ವರುಷಗಳು ಆಗಿವೆ. ಆದರೆ ನಮ್ಮ ಭಾಗದ ಜಿಲ್ಲೆಗಳು ರಾಜ್ಯದಲ್ಲಿ ಇನ್ನೂ ಅತ್ಯಂತ ಹಿಂದುಳಿದ ಜಿಲ್ಲೆಗಳು. ಸಂವಿಧಾನದಲ್ಲಿ ೯೮ನೇ ತಿದ್ದುಪಡಿ ಮಾಡಿ ೨೦೧೩ ರಲ್ಲಿ ಆರ್ಟಿಕಲ್ ೩೭೧ ಜೆ ಅಡಿಯಲ್ಲಿ ನಮ್ಮ ಈ ಭಾಗಕ್ಕೆ ವಿಶೇಷ ಸ್ಥಾನ ಕೊಡಲಾಯಿತು. ಜೊತೆಗೆ ಒಂದು ವಿಶೇಷ ನಿಗಮ ‘ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪಿಸಲಾಯಿತು. ೨೦೧೯ ರಲ್ಲಿ ಹೈದ್ರಾಬಾದ್ ಕರ್ನಾಟಕದ ಹೆಸರು ಬದಲಾಯಿಸಿ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಲಾಯಿತು. ಆದರೆ ಈ ಭಾಗದ ಕಲ್ಯಾಣ ಯಾವಾಗ ಎಂದು ಪ್ರಶ್ನೆ ಮಾಡಿದರು.
೧೨ ವರುಷಗಳು ಕಳೆದರೂ ಇನ್ನೂ ನಮ್ಮ ಕನಸುಗಳು ನನಸಾಗಿಲ್ಲ. ಕಾರ್ಮಿಕರು ಕೆಲಸ ಹುಡುಕಿಕೊಂಡು ಗುಳೆ ಹೋಗುವುದು ತಪ್ಪಲಿಲ್ಲ. ನಮ್ಮ ಯುವಕರಿಗೆ ಅರ್ಹತೆಗೆ ತಕ್ಕಂತೆ ಉದ್ಯೋಗ ಸಿಗುತ್ತಿಲ್ಲ, ಜನಸಂಖ್ಯೆಗೆ ಅನುಗುಣವಾಗಿ ಆರೋಗ್ಯ ಕೇಂದ್ರಗಳು ಸ್ಥಾಪನೆ ಯಾಗಿಲ್ಲ, ಅಪೌಷ್ಟಿಕತೆಯಿಂದ ಮಕ್ಕಳ ಹಾಗು ಬಾಣಂತಿಯರ ಸಾವಿನ ಸರಣಿ ನಿಲ್ಲಲಿಲ್ಲ, ಉರಿ ಬಿಸಿಲಿನಲ್ಲಿ ಶ್ರಮಿಸುವ ಅನ್ನದಾತನ ಸಮಸ್ಯೆಗಳು ಬಗೆಹರಿಯದೆ ಆತ್ಮಹತ್ಯೆಗಳು ನಿಲ್ಲಲಿಲ್ಲ. ಇಲ್ಲಿ ನೆಲೆಸುವ ಹಿಂದುಳಿದ, ಅಲ್ಪಸಂಖ್ಯಾತ, ದಲಿತ, ಅದಿವಾಸಿಗಳಿಗೆ ಈ ತನಕ ಸಾಮಾಜಿಕ ನ್ಯಾಯ ದೊರಕಲಿಲ್ಲ.. ಪ್ರತಿ ಬಾರಿ ಹೊಸ ಯೋಜನೆಗಳ ಭರವಸೆ.. ದೊಡ್ಡ ದೊಡ್ಡ ಅನುದಾನಗಳ ಘೋಷಣೆ.. ಕಳೆದ ೧೨ ವರುಷಗಳಲ್ಲಿ ಸುಮಾರು ೨೫ ಸಾವಿರ ಕೋಟಿ ರೂಪಾಯಿ ಹಣ ಬಿಡುಗಡೆಯಾಗಿದೆ. ಆದರೆ, ಎಲ್ಲಿ ಹೋಗುತ್ತಿದೆ ಆ ಅನುದಾನ?.. ಯಾರಿಗೆ ತಲುಪುತ್ತಿದೆ ಆ ಯೋಜನೆಗಳ ಲಾಭ?… ಯಾಕೆ ನಮ್ಮ ಕೈ ಸೇರುತ್ತಿಲ್ಲ? ಇದಕ್ಕೆ ಯಾರು ಹೊಣೆ? ಎಂದು ಪ್ರಶ್ನೆ ಮಾಡಿದರು.
ಬೆಂಗಳೂರು ವಿಭಾಗದಲ್ಲಿ ತಲಾ ಆದಾಯ ೫.೦೧ ಆದರೆ ನಮ್ಮ ಭಾಗದ ತಲಾ ಆದಾಯ ೧.೭೩ ಮೈಸೂರು ಭಾಗದಲ್ಲಿ ೧೦ ಹಿಂದುಳಿದ ತಾಲೂಕುಗಳಿದ್ದರೆ ನಮ್ಮ ಭಾಗದಲ್ಲಿ ೨೯ ಹಿಂದುಳಿದ ತಾಲೂಕುಗಳಿವೆ. ರಾಜ್ಯದಲ್ಲಿ ಅತಿ ಬಡ ಜಿಲ್ಲೆಗಳಲ್ಲಿ ಅತ್ಯಂತ ಬಡ ಜಿಲ್ಲೆಗಳು ನಮ್ಮ ಈ ಭಾಗದ ಯಾದಗಿರಿ, ರಾಯಚೂರು, ಕಲಬುರಗಿ ಮತ್ತು ಕೊಪ್ಪಳ ಆಗಿವೆ. ಇಡೀ ರಾಜ್ಯದಲ್ಲಿ ಸಣ್ಣ, ಮಧ್ಯಮ ಕೈಗಾರಿಕೆಗಳ ಒಟ್ಟು ಸಂಖ್ಯೆ ೧೭.೪೮ ಲಕ್ಷ ಇದ್ದು ಈ ಪೈಕಿ ಕಲ್ಯಾಣ ಕರ್ನಾಟಕ ಭಾಗ ಪಾಲು ಕೇವಲ ೧.೯೬ ಲಕ್ಷ ಅಂದರೆ ಕೇವಲ ೧೧೪ ಮಾತ್ರ. ಕೆಲಸಕ್ಕಾಗಿ ವಲಸೆ ಹೋಗುವ ಕಾರ್ಮಿಕರು ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಅತಿ ಹೆಚ್ಚು ನಮ್ಮ ಭಾಗದವರು. ಈ ಭಾಗದಲ್ಲಿ ಪ್ರತಿ ವರುಷ ಸರಿ ಸುಮಾರು ೧೦ ಸಾವಿರ ವಿದ್ಯಾರ್ಥಿಗಳು ಇಂಜಿನಿಯರಿAಗ್ ಮುಗಿಸುತ್ತಾರೆ. ಆದರೆ ಕೆಲಸಕ್ಕೆ ಮಾತ್ರ ಬೇರೆ ಕಡೆ ವಲಸೆ ಹೋಗುತ್ತಾರೆ. ಸುಮಾರು ೩೦ ಲಕ್ಷ ಜನ ರಕ್ತಹೀನತೆ ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು ೯,೦೦೦ ಶಿಶುಗಳು ಮತ್ತು ೬೦೦ ತಾಯಂದಿರು ಪೋಷಕಾಂಶಗಳ ಕೊರತೆಯಿಂದ ಮೃತಪಟ್ಟಿದ್ದಾರೆ ಎಂದವರು ತಿಳಿಸಿದರು.
ಜನ ಸಂಖ್ಯೆಗೆ ಅನುಗುಣವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸ್ಥಾಪನೆಯಾಗಿಲ್ಲ. ೧೯೬೩ ಉಪ ಕೇಂದ್ರಗಳ ಅವಶ್ಯಕತೆ ಇದ್ದು, ಕೇವಲ ೧೫೧೯ ಕೇಂದ್ರಗಳಿವೆ. ೧೦೦ ಸಮುದಾಯ ಆರೋಗ್ಯ ಕೇಂದ್ರಗಳ ಅವಶ್ಯಕತೆ ಇದ್ದು, ಕೇವಲ ೫೮ ಕೇಂದ್ರಗಳಿವೆ. ಅದೇ ರೀತಿ ೪೦೦ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅವಶ್ಯಕತೆ ಇದ್ದು, ೩೫೨ ಕೇಂದ್ರ ಗಳಿವೆ. ಒಟ್ಟಾರೆ ಸುಮಾರು ೮೦ ಸಾವಿರ ಸರಕಾರಿ ಹುದ್ದೆ ಗಳು ಖಾಲಿ ಇದ್ದು ಇದರಲ್ಲಿ ಸುಮಾರು ೨೨ ಸಾವಿರ ಶಿಕ್ಷಕರ ಹುದ್ದೆಗಳು ಇಂದಿಗೂ ಭರ್ತಿಯಾಗಿಲ್ಲ. ಅದರ ಪರಿಣಾಮ ಪ್ರತಿ ಬಾರಿ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಫಲಿತಾಂಶ ದಲ್ಲಿ ನಮ್ಮ ಜಿಲ್ಲೆಗಳು ಕೊನೆ ದರ್ಜೆ ಯಲ್ಲಿ ಇರುತ್ತವೆ ಎಂದು ಕಳವಳ ವ್ಯಕ್ತಪಡಿಸಿದರು.
ಇಡೀ ರಾಜ್ಯದಲ್ಲಿ ಅತಿಹೆಚ್ಚು ಅಲ್ಪಸಂಖ್ಯಾತ, ಹಿಂದುಳಿದ ವರ್ಗದವರು ಈ ಜಿಲ್ಲೆಗಳಲ್ಲಿ ಇದ್ದಾರೆ. ಆದರೆ ಜನಸಂಖ್ಯೆಗೆ ಅನುಗುಣವಾಗಿ ಹಾಸ್ಟೆಲ್ ಗಳು ಇಲ್ಲ. ಸಂಪನ್ಮೂಲಗಳಿಗೆ ಏನೇ ಕೊರತೆ ಇಲ್ಲ. ಚಿನ್ನ ಉತ್ಪಾದನೆಯ ಹಟ್ಟಿ ಗಣಿ, ಅದಿರಿನ ಖಜಾನೆ ಇರುವ ಬಳ್ಳಾರಿ ಮತ್ತು ವಿಜಯನಗರ, ಸಿಮೆಂಟ್ ಕಣಜ ಕಲ್ಬುರ್ಗಿ, ಹತ್ತಿ ಭತ್ತ ಬೆಳೆಯುವ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳು, ಅಭಿವೃದ್ಧಿ ಯೋಜನೆಗಳು ಸರಿಯಾಗಿ ಅನುಷ್ಠಾನಕ್ಕೆ ಬಂದಿದ್ದರೆ ಕಲ್ಯಾಣ ಕರ್ನಾಟಕ ಭೂಮಿಯ ಮೇಲಿನ ಸ್ವರ್ಗವಾಗಬಹುದಿತ್ತು. ಆದರೆ ರಾಜಕಾರಣಿಗಳ ನಿರ್ಲಕ್ಷ್ಯ ಮತ್ತು ಇಚ್ಛಾ ಶಕ್ತಿಯ ಕೊರತೆಯಿಂದ ಇಂದು ನಮ್ಮ ಸ್ಥಿತಿ ಹೀಗಿದೆ. ಈ ಎಲ್ಲ ಸಮಸ್ಯೆಗಳ ಕಡೆ ಸರಕಾರದ ಗಮನ ಸೆಳೆದು ಈ ಭಾಗದ ನ್ಯಾಯ ಪೂರ್ಣ ಅಭಿವೃದ್ಧಿಗಾಗಿ ಒತ್ತಾಯಿಸಿ ನಮ್ಮ ಈ ಜಾಥಾ ಹೊರಟಿದೆ ಎಂದವರು ತಿಳಿಸಿದರು.
ಮಾನವ ಅಭಿವೃದ್ಧಿ ಸೂಚ್ಯಂಕ, ತಲಾ ಆದಾಯ ಹೆಚ್ಚಿಸಬೇಕು, ಆಒಈ, ಏಒಇಖಅ ಮತ್ತು ಏಏಖಆಃ ಅನುದಾನಗಳು ಸಮರ್ಪಕವಾಗಿ ಬಳಕೆಯಾಗಬೇಕು, ಉದ್ಯೋಗ ಅವಕಾಶಗಳನ್ನು ಹೆಚ್ಚಿಸಬೇಕು, ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಬೇಕು, ಕಲ್ಯಾಣ ಕರ್ನಾಟಕದಲ್ಲಿ ಬಹಳಷ್ಟು ಐತಿಹಾಸಿಕ ಸ್ಮಾರಕ /ಸ್ಥಳಗಳಿದ್ದು, ಈ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕು, ಖಾಲಿ ಇರುವ ಸರಕಾರಿ ಹುದ್ದೆಗಳು ಕೂಡಲೇ ಭರ್ತಿ ಮಾಡಬೇಕು, ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಕೈಗಾರಿಕಾ ನೀತಿ ರೂಪಿಸಬೇಕು ಮತ್ತು ಬಂಡವಾಳ ಹೂಡಿಕೆಯ ಪ್ರಮಾಣ ಹೆಚ್ಚಿಸಬೇಕು, ಈ ಭಾಗದ ಎಲ್ಲ ನೀರಾವರಿ ಯೋಜನೆಗಳನ್ನು ಶೀಘ್ರದಲ್ಲಿ ಪ್ರಾರಂಭ ಮಾಡಬೇಕು, ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಸಮಿತಿ ರಚನೆ ಮಾಡಬೇಕು ಮತ್ತು ಖಾಲಿ ಇರುವ ಎಲ್ಲ ಶಿಕ್ಷಕರ ಮತ್ತು ಉಪನ್ಯಾಸಕರ ಹುದ್ದೆಗಳು ಕೂಡಲೇ ಭರ್ತಿ ಮಾಡಬೇಕು, ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗಗಳ ಮೇಲೆ ನಡೆಯುವ ಅನ್ಯಾಯ ತಡೆಯಲು ವಿಶೇಷ ನ್ಯಾಯಮಂಡಳಿ ಸ್ಥಾಪಿಸಬೇಕು, ಜನಸಂಖ್ಯೆಯ ಆಧಾರದ ಮೇಲೆ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣ ಆಗಬೇಕು ಎಂಬಿತ್ಯಾದಿ ಬೇಡಿಕೆಗಳು ಮುಂದಿಟ್ಟುಕೊAಡು ಕೆಕೆಆರ್‌ಡಿಬಿ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಂಡು ಕೆಕೆಆರ್.ಡಿಬಿ ಅಧ್ಯಕ್ಷರಿಗೆ ಬೇಡಿಕೆಗಳ ಮನವಿ ಪತ್ರ ಸಲ್ಲಿಸಲಾಗುವುದೆಂದು ತಾಹೆರ್ ಹುಸೇನ್ ತಿಳಿಸಿದರು.
ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಶ್ರೀಕಾಂತ ಸಾಲೆನ್, ಮುಝಾಹಿದ್ ಪಾಶಾ ಖುರೇಷಿ, ರಾಜ್ಯ ಖಜಾಂಚಿ, ಅಬ್ದುಲ್ ಸಲಾಮ್, ರಾಜ್ಯ ಕಾರ್ಯದರ್ಶಿ ಎಮ್.ಎಮ್ ಬಿಳೆಕುದ್ರಿ, ಜಿಲ್ಲಾಧ್ಯಕ್ಷ ಮುಬಶಿರ್ ಶಿಂಧೆ ಹಾಗೂ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.























