ದಲಿತರು, ಮಹಿಳೆಯರಿಗೆ ಜ್ಞಾನದ ಬೆಳಕು ನೀಡಿದ ಜ್ಯೋತಿಬಾ ಪುಲೆ

ತುಮಕೂರು, ನ. ೨೯- ಶಿಕ್ಷಣ ಕ್ರಾಂತಿಯ ಹರಿಕಾರರಾದ ಮಹಾತ್ಮ ಜ್ಯೋತಿಬಾ ಪುಲೆ ಅವರ ಸ್ಮರಣ ದಿನದ ಅಂಗವಾಗಿ ಎಐಡಿಎಸ್‌ಓ ವತಿಯಿಂದ ನಗರದ ಸರ್ವೋದಯ ಶಾಲೆ ಮೈದಾನ, ಅಮಾನಿಕೆರೆ ಪಾರ್ಕ್ ಸೇರಿದಂತೆ ಹಲವು ಶಾಲಾ-ಕಾಲೇಜುಗಳಲ್ಲಿ ಕಾರ್ಯಕ್ರಮವನ್ನು ನಡೆಸಲಾಯಿತು.


ಕಾರ್ಯಕ್ರಮದಲ್ಲಿ ಎಐಡಿಎಸ್‌ಓ ಜಿಲ್ಲಾ ಕಾರ್ಯದರ್ಶಿ ಲಕ್ಕಪ್ಪ ಬಿರಾದಾರ ಮಾತನಾಡಿ, ಶಿಕ್ಷಣವು ಸಾರ್ವತ್ರಿಕವಾಗಿರಬೇಕು ಮತ್ತು ಎಷ್ಟೇ ಸಂಖ್ಯೆಯಿದ್ದರೂ, ಅದು ಎಲ್ಲರನ್ನೂ ತಲುಪುವಂತೆ ಇರಬೇಕು ಎಂದು ಬಲವಾಗಿ ಪ್ರತಿಪಾದಿಸಿದ ಮಹಾತ್ಮ ಜ್ಯೋತಿಬಾ ಫುಲೆ ಅವರು ಈ ದೇಶದ ಬಡವರಿಂದ ಸುಂಕ ವಸೂಲಿ ಮಾಡುತ್ತಿದ್ದ ಪರಕೀಯ ಬ್ರಿಟೀಷ್ ಸರ್ಕಾರವು ಶಿಕ್ಷಣಕ್ಕೆ ಒತ್ತು ನೀಡುವಂತೆ ಧ್ವನಿ ಎತ್ತಿದರು. ಅಜ್ಞಾನದ ಅಂಧಕಾರವನ್ನು ಹೊಡೆದೋಡಿಸಲು ಮಹಿಳೆ ಮತ್ತು ದಲಿತರಿಗೆ ಜ್ಞಾನದ ಬೆಳಕನ್ನು ನೀಡಲು ಅವರು ಶಾಲೆಗಳನ್ನು ಆರಂಭಿಸಿದರು. ಕೇವಲ ಶಿಕ್ಷಣದಿಂದ ಮಾತ್ರವೇ ಮನುಷ್ಯರು ವಿಮರ್ಶಾತ್ಮಕ ಧೋರಣೆ ಮತ್ತು ಆತ್ಮ ಸಮ್ಮಾನವನ್ನು ಹೊಂದಲು ಸಾಧ್ಯ ಎಂಬುದನ್ನು ಜ್ಯೋತಿಬಾ ಪುಲೆ ಬಲವಾಗಿ ಪ್ರತಿಪಾದಿಸಿದರು. ಅವರು ಹುಟ್ಟಿ ೨ ಶತಮಾನಗಳ ನಂತರವೂ ಸರ್ಕಾರಗಳ ಧೋರಣೆ ಹೇಗಿದೆ ಎಂದು ಪ್ರಶ್ನಿಸಿದರು.


ಜ್ಯೋತಿಬಾ ಅವರು ಮೊದಲ ಶಾಲೆ ತೆರೆದಾಗ, ಅಂದಿನ ಪಟ್ಟಭದ್ರರು ಮತ್ತು ಪುರೋಹಿತಶಾಹಿಗಳು ಅವರ ವಿರುದ್ಧ ಆಕ್ರೋಶದಿಂದ ಹರಿಹಾಯ್ದರು. ’ಜ್ಞಾನದೇವಿ ಸರಸ್ವತಿಯು ಶೂದ್ರರ ಮನೆ ಹೊಕ್ಕಿರುವುದು ಎಂತಹ ಅನರ್ಥ!’ ಎಂದು ಅವರು ಗುಲ್ಲೆಬ್ಬಿಸಿದರು. ಮೌಢ್ಯ-ಕಂದಾಚಾರಗಳ ಪ್ರತಿಪಾದಕರ ಕಿರುಕುಳ ಮಿತಿಮೀರಿ ಜ್ಯೋತಿಬಾ ಅವರ ಕುಟುಂಬದ ನೆಮ್ಮದಿಯನ್ನು ಹಾಳುಗೆಡವಿತು. ದಾರಿ ತಪ್ಪಿರುವ ಮಗ ಮತ್ತು ಸೊಸೆಗೆ ಬುದ್ಧಿ ಹೇಳುವಂತೆ ಅವರ ತಂದೆ ಗೋವಿಂದ ರಾವ್ ಅವರ ಮೇಲೆ ದಿನನಿತ್ಯ ಒತ್ತಡ ಹೆಚ್ಚಾಯಿತು. ಈ ಒತ್ತಡಕ್ಕೆ ಮಣಿದ ತಂದೆ, ಶಾಲೆಯನ್ನು ಮುಚ್ಚದಿದ್ದರೆ ಮನೆಯಲ್ಲಿ ಇಬ್ಬರಿಗೂ ಜಾಗ ಇಲ್ಲ ಎಂಬ ಕಟುವಾದ ನಿಲುವನ್ನು ತಾಳಿದರು. ಎದೆಗುಂದದ ಜ್ಯೋತಿಬಾ, ’ಮನೆ ತೊರೆದೇನು, ಆದರೆ ಶಾಲೆ ಮುಚ್ಚುವುದಿಲ್ಲ!’ ಎಂದು ಮಡದಿ ಸಾವಿತ್ರಿಬಾಯಿಯೊಡನೆ ತಂದೆಯ ಮನೆಯನ್ನು ತೊರೆ ದರು. ಈಗ ಎದುರಾದ ಆರ್ಥಿಕ ಸಂಕಷ್ಟದಿಂದಾಗಿ, ಆರಂಭಗೊಂಡ ಆರು ತಿಂಗಳಲ್ಲೇ ಮೊದಲ ಶಾಲೆಯನ್ನು ಮುಚ್ಚಬೇಕಾಯಿತು. ಜೀವನೋಪಾಯಕ್ಕಾಗಿ ಜ್ಯೋತಿಬಾ ಅವರು ವ್ಯಾಪಾರ ಮಾಡಬೇಕಾಯಿತು ಎಂದು ವಿವರಿಸಿದರು.


೧೮೭೦ರಲ್ಲಿ ಇಂಗ್ಲೆಂಡಿನಲ್ಲಿ ಶಿಕ್ಷಣ ಕಾಯ್ದೆ ಮೂಲಕ ಪ್ರಾಥಮಿಕ ಶಿಕ್ಷಣವನ್ನು ಉಚಿತ ಮತ್ತು ಕಡ್ಡಾಯಗೊಳಿಸಲಾಗಿತ್ತು. ಅನೇಕ ವಿಷಯಗಳ ಕುರಿತು ’ದೀನ ಬಂಧು’ ಪತ್ರಿಕೆಯಲ್ಲಿ ಲೇಖನಗಳನ್ನು ಬರೆಯುತ್ತಿದ್ದ ಜ್ಯೋತಿಬಾ ೧೮೭೯-೮೦ರಲ್ಲಿ ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣದ ಕುರಿತು ಬರೆದರು ಮತ್ತು ವಿಳಂಬ ಮಾಡದೇ ಅದನ್ನು ಜಾರಿಗೊಳಿಸಬೇಕು ಎಂದು ಅವರು ಆಗ್ರಹಿಸಿದರು.


ಆದರೆ ಇಂದು ರಾಜ್ಯ ಸರ್ಕಾರವು ಕೆಪಿಎಸ್ ಮ್ಯಾಗ್ನೆಟ್ ಶಾಲೆ ಯೋಜನೆಯಡಿ ೪೦,೦೦೦ಕ್ಕೂ ಅಧಿಕ ಶಾಲೆಗಳನ್ನು ಮುಚ್ಚಲು ಹೊರಟಿದೆ. ಸಮೂಹ ಶಿಕ್ಷಣಕ್ಕಾಗಿ ತೆರೆದ ಹಳ್ಳಿಯ ಶಾಲೆಗಳನ್ನು ಮುಚ್ಚಿ, ಕೇವಲ ಗ್ರಾಮ ಪಂಚಾಯಿತಿಗೆ ಒಂದರಂತೆ ಆರಂಭವಾಗಲಿರುವ ಈ ಮ್ಯಾಗ್ನೆಟ್ ಶಾಲೆಗಳಡಿ ವಿಲೀನಗೊಳಿಸಲಾಗುತ್ತದೆ. ವಿದೇಶಿ ಬ್ಯಾಂಕಿನಿಂದ ಸಾಲ ಪಡೆದು ಮೊದಲ ಹಂತದಲ್ಲಿ, ೮೦೦ ಶಾಲೆಗಳನ್ನು ಮ್ಯಾಗ್ನೆಟ್ ಶಾಲೆಗಳು ಎಂದು ಗುರುತಿಸಲಾಗಿದೆ. ಅಂದರೆ ಕರ್ನಾಟಕ ಪಬ್ಲಿಕ್ ಶಾಲೆಯ ಸುತ್ತಮುತ್ತಲಿನ ೬ ರಿಂದ ೭ ಕಿ.ಮೀ ವ್ಯಾಪ್ತಿಯ ಶಾಲೆಗಳನ್ನು ತನ್ನಲ್ಲಿ ವಿಲೀನಗೊಳಿಸಿಕೊಳ್ಳಲಿದೆ ಎಂದರು.


ಕೇವಲ ಕೆಪಿಎಸ್ ಶಾಲೆಯಿಂದ ಸಮಸ್ಯೆಯಿಲ್ಲ. ಆದರೆ ಕೇವಲ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತೆರೆಯುವ ಕೆಪಿಎಸ್- ಮ್ಯಾಗ್ನೆಟ್ ಶಾಲೆ ಅತ್ಯಂತ ಅಪಾಯಕಾರಿಯಾಗಿದೆ. ಏಕೆಂದರೆ, ಕರ್ನಾಟಕದಲ್ಲಿ ಒಟ್ಟು ೪೯,೬೦೦ ಸರ್ಕಾರಿ ಶಾಲೆಗಳಿದೆ. ರೂ.೩೦,೦೦೦ ಗ್ರಾಮಗಳಿರುವ ನಮ್ಮ ರಾಜ್ಯದಲ್ಲಿ ಕೇವಲ ೫,೯೦೦ ಗ್ರಾಮ ಪಂಚಾಯಿತಿಗಳಿದೆ. ಸರ್ಕಾರದ ಯೋಜನೆಯ ಪ್ರಕಾರ ರಾಜ್ಯದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಸೇರಿದಂತೆ ೫,೯೦೦ ಶಾಲೆಗಳು ಮಾತ್ರ ಉಳಿಯುತ್ತದೆ ಎಂದು ಹೇಳಿದರು.


ಈ ಸಂಧರ್ಭದಲ್ಲಿ ಎಐಡಿಎಸ್‌ಓ ಪದಾಧಿಕಾರಿಗಳಾದ ಭರತ್, ಸಂದೀಪ್, ಹುಸೇನಪ್ಪ, ಮಧು, ಪ್ರಶಾಂತ್, ಹರೀಶ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.