
ನವದೆಹಲಿ,ನ.೨೪- ಸುಪ್ರೀಂಕೋರ್ಟ್‌ನ ೫೩ನೇ ಮುಖ್ಯ ನ್ಯಾಯಮೂರ್ತಿಯಾಗಿ ಸೂರ್ಯಕಾಂತ್ ಇಂದು ಪ್ರಮಾಣ ವಚನ ಸ್ವೀಕರಿಸಿದರು.
ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಧಿಕಾರ ಮತ್ತು ಗೌಪ್ಯತೆ ಬೋಧಿಸಿದರು.
ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ಸಚಿವರಾದ ಅಮಿತ್ ಶಾ, ಜೆಪಿ ನಡ್ಡಾ, ನಿರ್ಗಮಿತ ಮುಖ್ಯನ್ಯಾಯಮೂರ್ತಿ ಬಿ.ಆರ್ ಗವಾಯಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಮುಖ್ಯನ್ಯಾಯಮೂರ್ತಿಯಾಗಿ ಭೂಷಣ್ ಆರ್. ಗವಾಯಿ ನಿನ್ನೆ ಅಧಿಕಾರದಿಂದ ನಿವೃತ್ತರಾಗಿದ್ದರು. ಈ ಹಿನ್ನೆಲೆಯಲ್ಲಿ ಇಂದು ನ್ಯಾಯಮೂರ್ತಿ ಸೂರ್ಯಕಾಂತ್ ಅಧಿಕಾರ ಸ್ವೀಕರಿಸಿದರು. ಮುಂದಿನ ೧೪ ತಿಂಗಳ ಕಾಲ ಮುಖ್ಯನ್ಯಾಯಮೂರ್ತಿಯಾಗಿ ಅಧಿಕಾರದಲ್ಲಿರಲಿದ್ದಾರೆ.
ಇದಕ್ಕೂ ಮೊದಲು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂವಿಧಾನದ ೧೨೪(೨) ನೇ ವಿಧಿಯ ಅಡಿಯಲ್ಲಿ ನ್ಯಾಯಮೂರ್ತಿ ಕಾಂತ್ ಅವರನ್ನು ಮುಖ್ಯನ್ಯಾಯಮೂರ್ತಿ ಅವರನ್ನು ನೇಮಕ ಮಾಡಿದ್ದರು, ನಿರ್ಗಮಿತ ಸಿಜೆಐ ಗವಾಯಿ ಅವರ ಶಿಫಾರಸಿನ ಮೇರೆಗೆ, ಅವರು ಉತ್ತರಾಧಿಕಾರಿಯನ್ನು ಹೆಸರಿಸುವಲ್ಲಿ ಹಿರಿತನದ ಸಂಪ್ರದಾಯವನ್ನು ಎತ್ತಿಹಿಡಿದ್ದರು.
ಮಹತ್ವದ ತೀರ್ಪಿನಲ್ಲಿ ಭಾಗಿ
ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ೩೭೦ ನೇ ವಿಧಿ ರದ್ದುಪಡಿಸುವುದು, ಬಿಹಾರದ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಪೆಗಾಸಸ್ ಸ್ಪೈವೇರ್ ಪ್ರಕರಣದ ಕುರಿತು ಹಲವಾರು ಮಹತ್ವದ ತೀರ್ಪುಗಳು ಮತ್ತು ಆದೇಶಗಳಲ್ಲಿ ಭಾಗವಾಗಿದ್ದಾರೆ ಎಂಬುದು ಗಮನಾರ್ಹ.
ಕಳೆದ ಅಕ್ಟೋಬರ್ ೩೦ ರಂದು ಮುಂದಿನ ಮುಖ್ಯನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ನೇಮಕ ಮಾಡಿದ್ದರು. ಸುಮಾರು ೧೫ ತಿಂಗಳುಗಳ ಕಾಲ ಈ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ೨೦೨೭ ರ ಫೆಬ್ರವರಿ ೯ರಂದು ೬೫ ವರ್ಷ ವಯಸ್ಸನ್ನು ತಲುಪಿದ ನಂತರ ಅಧಿಕಾರದಿಂದ ಕೆಳಗಿಳಿಯುತ್ತಾರೆ.
೧೯೬೨ರ ಫೆಬ್ರವರಿ ೧೦ ರಂದು ಹರಿಯಾಣದ ಹಿಸಾರ್ ಜಿಲ್ಲೆಯಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ನ್ಯಾಯಮೂರ್ತಿ ಸೂರ್ಯ ಕಾಂತ್, ವಕೀಲ ಹುದ್ದೆಯಿಂದ ದೇಶದ ಅತ್ಯುನ್ನತ ನ್ಯಾಯಾಂಗ ಹುದ್ದೆಗೆ ಏರಿದ ಹಿರಿಮೆಗೆ ಪಾತ್ರರಾಗಿದ್ದಾರೆ.
ಇದರ ಜೊತೆಗೆ ರಾಷ್ಟ್ರೀಯ ಪ್ರಾಮುಖ್ಯತೆ ಮತ್ತು ಸಾಂವಿಧಾನಿಕ ವಿಷಯಗಳ ಹಲವಾರು ತೀರ್ಪುಗಳು ಮತ್ತು ಆದೇಶಗಳ ಭಾಗವಾಗಿದ್ದಾರೆ.೨೦೧೧ ರಲ್ಲಿ ಕುರುಕ್ಷೇತ್ರ ವಿಶ್ವವಿದ್ಯಾಲಯದಿಂದ ಕಾನೂನು ಸ್ನಾತಕೋತ್ತರ ಪದವಿಯಲ್ಲಿ ’ಪ್ರಥಮ ದರ್ಜೆಯಲ್ಲಿ ಪ್ರಥಮ’ ಸ್ಥಾನ ಪಡೆದ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ಹಲವಾರು ಗಮನಾರ್ಹ ತೀರ್ಪುಗಳನ್ನು ಬರೆದ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರನ್ನು ೨೦೧೮ ಅಕ್ಟೋಬರ್ ೫ರಂದು ಹಿಮಾಚಲ ಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು.
ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕೈಗೊಳ್ಳುವ ಚುನಾವಣಾ ಸಮಿತಿಯ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸುವಾಗ, ಬಿಹಾರದಲ್ಲಿ ಕರಡು ಮತದಾರರ ಪಟ್ಟಿಯಿಂದ ಹೊರಗುಳಿದ ೬೫ ಲಕ್ಷ ಮತದಾರರ ವಿವರಗಳನ್ನು ಬಹಿರಂಗಪಡಿಸುವಂತೆ ನ್ಯಾಯಮೂರ್ತಿ ಸೂರ್ಯ ಕಾಂತ್ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದರು.
ತಳಮಟ್ಟದ ಪ್ರಜಾಪ್ರಭುತ್ವ ಮತ್ತು ಲಿಂಗ ನ್ಯಾಯವನ್ನು ಒತ್ತಿಹೇಳುವ ಆದೇಶದಲ್ಲಿ, ಕಾನೂನುಬಾಹಿರವಾಗಿ ಪದಚ್ಯುತಗೊಳಿಸಲಾದ ಮಹಿಳಾ ಸರಪಂಚರನ್ನು ಪುನಃ ನೇಮಿಸಿದ ಪೀಠದ ನೇತೃತ್ವ ವಹಿಸಿದ್ದ ಅವರು, ಈ ವಿಷಯದಲ್ಲಿ ಲಿಂಗ ಪಕ್ಷಪಾತವನ್ನು ಟೀಕಿಸಿದರು.



























