Home ಜಿಲ್ಲೆ ಗ್ಲೋಬಲ್ ಸೈನಿಕ್ ಅಕಾಡೆಮಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ

ಗ್ಲೋಬಲ್ ಸೈನಿಕ್ ಅಕಾಡೆಮಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ

ಬೀದರ್: ನಗರದ ಹೊರವಲಯದಲ್ಲಿರುವ ಗ್ಲೋಬಲ್ ಸೈನಿಕ್ ಅಕಾಡೆಮಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವವನ್ನು ಸೆ.17ರಂದು ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಸಂಸ್ಥೆಯ ಅಧ್ಯಕ್ಷ ಕರ್ನಲ್ ಶರಣಪ್ಪ ಸಿಕ್ಕೆನ್ಪುರೆ ಅವರು ಭಾರತಮಾತೆ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದರು. ಬಳಿಕ 250ಕ್ಕೂ ಅಧಿಕ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.
ಅಕಾಡೆಮಿಯ ನಾಯಕ, ಉಪನಾಯಕ, ಶಾಲಾ ಬ್ಯಾಂಡ್ ಹಾಗೂ ಕರಿಯಪ್ಪ, ತಿಮ್ಮಯ್ಯ, ಮಾಣಿಕ್ಷಾ ಮತ್ತು ಸುಂದರ್‍ಜಿ ತಂಡಗಳ ನಾಯಕರು ಮತ್ತು ಉಪನಾಯಕರು ತಂಡಗಳನ್ನು ಮುನ್ನಡೆಸಿದರು. ವಿದ್ಯಾರ್ಥಿಗಳು ಶಿಸ್ತಿನ ಸಿಪಾಯಿಗಳಂತೆ ಅಚ್ಚುಕಟ್ಟಾಗಿ ಹೆಜ್ಜೆ ಹಾಕಿ ಗಮನ ಸೆಳೆದರು. ಶಾಲಾ ಬ್ಯಾಂಡ್ ಪಥಸಂಚಲನಕ್ಕೆ ವಿಶೇಷ ಮೆರುಗು ನೀಡಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗ್ರೂಪ್ ಕ್ಯಾಪ್ಟನ್ ರವೀಂದ್ರ, ಶ್ರೀಮತಿ ಪದ್ಮ ರವೀಂದ್ರ, ಅಕಾಡೆಮಿಯ ನಿರ್ದೇಶಕರಾದ ಡಾ. ರಘು ಕೃಷ್ಣಮೂರ್ತಿ, ಡಾ. ಆರತಿ ರಘು ಕೃಷ್ಣಮೂರ್ತಿ, ಶ್ರೀಮತಿ ವಿಮಲಾ ಸಿಕ್ಕೆನ್ಪುರೆ ಹಾಗೂ ಸಂದೀಪ್ ಸ್ವಾಮಿ ಭಾಗವಹಿಸಿದ್ದರು. ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಂತರ ವಿದ್ಯಾರ್ಥಿಗಳು ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಕಲ್ಯಾಣ ಕರ್ನಾಟಕದ ಇತಿಹಾಸ, ವೈಶಿಷ್ಟ್ಯ ಹಾಗೂ ಅಭಿವೃದ್ಧಿ ಕುರಿತು ಭಾಷಣ ಮಾಡಿದರು. ವಿದ್ಯಾರ್ಥಿಗಳಿಂದ ನಿಜಾಮರ ಆಳ್ವಿಕೆಯ ವಿರುದ್ಧ ಸರ್ದಾರ್ ವಲ್ಲಭಭಾಯಿ ಪಟೇಲ್ ನಡೆಸಿದ ಹೋರಾಟವನ್ನು ಆಧರಿಸಿದ ನಾಟಕ ಪ್ರದರ್ಶಿಸಲಾಯಿತು. ನಾಟಕ ಹಾಗೂ ನೃತ್ಯ ಕಾರ್ಯಕ್ರಮಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು.
ಮುಖ್ಯ ಅತಿಥಿ ಶ್ರೀಮತಿ ಪದ್ಮ ರವೀಂದ್ರ ಮಾತನಾಡಿ, ಗ್ಲೋಬಲ್ ಸೈನಿಕ್ ಅಕಾಡೆಮಿಯಲ್ಲಿ ತಾವು ಹಿಂದೆ ಕಂಡಿದ್ದಕ್ಕಿಂತ ಈಗ ಸಾಕಷ್ಟು ಬದಲಾವಣೆ ಕಂಡುಬಂದಿದ್ದು, ಸಣ್ಣ ಗಿಡದಂತೆ ಆರಂಭವಾದ ಸಂಸ್ಥೆ ಇಂದು ದೊಡ್ಡ ಮರವಾಗಿ ಬೆಳೆದಿದೆ. ಅಕಾಡೆಮಿಯ ಅಧ್ಯಕ್ಷ ಕರ್ನಲ್ ಶರಣಪ್ಪ ಸಿಕ್ಕೆನ್ಪುರೆ ಅವರ ಕೊಡುಗೆ ಸಂಸ್ಥೆಯನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮಕ್ಕಳಿಗೆ ಅರ್ಜುನ ಮತ್ತು ಶ್ರೀಕೃಷ್ಣನ ನಿಷ್ಕಾಮ ಕರ್ಮದ ಮಹತ್ವವನ್ನು ತಿಳಿಸಿದರು.
ಅಧ್ಯಕ್ಷ ಕರ್ನಲ್ ಶರಣಪ್ಪ ಸಿಕ್ಕೆನ್ಪುರೆ ಮಾತನಾಡಿ, ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಪರಿಸ್ಥಿತಿ ಸುಧಾರಿಸಲು ಪ್ರತಿಯೊಬ್ಬರೂ ಕಠಿಣ ಪರಿಶ್ರಮ ವಹಿಸಬೇಕು. ಈ ಭಾಗದಲ್ಲಿ ಉತ್ತಮ ವೈದ್ಯರು, ಇಂಜಿನಿಯರ್‍ಗಳು ಹಾಗೂ ಉದ್ಯಮಿಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಇದ್ದಾರೆ. ವಿದ್ಯಾರ್ಥಿಗಳು ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳಬೇಕು ಎಂದು ಕರೆ ನೀಡಿದರು. ಅಲ್ಲದೆ ಸಂವಿಧಾನದ 371(ಜೆ) ವಿಧಾನದ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಅಕಾಡೆಮಿಯ ಪ್ರಾಂಶುಪಾಲೆ ಶ್ರೀಮತಿ ರೇಣು ಪಠಾಣಿ ವಂದನಾರ್ಪಣೆ ಸಲ್ಲಿಸಿದರು. ಮುಖ್ಯೋಪಾಧ್ಯಾಯಿನಿ ಕುಮಾರಿ ಜ್ಯೋತಿ ರಾಗಾ, ಪಿಆರ್‍ಒ ಶ್ರೀಮತಿ ಕಾರಂಜಿ ಸ್ವಾಮಿ, ಮಾಜಿ ಸುಬೇದಾರ್ ಮಡೆಪ್ಪ, ಸೈನಿಕರಾದ ರಾಮ ದವಾಲ್‍ಜಿ, ಸುಬೇದಾರ್ ಧನರಾಜ್ ಸಾವರೆ, ಚಂದ್ರಶೇಖರ್ ಮಠಪತಿ, ಸಂಯೋಜಕರು, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.