
ಮಾಲೂರು ಜು.೩- ಬೆಂಗಳೂರಿನ ಕಲಾಸಿಪಾಳ್ಯಂ ಬಸ್ ನಿಲ್ದಾಣವನ್ನು ಜನೋಪಕಾರಿ ಶ್ರೀ ದೊಡ್ಡಣ್ಣ ಶೆಟ್ಟಿ ಬಸ್ ನಿಲ್ದಾಣವೆಂದು ನಾಮಕರಣ ಮಾಡುವ ಪ್ರಸ್ತಾವವನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದಲ್ಲಿ ನಡೆದ ಸಂಪುಟ ಸಭೆಯಯಲ್ಲಿ ಅಂಗೀಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಶೀಲನ ಧರ್ಮ ಸಂಸ್ಥೆ ಹಾಗೂ ಜ್ಯೋತಿನಗರ ವೈಶ್ಯ ಗಾಣಿಗ ಸಮುದಾಯದ ವತಿಯಿಂದ ಅಭಿನಂದನೆಗಳು ಸಲ್ಲಿಸುವುದಾಗಿ ಎಸ್ ಎಲ್ ಎನ್ ಧರ್ಮ ಸಂಸ್ಥೆಯ ಅಧ್ಯಕ್ಷ ಎಸ್ ಸುರೇಶ್ ತಿಳಿಸಿದ್ದಾರೆ.
ಜನೋಪಕಾರಿ ದೊಡ್ಡಣ್ಣ ಶೆಟ್ಟಿಯವರು ಸಮಾಜ ಸೇವೆಯನ್ನು ಮೈಗೂಡಿಸಿಕೊಂಡು ಅಂದಿನ ಕಾಲದಲ್ಲಿ ಸಮುದಾಯದ ಅಭಿವೃದ್ಧಿಗಾಗಿ ಹಾಸ್ಟೆಲ್ ಹಾಗೂ ಎಲ್ಲಾ ವರ್ಗದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಶಿಕ್ಷಣ ಸಂಸ್ಥೆಯನ್ನು ತೆರೆಯಲು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಭೂಮಿಯನ್ನು ಪಡೆದು ಯಾವುದೇ ಸ್ವಾರ್ಥವಿಲ್ಲದೆ ತಮ್ಮ ಜೀವನವನ್ನು ಸಮಾಜಕ್ಕಾಗಿ ಮುಡುಪಾಗಿಟ್ಟಿದ್ದರು, ಅವರು ನಮ್ಮೊಂದಿಗೆ ಇಲ್ಲದಿದ್ದರೂ ಸಹ ಅವರು ಮಾಡಿರುವ ಸಮಾಜ ಸೇವೆ ಹಾಗೂ ಶಿಕ್ಷಣ ಸಂಸ್ಥೆಗಳು ಶಾಶ್ವತವಾಗಿ ಉಳಿದಿವೆ.
ಅವರ ಹೆಸರನ್ನು ಕಲಾಸಿಪಾಳ್ಯ ಬಸ್ ನಿಲ್ದಾಣಕ್ಕೆ ಇಡಲು ಹಲವು ಬಾರಿ ಪ್ರಯತ್ನಗಳು ನಡೆದು ವಿಫಲವಾಗಿದ್ದವು ಆದರೆ ಆಡಳಿತ ಮಂಡಳಿ ಮಾಜಿ ಸಭಾಪತಿ ವಿ ಆರ್ ಸುದರ್ಶನ್ ರವರ ಸಹಕಾರದಿಂದ ಪುನಃ ಪ್ರಯತ್ನ ಪಟ್ಟು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸಾರಿಗೆ ಸಚಿವರಿಗೆ ಅವರಿಗೆ ಮನವಿ ಪತ್ರ ಸಲ್ಲಿಸಿ ಮನವಿ ಮಾಡಿದ ಮೇರೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದಲ್ಲಿ ನಡೆದ ರಾಜ್ಯ ಸಚಿವ ಸಂಪುಟದಲ್ಲಿ ಜನೋಪಕಾರಿ ದೊಡ್ಡಣ್ಣ ಶೆಟ್ಟಿಯವರ ಹೆಸರಿನಲ್ಲಿ ಕಲಾಸಿಪಾಳ್ಯ ಬಸ್ ನಿಲ್ದಾಣ ನಾಮಕರಣ ಮಾಡಲು ಸಂಪುಟ ಸಭೆಯು ತೀರ್ಮಾನಿಸಿರುವುದು ಧರ್ಮ ಸಂಸ್ಥೆ ಹಾಗೂ ಸಮುದಾಯಕ್ಕೆ ಸಂತೋಷ ತಂದಿದೆ.
ಸಂಸ್ಥೆಯ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ, ಮಾಜಿ ಸಭಾಪತಿ ವಿ ಆರ್ ಸುದರ್ಶನ್ ಅವರಿಗೆ ಹಾಗೂ ಸಂಪುಟ ಸಭೆಯ ಸಚಿವರಿಗೆ ಧರ್ಮ ಸಂಸ್ಥೆ ಹಾಗೂ ಜನಾಂಗದ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಲಾಗುವುದು, ಜುಲೈ ೨೬ರಂದು ನಡೆಯಲಿರುವ ಜನೋಪಕಾರಿ ದೊಡ್ಡಣ್ಣ ಶೆಟ್ಟಿಯವರ ಆರಾಧನಾ ಮಹೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಆಹ್ವಾನಿಸಿ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಜ್ಯೋತಿನಗರ ವೈಶ್ಯ ಗಾಣಿಗ ಸಮಾಜದ ಬಂಧುಗಳು ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಹಾಸ್ಟೆಲ್‌ನ ಹಳೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆರಾಧನಾ ಮಹೋತ್ಸವದಲ್ಲಿ ಭಾಗವಹಿಸುವಂತೆ ಕೋರಿದ್ದಾರೆ.