ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರೋಗ್ಯ ಸುಧಾರಣೆಗೆ ಬದ್ದ :ಗೋವಿಂದರಾವ ಸಮಿತಿ ವರದಿಯಂತೆ ವಿಶೇಷ ಅನುದಾನ ಮುಂದುವರಿಕೆ:ಸಿದ್ದರಾಮಯ್ಯ

ಯಾದಗಿರಿ:ಜೂ.14: ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶ ಸಮಗ್ರ ಅಭಿವೃದ್ಧಿ ಜೊತೆಗೆ ಸಮಗ್ರ ಕರ್ನಾಟಕ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಡಾ.ಡಿ.ಎಂ.ನಂಜುಂಡಪ್ಪ ಅವರ ವರದಿ ನೀಡಿ ಎರಡು ದಶಕ ಕಳೆದಿರುವುದರಿಂದ ಹಿಂದುಳಿದ ಪ್ರದೇಶದಲ್ಲಿ ಇದೂವರೆಗಿನ ಅಭಿವೃದ್ಧಿ ಹೊಂದಿರುವ ಆಧಾರದ ಮೇಲೆ ಹೊಸದಾಗಿ ಸೂಚ್ಯಂಕ ನಿಗದಿಪಡಿಸುವ ನಿಟ್ಟಿನಲ್ಲಿ ಆರ್ಥಿಕ ತಜ್ಞ ಗೋವಿಂದರಾವ್ ಅವರ ಅಧ್ಯಕ್ಷತೆಯಲ್ಲಿ ಉನ್ನತ ಸಮಿತಿ ರಚಿಸಿದ್ದು, ಸಮಿತಿ ವರದಿಯಂತೆ ಮುಂದಿನ ದಿನದಲ್ಲಿ ಈ ಭಾಗಕ್ಕೆ ವಿಶೇಷ ಅನುದಾನ ನೀಡುವುದನ್ನು ಮುಂದುವರೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಯಾದಗಿರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಶನಿವಾರ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ “ಆರೋಗ್ಯ ಅವಿಷ್ಕಾರ” ಕಾರ್ಯಕ್ರಮದಡಿ ಪ್ರದೇಶದ 7 ಜಿಲ್ಲೆಗಳ 440.63 ಕೋಟಿ ರೂ. ಗಳ ವೆಚ್ಚದ ಆರೋಗ್ಯ ಇಲಾಖೆಯ ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು ಹಾಗೂ ಜಿಲ್ಲಾ ಬಂಜಾರ ಭವನದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ತಾಯಿ-ಮಕ್ಕಳ ಮರಣ ಪ್ರಮಾಣ ಹೆಚ್ಚಿದಲ್ಲದೆ ಮಕ್ಕಳಲ್ಲಿ ರಕ್ತಹೀನತೆ ಹೆಚ್ಚಿರುವುದರಿಂದ ಇದನ್ನು ಹೋಗಲಾಡಿಸಲು ಮತ್ತು ಪ್ರದೇಶದಲ್ಲಿ ಅರೋಗ್ಯ ಸುಧಾರಣೆ ತರಲು ರಾಜ್ಯ ಸರ್ಕಾರ ಬದ್ಧವಾಗಿದೆ. ಕಳೆದ ಕಲಬುರಗಿ ಸಚಿವ ಸಂಪುಟ ಸಭೆಯಲ್ಲಿ 857 ಕೋಟಿ ರೂ. ವೆಚ್ಚದ ಆರೋಗ್ಯ ಆವಿಷ್ಕಾರ ಯೋಜನೆಗಳಿಗೆ ಅನುಮೋದನೆ ನೀಡಿದ್ದರಿಂದ ಇಂದಿಲ್ಲಿ ಚಾಲನೆ ನೀಡಲಾಗುತ್ತಿದೆ. ಇಲ್ಲಿ ಸಿ.ಟಿ.ಸ್ಕ್ಯಾನ್, ಎಂ.ಆರ್.ಐ ಸೇವೆ ಕಡಿಮೆ. ದುಬಾರಿ ವೆಚ್ಚ ಮಾಡುವ ಶಕ್ತಿ ನಮ್ಮ ಬಡ ಜನರಿಗಿಲ್ಲ. ಹೀಗಾಗಿ ಈ ಎಲ್ಲಾ ಸೇವೆಗಳನ್ನು ಮುಂದಿನ ದಿನದಲ್ಲಿ ಪೂರೈಕೆಗೆ ಆರೋಗ್ಯ ಇಲಾಖೆ ಮುಂದಾಗಬೇಕು ಎಂದರು.
ಆರೋಗ್ಯ, ಶಿಕ್ಷಣ, ಉದ್ಯೋಗ ಕ್ಷೇತ್ರದಲ್ಲಿ ಕಲ್ಯಾಣ ಪ್ರದೇಶವು ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದಿದೆ. ಇದನ್ನು ಸರಿದೂಗಿಸಬೇಕೆಂಬುದು ನಮ್ಮ ಮಹಾದಾಸೆಯಾಗಿದೆ. ಈ ನಿಟ್ಟಿನಲ್ಲಿ ಪ್ರಸಕ್ತ 2025-26ನೇ ಸಾಲಿಗೆ 5,000 ಕೋಟಿ ರೂ. ಅನುದಾನ ಕೆ.ಕೆ.ಆರ್.ಡಿ.ಬಿ. ಮಂಡಳಿಗೆ ನೀಡಿದ್ದು, ಅಷ್ಟು ಹಣ ಖರ್ಚು ಮಾಡಿ ಪ್ರದೇಶದ ಜನರ ಒಳಿತಿಗೆ ಶ್ರಮಿಸುವಂತೆ ಕೆ.ಕೆ.ಆರ್.ಡಿ.ಬಿ ಮಂಡಳಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಅವರಿಗೆ ಸೂಚನೆ ನೀಡಿದ್ದೇನೆ ಎಂದರು.
ಕಳೆದ 3 ವರ್ಷದಲ್ಲಿ ನಮ್ಮ ಸರ್ಕಾರ ಮಂಡಳಿಗೆ 13,000 ಕೋಟಿ ರೂ. ನೀಡಿದೆ. ಕಳೆದ 2013-18ರ ಅವಧಿಯಲ್ಲಿ ಚುನಾವಣಾ ಪೂರ್ವ ಪ್ರಾಣಾಳಿಕೆಯಲ್ಲಿ ನೀಡಿದ 165 ರಲ್ಲಿ 158 ಹಾಗೂ 2023ರಲ್ಲಿ ನೀಡಿದ 593ರಲ್ಲಿ 242 ಭರವಸೆಗಳನ್ನು ಈಡೇರಿಸಿದ್ದೇವೆ. ನುಡಿದಂತೆ ನಡೆಯುವ ಸರ್ಕಾರ ನಮ್ಮದು. ಅಧಿಕಾರಕ್ಕೆ ಬಂದ 6 ತಿಂಗಳ ಅವಧಿಯಲ್ಲಿಯೇ ಐದು ಗ್ಯಾರಂಟಿ ಸಮರ್ಪಕ ಅನುಷ್ಢಾನಕ್ಕೆ ತಂದು, ಇದೂವರೆಗೆ 90 ಸಾವಿರ ಕೋಟಿ ರೂ. ಖರ್ಚು ಮಾಡಿದ್ದೇವೆ. ಕೇಂದ್ರ ಸರ್ಕಾರ ಡೀಸೆಲ್, ಪೆಟ್ರೋಲ್, ಜಿ.ಎಸ್.ಟಿ. ಸೇರಿದಂತೆ ಬೆಲೆ ಏರಿಕೆ ನೀತಿಯಿಂದ ತತ್ತರಿಸಿದ ಜನಕ್ಕೆ ಆರ್ಥಿಕ ನೆರವು ನೀಡಿದ್ದೇವೆ. ಗ್ಯಾರಂಟಿ ಅನುಷ್ಟಾನದಿಂದ ರಾಜ್ಯ ದಿವಾಳಿಯಾಗುತ್ತೆ ಎಂದು ವಿರೋಧ ಪಕ್ಷಗಳು ಅಪಪ್ರಚಾರ ಮಾಡಿದ್ರು, ಅದನ್ನು ಸುಳ್ಳಾಗಿಸಿ ಗ್ಯಾರಂಟಿ ಜೊತೆಗೆ ಶಿಕ್ಷಣ, ನೀರಾವರಿ, ಆರೋಗ್ಯ, ಮೂಲಸೌಕರ್ಯ, ರಸ್ತೆ, ಉದ್ಯೋಗ ಕಲ್ಪಿಸುವಂತಹ ಕೆಲಸಗಳು ನಮ್ಮ ಸರ್ಕಾರ ಪ್ರಮಾಣಿಕವಾಗಿ ಮಾಡುತ್ತಿದೆ ಎಂದು ತಮ್ಮ ಸರ್ಕಾರದ ಸಾಧನೆಯನ್ನು ಜನರ ಮುಂದಿಟ್ಟರು.
2013ರಲ್ಲಿ ಡಾ.ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಮುಖ್ಯಮಂತ್ರಿ ದಿ.ಧರ್ಮಸಿಂಗ್ ಅವರ ವಿಶೇಷ ಪ್ರಯತ್ನದಿಂದ ಈ ಭಾಗಕ್ಕೆ 371ಜೆ ಕಾಯ್ದೆ ಜಾರಿಗೆ ಬಂತು. ಅಂದು ರಾಜ್ಯದಲ್ಲಿ ಆಗತಾನೇ ಅಧಿಕಾರಕ್ಕೆ ಬಂದ ನಮ್ಮ ಸರ್ಕಾರ ಹೆಚ್.ಕೆ.ಪಾಟೀಲ ನೇತೃತ್ವದಲ್ಲಿ ಉಪ ಸಚಿವ ಸಂಪುಟ ಸಮಿತಿ ರಚಿಸಿ ವರದಿ ಪಡೆದು ಯಥಾವತ್ತಾಗಿ ಜಾರಿಗೆ ತಂದಿದ್ದೇವೆ ಎಂದು ತಮ್ಮ ಹಿಂದಿನ ಅವಧಿಯ ಕೆಲಸ ಕಾರ್ಯಗಳನ್ನು ನೆನೆಸಿಕೊಂಡರು.
ಯಾದಗಿರಿಗೆ 3 ವರ್ಷದಲ್ಲಿ ಒಳಚರಂಡಿ ವ್ಯವಸ್ಥೆ: ಸ್ಥಳೀಯ ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರ ಅವರ ಕೋರಿಕೆಯಂತೆ ಯಾದಗಿರಿ ನಗರಕ್ಕೆ ಮುಂದಿನ ಮೂರು ವರ್ಷದಲ್ಲಿ ಹಂತ ಹಂತವಾಗಿ ಒಳಚರಂಡಿ ವ್ಯವಸ್ಥೆ ಜಾರಿಗೆ ತಂದು ನಗರ ನಿವಾಸಿಗಳಿಗೆ ಉತ್ತಮ ನಾಗರಿಕ ಮೂಲಸೌಕರ್ಯ ಕಲ್ಪಿಸಲಾಗುವುದು ಎಂದು ಸಿ.ಎಂ. ಸಿದ್ದರಾಮಯ್ಯ ವೇದಿಕೆಯಲ್ಲಿ ಘೋಷಣೆ ಮಾಡಿದರು.
ಉಚಿತ ನಿವೇಶನ ಮಂಜೂರಾತಿ ಪತ್ರ ಹಸ್ತಾಂತರ: ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ದಿವಂಗತ ಕೊಲ್ಲೂರು ಮಲ್ಲಪ್ಪ ಅವರ ಸ್ಮಾರಕ ನಿರ್ಮಾಣಕ್ಕೆ ಸರ್ಕಾರದಿಂದ ಉಚಿತವಾಗಿ 2 ಎಕರೆ ಭೂಮಿ ಮಂಜೂರು ಮಾಡಿದ ಆದೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ವೇದಿಕೆ ಮೇಲಿದ್ದ ಗಣ್ಯರು ದಿ.ಕೊಲ್ಲೂರು ಮಲ್ಲಪ್ಪ ಸ್ಮಾರಕ ಟ್ರಸ್ಟಿನ ಪದಾಧಿಕಾರಿಗಳಾದ ಕೆ.ವಿಶ್ವನಾಥ ನೀಲಹಳ್ಳಿ, ಸಾಯಬಣ್ಣ ಕೆಂಗೇರಿ, ಮಲ್ಲಣ್ಣ ಐಕೂರು, ಸಿದ್ದಣ್ಣಗೌಡ ವಡಿಗೇರಿ ಅವರಿಗೆ ಹಸ್ತಾಂತರಿಸಿದರು. ಮುಂದಿನ ಒಂದು ವರ್ಷದಲ್ಲಿ ಸ್ಮಾರಕ ನಿರ್ಮಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪೂರ ಅವರಿಗೆ ಸಿ.ಎಂ. ಸೂಚನೆ ನೀಡಿದ್ದರು.
41 ಕಾಮಗಾರಿಗಳಿಗೆ 411.88 ಕೋಟಿ ರೂ. ವೆಚ್ಚ: ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಯಾದಗಿರಿ, ಬೀದರ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಒಟ್ಟಾರೆ 411.88 ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ 12 ಪ್ರಾಥಮಿಕ ಆರೋಗ್ಯ ಕೇಂದ್ರ, 1 ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, 2 ತಾಲೂಕು ಆಸ್ಪತ್ರೆ ನಿರ್ಮಾಣಕ್ಕೆ, 6 ಪ್ರಾಥಮಿಕ ಅರೋಗ್ಯ ಕೇಂದ್ರದಿಂದ ಸಮುದಾಯ ಆರೋಗ್ಯ ಕೇಂದ್ರಕ್ಕೆ, 30 ಹಾಸಿಗೆಗಳಿಂದ 50 ಹಾಸಿಗೆಗೆ ಮೇಲ್ದರ್ಜೆಗೆ ಏರಿಸುವ 16 ಸಮುದಾಯ ಆರೋಗ್ಯ ಕೇಂದ್ರಗಳು, 1 ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 100 ಹಾಸಿಗೆಯ ತಾಲೂಕಾ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸುವುದು, 100 ಹಾಸಿಗೆ ಸಾಮಥ್ರ್ಯದ 3 ತಾಲೂಕಾ ಆಸ್ಪತ್ರೆ 150 ಹಾಸಿಗೆಗೆ ಮೇಲ್ದರ್ಜೆಗೇರಿಸುವ ಯೋಜನೆಗೆ ಇಂದಿಲ್ಲಿ ಚಾಲನೆ ದೊರೆತಿದೆ. ಒಟ್ಟಾರೆಯಾಗಿ 41 ಕಾಮಗಾರಿಗಳಿಗೆ 411.88 ಕೋಟಿ ರೂ. ವೆಚ್ಚ ಮಾಡಲಾಗುತ್ತಿದ್ದು, ಇದರಲ್ಲಿ ಕೆ.ಕೆ.ಆರ್.ಡಿ.ಬಿ ಮಂಡಳಿ 208.94 ಕೋಟಿ ರೂ. ಅನುದಾನ ನೀಡುವ ಮೂಲಕ ಪ್ರದೇಶದ ಅಭಿವೃದ್ಧಿಗೆ ಮುಂದಾಗಿದೆ.
ಗಿರಿ ಜಿಲ್ಲೆಗೆ 55.80 ಕೋಟಿ ರೂ.: ಆರೋಗ್ಯ ಆವಿಷ್ಕಾರ ಯೋಜನೆಯಡಿ ಯಾದಗಿರಿ ಜಿಲ್ಲೆಯ ಸುರಪೂರ ತಾಲೂಕಿನ ಮುದನುರು, ನಾರಾಯಣಪುರ, ಹೆಗ್ಗನದೊಡ್ಡಿ, ತಿಂಥಣಿಯಲ್ಲಿ ತಲಾ 4 ಕೋಟಿ ರೂ. ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ, 14 ಕೋಟಿ ರೂ. ವೆಚ್ಚದಲ್ಲಿ ಶಹಾಪೂರ ಗೋಗಿ ಪ್ರಾ.ಆ.ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ, ತಲಾ 6.45 ಕೋಟಿ ರೂ. ವೆಚ್ಚದಲ್ಲಿ ಶಹಾಪುರ ತಾಲೂಕಿನ ಡೋರಣಹಳ್ಳಿ, ಗುರುಮಠಕಲ್, ಹುಣಸಗಿ, ಕೆಂಭಾವಿ 30 ಹಾಸಿಗೆಯ ಸಮುದಾಯ ಆರೋಗ್ಯ ಕೇಂದ್ರಗಳನ್ನು 50 ಹಾಸಿಗೆ ಸಾಮಥ್ರ್ಯಕ್ಕೆ ಹೆಚ್ಚಿಸುವುದಕ್ಕೆ ಇಂದಿಲ್ಲಿ ಅಡಿಗಲ್ಲು ನೆರವೇರಿಸಿದ್ದು, ಇದರಿಂದ ಗಿರಿ ಜಿಲ್ಲೆ ಯಾದಗಿರಿಯಲ್ಲಿ 9 ಕಾಮಗಾರಿಗಳಿಗೆ 55.80 ಕೋಟಿ ರೂ. ವಿನಿಯೋಗಿಸಲಾಗುತ್ತಿದೆ.
ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಸಭೆ ವಿಪಕ್ಷ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ್, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳು ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪೂರ, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹಾದೇವಪ್ಪ, ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ.ಸುಧಾಕರ್, ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಸಚಿವ ಈಶ್ವರ ಬಿ. ಖಂಡ್ರೆ, ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿವ ಡಾ.ಶರಣಪ್ರಕಾಶ ಆರ್. ಪಾಟೀಲ್, ಪೌರಾಡಳಿತ ಮತ್ತು ಹಜ್ ಸಚಿವ ರಹೀಮ್ ಖಾನ್, ಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು, ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗ ಉಪಾಧ್ಯಕ್ಷ ಬಿ.ಆರ್.ಪಾಟೀಲ್, ಸಂಸದರಾದ ಜಿ.ಕುಮಾರ ನಾಯಕ್, ರಾಧಾಕೃಷ್ಣ ದೊಡ್ಡಮನಿ, ರಾಜ್ಯ ಸಭೆ ಸದಸ್ಯ ಡಾ.ಸೈಯದ್ ನಾಸೀರ್ ಹುಸೇನ್ ಇದ್ದರು.
ಇದಲ್ಲದೆ ವಿಧಾನಸಭೆ ಶಾಸಕರಾದ ಎಂ.ವೈ ಪಾಟೀಲ, ಅಲ್ಲಮಪ್ರಭು ಪಾಟೀಲ್, ಶರಣಗೌಡ ಕಂದಕೂರ, ರಾಜಾ ವೇಣುಗೋಪಾಲ ನಾಯಕ, ವಿಧಾನ ಪರಿಷತ್ ಶಾಸಕರಾದ ಡಾ.ಚಂದ್ರಶೇಖರ ಬಿ.ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ, ಭೀಮರಾವ ಬಿ.ಪಾಟೀಲ, ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಅಧ್ಯಕ್ಷ ಬಸನಗೌಡ ದದ್ದಲ್, ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಬಾಬುರಾವ್ ಚಿಂಚನಸೂರ್, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆ ಮತ್ತು ಯೋಜನಾ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ್, ಕಲಬುರಗಿ ವಿಭಾಗ ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ, ಕೆ.ಕೆ.ಆರ್.ಡಿ.ಬಿ. ಮಂಡಳಿ ಕಾರ್ಯದರ್ಶಿ ಎಂ.ಸುಂದರೇಶ ಬಾಬು, ಯಾದಗಿರಿ ಡಿ.ಸಿ. ಡಾ.ಬಿ.ಸುಶೀಲಾ, ಜಿಲ್ಲಾ ಪಂಚಾಯತ್ ಸಿ.ಇ.ಓ ಲವೀಶ್ ಓರಡಿಯಾ, ಎಸ್.ಪಿ. ಪೃತ್ವಿಕ್ ಶಂಕರ, ಅಪರ ಜಿಲ್ಲಾಧಿಕಾರಿ ಶರಣಪ್ಪ ಕೋಟೆಪ್ಪಗೋಳ ಸೇರಿದಂತೆ ಇತರೆ ಚುನಾಯಿತ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಜನಸ್ತೋಮ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.