
ಯಾದಗಿರಿ :ಫೆ.16:ವಡಗೇರಾ ತಾಲೂಕಿನ ಕಾಡಂಮಗೆರಾ (ಬಿ) ಗ್ರಾಮದಲ್ಲಿ ಮೂಲಸೌಕರ್ಯಗಳ ಅಭಾವ ತೀವ್ರವಾಗಿದ್ದು, ಗ್ರಾಮಸ್ಥರು ದಿನನಿತ್ಯ ಸಂಕಷ್ಟ ಅನುಭವಿಸುವಂತಾಗಿದೆ. ಗ್ರಾಮದ ಬಸವಣ್ಣ ಮಠದಿಂದ ಕೆಂಚಮ್ಮ ದೇವಿ ದೇವಸ್ಥಾನ ರಸ್ತೆ ಮಧ್ಯಭಾಗದಿಂದ ಸ್ಮಶಾನವರೆಗೆ ರಸ್ತೆ ನಿರ್ಮಾಣ ಹಾಗೂ ಸಮರ್ಪಕ ಚರಂಡಿ ವ್ಯವಸ್ಥೆ ಕಲ್ಪಿಸಬೇಕೆಂಬ ಬೇಡಿಕೆ ಕಳೆದ ಎರಡು ವರ್ಷಗಳಿಂದ ನಿರ್ಲಕ್ಷ್ಯಕ್ಕೊಳಗಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಕೊಳಚೆ ನೀರು ರಸ್ತೆಮೇಲೆ ಹರಿದು ದುರ್ವಾಸನೆ ವ್ಯಾಪಿಸುತ್ತಿದ್ದು, ಸಾರ್ವಜನಿಕರು ಸಂಚಾರಕ್ಕೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ವಿಶೇಷವಾಗಿ ವೃದ್ಧರು, ಮಹಿಳೆಯರು ಹಾಗೂ ಶಾಲಾ ಮಕ್ಕಳು ಕಾದು-ಕುಳಿಗಳ ನಡುವೆ ಸಂಚರಿಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲದಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟು, ರಸ್ತೆಯೇ ಕಾಣದಂತಾಗುತ್ತದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಈ ಕುರಿತು ಗ್ರಾಮ ಪಂಚಾಯಿತಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಸ್ಪಂದನೆ ದೊರಕಿಲ್ಲ. ರಸ್ತೆ ನಿರ್ಮಾಣ ಮತ್ತು ಒಳಚರಂಡಿ ಕಾಮಗಾರಿಗೆ ಅನುದಾನ ಮಂಜೂರು ಮಾಡಿ ಶೀಘ್ರದಲ್ಲಿ ಕಾಮಗಾರಿ ಆರಂಭಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಸಂಬಂಧ ಮಾತನಾಡಿದ ಊರಿನ ಮುಖಂಡ ಯಲ್ಲಪ್ಪ ನಾಯಕ್ ಅವರು, “ಗ್ರಾಮದ ಜನರು ಎರಡು ವರ್ಷಗಳಿಂದ ಕೊಳಚೆ ನೀರಿನ ಮಧ್ಯೆ ಸಂಚಾರ ಮಾಡುತ್ತಿದ್ದಾರೆ. ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ತಕ್ಷಣ ಸ್ಥಳ ಪರಿಶೀಲನೆ ನಡೆಸಿ ರಸ್ತೆ ಹಾಗೂ ಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳದಿದ್ದರೆ ಗ್ರಾಮಸ್ಥರೊಂದಿಗೆ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಗ್ರಾಮದಲ್ಲಿ ಆರೋಗ್ಯ ಸಮಸ್ಯೆಗಳು ಉಂಟಾಗುವ ಭೀತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಆಡಳಿತ ತುರ್ತು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.



























