
ಕಲಬುರಗಿ, ಅ. 17: ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠವು ಕಳೆದ ಒಂದು ವರ್ಷದಲ್ಲಿ 188 ದಿನಗಳ ವಿಚಾರಣೆ ನಡೆಸಿ ಒಟ್ಟು 3,694 ಪ್ರಕರಣಗಳನ್ನು ವಿಲೇವಾರಿ ಮಾಡಿದೆ. ಸಕಾಲಕ್ಕೆ ಮಾಹಿತಿ ನೀಡದ 80 ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ 7.78 ಲಕ್ಷ ದಂಡ ವಿಧಿಸಿದ್ದು, 35 ಅರ್ಜಿದಾರರಿಗೆ 96 ಸಾವಿರ ಪರಿಹಾರ ನೀಡಲು ಆದೇಶಿಸಲಾಗಿದೆ ಎಂದು ರಾಜ್ಯ ಮಾಹಿತಿ ಆಯುಕ್ತ ಬಿ. ವೆಂಕಟಸಿಂಗ್ ತಿಳಿಸಿದರು.
ಗುರುವಾರ ನಗರದ ಮಹಲ್-ಎ-ಶಾಹಿ ಅತಿಥಿಗೃಹದಲ್ಲಿರುವ ಪೀಠದ ಕಚೇರಿಯಲ್ಲಿ ಆಯೋಗದ ಕಾರ್ಯವೈಕರಿ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರ ವಹಿಸಿಕೊಂಡು ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪೀಠದ ಕಾರ್ಯಚಟುವಟಿಕೆಗಳ ವಿವರ ನೀಡಿದರು. 2025ರ ನವೆಂಬರ್ 25 ರಿಂದ ಪ್ರಕರಣಗಳ ವಿಚಾರಣೆ ಆರಂಭಿಸಲಾಗಿದ್ದು, ಈವರೆಗೆ 7,262 ಪ್ರಕರಣಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಾಗಿದೆ. ಇವುಗಳಲ್ಲಿ 3,694 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಅಧಿಕಾರಿಗಳಿಗೆ ವಿಧಿಸಿರುವ ದಂಡದಲ್ಲಿ 7.37 ಲಕ್ಷ ವಸೂಲಿ ಮಾಡಲಾಗಿದೆ ಎಂದು ತಿಳಿಸಿದರು.
ಕಲಬುರಗಿ ಪೀಠದಲ್ಲಿ ಈವರೆಗೆ ಮಾಹಿತಿ ಕೋರಿ ಒಟ್ಟು 20,398 ದ್ವಿತೀಯ ಮೇಲ್ಮನವಿ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ 13,468 ಪ್ರಕರಣಗಳು ವಿಲೇವಾರಿಯಾಗಿದ್ದು, 6,930 ಪ್ರಕರಣಗಳು ವಿಚಾರಣೆಗೆ ಬಾಕಿ ಉಳಿದಿವೆ. ಈ ವರ್ಷದ ಫೆಬ್ರವರಿಯಿಂದ ಕಲಬುರಗಿ ಪೀಠದಲ್ಲಿಯೇ ದ್ವಿತೀಯ ಮೇಲ್ಮನವಿ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದ್ದು, ಈವರೆಗೆ 2,432 ಅರ್ಜಿಗಳು ಸಲ್ಲಿಕೆಯಾಗಿವೆ ಎಂದರು.
ಜಿಲ್ಲಾವಾರು ಬಾಕಿ ಪ್ರಕರಣಗಳಲ್ಲಿ ರಾಯಚೂರಿನಲ್ಲಿ 2,059, ಕಲಬುರಗಿಯಲ್ಲಿ 1,483, ಬಳ್ಳಾರಿಯಲ್ಲಿ 885, ಯಾದಗಿರಿಯಲ್ಲಿ 665, ಕೊಪ್ಪಳದಲ್ಲಿ 649, ವಿಜಯನಗರದಲ್ಲಿ 629 ಹಾಗೂ ಬೀದರನಲ್ಲಿ 560 ಪ್ರಕರಣಗಳಿವೆ ಎಂದು ವಿವರಿಸಿದರು.
ಕಲಬುರಗಿ ಮತ್ತು ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಸಾರ್ವಜನಿಕ ಪ್ರಾಧಿಕಾರವೆಂದು ಆಯೋಗ ಆದೇಶಿಸಿರುವುದು ಪ್ರಮುಖ ಬೆಳವಣಿಗೆಯಾಗಿದೆ. ಸಿರವಾರ ಪೆÇಲೀಸ್ ಠಾಣೆಯಲ್ಲಿ ಸಿಸಿಟಿವಿ ದೃಶ್ಯಾವಳಿಗಳ ಮಾಹಿತಿ ನೀಡಲು ವಿಳಂಬ ಮಾಡಿದ ಮೂವರು ಪಿಎಸ್ಐಗಳಿಗೆ ತಲಾ 25 ಸಾವಿರ ದಂಡ ವಿಧಿಸಲಾಗಿದೆ. ಈ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಯೋಗ ಶಿಫಾರಸು ಮಾಡಿದ್ದು, ಪೆÇಲೀಸ್ ಇಲಾಖೆ ನೋಟಿಸ್ ಜಾರಿ ಮಾಡಿದೆ ಎಂದು ತಿಳಿಸಿದರು.
ಶಾಶ್ವತ ಕಟ್ಟಡಕ್ಕೆ ಪ್ರಸ್ತಾವನೆ:
ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಕಲಬುರಗಿ ಪೀಠವು 2024ರಿಂದ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ಲೋಕೋಪಯೋಗಿ ಇಲಾಖೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಶಾಶ್ವತ ಕಟ್ಟಡ ನಿರ್ಮಾಣಕ್ಕೆ ನಿವೇಶನ ಒದಗಿಸುವಂತೆ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಸಿಬ್ಬಂದಿ ಕೊರತೆ ನೀಗಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಗೊಂದಲ ನಿವಾರಿಸಲು ಏಳು ಜಿಲ್ಲೆಗಳಲ್ಲಿ ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ ಎಂದು ಬಿ. ವೆಂಕಟಸಿಂಗ್ ತಿಳಿಸಿದರು.
























