ಅ.28ರಂದು ಶಾಂತಿ ಸಭೆಗೆ ಕಲಬುರಗಿ ಹೈಕೋರ್ಟ್ ನಿರ್ದೇಶನಎಲ್ಲ ಸಂಘಟನೆಗಳ ಮುಖಂಡರಿಗೆ ಜಿಲ್ಲಾಡಳಿತ ಶೀಘ್ರ ನೋಟಿಸ್

ಕಲಬುರಗಿ: ಅ.25- ಚಿತ್ತಾಪುರ ಪಟ್ಟಣದಲ್ಲಿ ಆರ್.ಎಸ್.ಎಸ್ ಒಳಗೊಂಡಂತೆ ಇತರ ಏಳು ಸಂಘಟನೆಗಳು ಪಥ ಸಂಚಲನ ನಡೆಸುವ ವಿಷಯಕ್ಕೆ ಕುರಿತಂತೆ ಅ.28ರಂದು ಎಲ್ಲ ಸಂಘಟನೆಗಳ ಮುಖಂಡರೊಂದಿಗೆ ಶಾಂತಿಸಭೆ ನಡೆಸಿ, ಅ.30ರಂದು ಸಭೆಯ ಸಾರಾಂಶವನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಹೈಕೋರ್ಟ್ ಕಲಬುರಗಿ ಪೀಠ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ ಬೆನ್ನಲ್ಲೇ ಜಿಲ್ಲಾಡಳಿತ ಎಲ್ಲ ಸಂಘಟನೆಗಳ ಮುಖಂಡರಿಗೆ ನೋಟಿಸ್ ಜಾರಿ ಮಾಡಲು ಮುಂದಾಗಿದೆ.

ಶುಕ್ರವಾರ ಆರ್.ಎಸ್.ಎಸ್. ಪರವಾಗಿ ಜಿಲ್ಲಾ ಸಂಚಾಲಕ ಅಶೋಕ ಪಾಟೀಲ್ ಅವರು ಸಲ್ಲಿಸಿದ್ದ ಅರ್ಜಿಯ ಮುಂದುವರೆದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಎಂ.ಜಿ.ಎಸ್ ಕಮಾಲ್ ಅವರು ಆರ್.ಎಸ್.ಎಸ್. ಒಳಗೊಂಡಂತೆ ಪಥ ಸಂಚಲನಕ್ಕೆ ಮುಂದಾಗಿರುವ ಎಲ್ಲ ಸಂಘಟನೆಗಳ ಮುಖಂಡರಿಗೆ ಆಹ್ವಾನ ನೀಡಿ ಶಾಂತಿ ಸಭೆ ನಡೆಸುವಂತೆ ನಿರ್ದೇಶನ ನೀಡಿದರು.

ಇದಕ್ಕೂ ಮುಂಚೆ ರಾಜ್ಯ ಸರ್ಕಾರದ ಪರವಾಗಿ ತಮ್ಮ ವಾದ ಮಂಡಿಸಿದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲು ಎರಡು ವಾರಗಳ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಈ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಆರ್.ಎಸ್.ಎಸ್. ಪರ ವಕೀಲ ಅರುಣ್ ಶ್ಯಾಂ ನಿತ್ಯ ಕೆಲವರು ತಾವು ಸಹ ಪಥ ಸಂಚಲನ ನಡೆಸುವುದಾಗಿ ಮನವಿ ಪತ್ರ ಸಲ್ಲಿಸುತ್ತಿದ್ದಾರೆ. ಹೀಗಿರುವಾಗ ಅರ್ಜಿ ವಿಚಾರಣೆಗೆ ಎರಡು ವಾರಗಳ ಕಾಲಾವಕಾಶ ನೀಡಿದರೆ ಪರಿಸ್ಥಿತಿ ಮತ್ತಷ್ಟು ಕೈಮೀರುವ ಸಾಧ್ಯತೆಯಿದೆ. ಹೀಗಾಗಿ, ಪ್ರಕರಣದ ವಿಚಾರಣೆ ಆದಷ್ಟು ಬೇಗ ಪೂರ್ಣಗೊಳಿಸಿ ಪಥ ಸಂಚಲನಕ್ಕೆ ಅವಕಾಶ ನೀಡಬೇಕೆಂದು ಮನವಿ ಮಾಡಿದರು.

ಈ ಹಂತದಲ್ಲಿ ನ್ಯಾಯಮೂರ್ತಿಗಳು ಮಾತನಾಡಿ, ಅ.28ರಂದು ಎಲ್ಲ ಸಂಘಟನೆಗಳ ಮುಖಂಡರನ್ನು ಒಳಗೊಂಡ ಶಾಂತಿಸಭೆ ನಡೆಸಬೇಕು. ಇದರ ಜೊತೆಗೆ, ಸಂಘಟನೆಗಳ ಪಥ ಸಂಚಲನಕ್ಕಾಗಿ ಅವಕಾಶ ಕೋರಿ ವಿವಿಧ ಸಂಘಟನೆಗಳು ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿರುವ ಹಿನ್ನೆಲೆಯಲ್ಲಿ ಆದಷ್ಟು ಬೇಗ ಜಿಲ್ಲಾಡಳಿತ ಕೈಗೊಂಡಿರುವ ಬಂದೋಬಸ್ತ್ ಕ್ರಮಗಳ ಕುರಿತು ನ್ಯಾಯಾಲಯಕ್ಕೆ ಅ.30ರಂದು ವರದಿ ಸಲ್ಲಿಸಬೇಕು. ಈ ನಿಟ್ಟಿನಲ್ಲಿ ಹೆಚ್ಚು ಎಳೆದಾಡುವ ಪ್ರಯತ್ನ ಮಾಡುವುದು ಸರಿಯಲ್ಲಿ ಎಂದು ಮೌಖಿಕವಾಗಿ ನುಡಿದರು.

ಈ ಮಧ್ಯೆ, ಶನಿವಾರ ಮತ್ತು ಭಾನುವಾರ ರಜೆ ಇರುವ ಕಾರಣಕ್ಕಾಗಿ ಕೋರ್ಟ್ ನಿರ್ದೇಶನದ ಪ್ರತಿ ಸೋಮವಾರ ಜಿಲ್ಲಾಡಳಿತದ ಕೈಸೇರುವ ಹಿನ್ನೆಲೆಯಲ್ಲಿ ಆ ಬಳಿಕವೇ ಜಿಲ್ಲಾಡಳಿತ ತಾನು ಕೈಗೊಂಡಿರುವ ಕ್ರಮಗಳ ಕುರಿತು ನ್ಯಾಯಾಲಯಕ್ಕೆ ವರದಿ ಸಲ್ಲಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.