25 ವರ್ಷ ಪೂರೈಸಿದ ಕಲಬುರಗಿ ಬಯಲು ಗ್ರಂಥಾಲಯ

ಕಲಬುರಗಿ:ನ.27: ಸಾರ್ವಜನಿಕರಲ್ಲಿ ಓದುವ ಹವ್ಯಾಸ ಹೆಚ್ಚಿಸುವ ಹಿನ್ನಲೆಯಲ್ಲಿ ಹಿರಿಯ ಪತ್ರಕರ್ತ ಸುಭಾಷ್ ಬಣಗಾರ್ ಅವರು ವಿಭಿನ್ನ ಕಲ್ಪನೆಯೊಂದಿಗೆ ಕಲಬುರಗಿಯ ಸಾರ್ವಜನಿಕ ಉದ್ಯಾನವನದಲ್ಲಿ 2000, ನವೆಂಬರ್ 26ರಂದು ಆರಂಭಿಸಿದ ‘ಬಯಲು ಗ್ರಂಥಾಯಲ’ಕ್ಕೆ 25 ವರ್ಷಗಳು ಪೂರೈಸಿದ ಹಿನ್ನಲೆಯಲ್ಲಿ ಇಂದು ಸಾಂಕೇತಿಕವಾಗಿ ಬಯಲು ಗ್ರಂಥಾಲಯದ ಬೆಳ್ಳಿಹಬ್ಬದ ವಾರ್ಷಿಕ ಪೂಜೆಯನ್ನು ಬಯಲು ಗ್ರಂಥಾಲಯದಲ್ಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಬಯಲು ಗ್ರಂಥಾಲಯದ ಓದುಗರು ಮಾತ್ರವಲ್ಲದೆ ಶಾರದಾ ಬಣಗಾರ, ವಿರೇಶ ಬಣಗಾರ ಸೇರಿದಂತೆ ಹಲವಾರು ಜನರು ಭಾಗವಹಿಸಿ ಶುಭ ಹಾರೈಸಿದರು.
ಕಳೆದ 25 ವರ್ಷಗಳ ಹಿಂದ ವಿಭಿನ್ನ ಕಲ್ಪನೆಯೊಂದಿಗೆ ಆರಂಭಿಸಲಾದ ಈ ಬಯಲು ಗ್ರಂಥಾಲಯದಲ್ಲಿ ಓದಿದ ಹಲವಾರು ಯುವಕರು ತಮ್ಮ ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿಕೊಂಡು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಿ ಶಿಕ್ಷಕ, ಪೆÇಲೀಸ್ ಸೇರಿದಂತೆ ವಿವಿಧ ಸರಕಾರಿ, ಖಾಸಗಿ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇದೇ ಮಾದರಿಯಲ್ಲಿಯೇ ಕರ್ನಾಟಕ ಸೇರಿದಂತೆ ಹೊರರಾಜ್ಯಗಳಲ್ಲೂ ಬಯಲು ಗ್ರಂಥಾಲಯ ಆರಂಭಿಸಲಾಗಿದ್ದು ಸಂತಸದ ಸಂಗತಿ ಎಂದು ಶಾರದಾ ಬಣಗಾರ ಅಭಿಪ್ರಾಯ ಪಟ್ಟರು.
ಬಯಲು ಗ್ರಂಥಾಲಯ ನಡೆದು ಬಂದ ಇತಿಹಾಸದ ಕುರಿತು ಮೆಲಕು ಹಾಕಿದ ಅವರು, ಸರಕಾರದ ಸಹಾಯವಿಲ್ಲದೆ ಹಿರಿಯ ಪತ್ರಕರ್ತರು, ಸಂಘ-ಸಂಸ್ಥೆಗಳ ಮುಖಂಡರ ಸಲಹೆ ಸಹಕಾರದೊಂದಿಗೆ ಕಳೆದ 25 ವರ್ಷಗಳಿಂದ ನಡೆದುಕೊಂಡು ಬರುತ್ತಿರುವುದು ಇದೊಂದು ಮಾದರಿಯ ಗ್ರಂಥಾಲಯವೇ ಆಗಿದೆ. ಸುಭಾಷ ಬಣಗಾರ ಅವರ ನಿಸ್ವಾರ್ಥ ಸೇವೆ ನಮಗೆಲ್ಲ ಮಾದರಿಯಾಗಿದೆ. ಅವರ ಸಮಾಜ ಸೇವಾ ಕಾರ್ಯಕ್ಕೆ ಬೆಂಬಲ ನೀಡುತ್ತಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಬಯಲು ಗ್ರಂಥಾಲಯದಲ್ಲಿ ಇಂದು ನಡೆದ ಈ ಪೂಜಾ ಕಾರ್ಯಕ್ರಮ ಸಾಂಕೇತಿಕವಾಗಿದ್ದು, ಮುಂದಿನ ದಿನಗಳಲ್ಲಿ ಅದ್ದೂರಿಯಾಗಿ ಸಮಾರಂಭ ನಡೆಸಲಾಗುತ್ತದೆ ಎಂದು ವಿರೇಶ ಬಣಗಾರ ಅವರು ಈ ಸಂದರ್ಭದಲ್ಲಿ ತಿಳಿಸಿದರು. ಈ ಬಯಲು ಗ್ರಂಥಾಲಯ ಮಾದರಿಯಲ್ಲಿಯೇ ರಾಜ್ಯದ ವಿವಿಧೆಡೆ ಆರಂಭವಾಗಿದ್ದನ್ನು ಸಾಮಾಜಿಕ ಜಾಲ ತಾಣದಲ್ಲಿ ನೋಡಬಹುದಾಗಿದೆ. ಇದು ದೇಶದ ಮೊದಲ ಬಯಲು ಗ್ರಂಥಾಲಯ ಎಂದೂ ಹೇಳಲಾಗುತ್ತದೆ. ಇದು ಈ ನಾಡಿನ ಶಕ್ತಿ, ಈ ನೆಲದ ಶರಣರ ಕೃಪೆ ಎನ್ನಬಹುದು ಎಂದರು.
ಬಯಲು ಗ್ರಂಥಾಲಯ ಆರಂಭವಾಗಿ 25 ವರ್ಷಗಳು ತುಂಬಿದ ಈ ಸಂದರ್ಭದಲ್ಲಿ ಬೆಳ್ಳಿ ಹಬ್ಬ ಸಮಾರಂಭ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಈ ಕುರಿತು ಬಯಲು ಗ್ರಂಥಾಲಯದ ರೂವಾರಿಯೂ ಆದ ಹಿರಿಯ ಪತ್ರಕರ್ತ ಸುಭಾಷ ಬಣಗಾರ ಅವರು ತಿಳಿಸಿದ್ದಾರೆ ಎಂದು ಹೇಳಿದರು.