
ಕೋಲಾರ, ಜೂ,೧೦- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಆಯುಷ ಇಲಾಖೆ ಸಹಯೋಗದಲ್ಲಿ ಜೂನ್ ೨೧ರಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಮಂಗಳ ತಿಳಿಸಿದರು.
ಜಿಲ್ಲಾಧಿಕಾರಿಗಳ ಕೇಸ್ವಾನ್ ವಿಡಿಯೋ ಸಭಾಂಗಣದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕುರಿತು ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಅಂದು ಬೆಳಿಗ್ಗೆ ೬ ರಿಂದ ೮.೮೦ ಗಂಟೆವರೆಗೆ ಕಾರ್ಯಕ್ರಮ ಜರುಗಲಿದೆ. ಪತಂಜಲಿ ಯೋಗ ಶಿಕ್ಷಣ ಟ್ರಸ್ಟ್ ರವರು ಯೋಗ ತರಬೇತಿ ನೀಡಲಿದ್ದಾರೆ. ಸದರಿ ಕಾರ್ಯಕ್ರಮದಲ್ಲಿ ಯೋಗ ನಿರತ ಸಂಘ ಸಂಸ್ಥೆಗಳು, ಎಸಿಸಿ ಕೆಡೆಟ್, ಹೋಂಗಾಡ್ಸ್, ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ಎನ್.ವೈ..ಕೆ, ಸೇವಾದಳದವರು ಪಾಲ್ಗೊಳ್ಳಲಿದ್ದಾರೆ. ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿ, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಪಾಲ್ಗೊಳ್ಳಬೇಕೆಂದು ಅಪರ ಜಿಲ್ಲಾದಿಕಾರಿಗಳು ಮನವಿ ಮಾಡಿದರು.
ಸರ್ ಎಂ. ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣ ವ್ಯಾಪ್ತಿಯಲ್ಲಿ ಬರುವ ಶಾಲೆಯ ಮಕ್ಕಳನ್ನು ಈ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ತಿಳಿಸಲಾಯಿತು.
ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಪ್ರೋಟೋಕಾಲ್ ಪ್ರಕಾರ ಆಮಂತ್ರಣ ಪತ್ರಿಕೆ ಮುದ್ರಣ ಮಾಡಲು ತಿಳಿಸಲಾಯಿತು. ಜಿಲ್ಲಾ ಕ್ರೀಡಾಂಗಣವನ್ನು ಸ್ವಚ್ಛವಾಗಿಡುವಂತೆ ನಗರಸಭೆ ಆಯುಕ್ತರಿಗೆ ತಿಳಿಸಿದರು. ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರೂ ಯೋಗ ಮಾಡಲು ಯೋಗ ಮ್ಯಾಟ್ ತರುವಂತೆ ಸಭೆಯಲ್ಲಿ ತಿಳಿಸಲಾಯಿತು. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ಮಾಡಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಅಪರ ಜಿಲ್ಲಾಧಿಕಾರಿಗಳು ಕರೆ ನೀಡಿದರು.
ಯೋಗ ದಿನಾಚರಣೆ ಅಂಗವಾಗಿ ಯೋಗ ಸಂಗಮ, ಯೋಗ ಪಾರ್ಕ, ಯೋಗ ಧನುಷ, ಹರಿಸು ಯೋಗ ಹೆಸರಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತಿಳಿಸಿದರು.
ಜಿಲ್ಲಾ ಆಯುಷ ಅಧಿಕಾರಿ ಡಾ. ರಾಘವೇಂದ್ರ ಶೆಟ್ಟಿಗಾರ್ ಅವರು ಕಾರ್ಯಕ್ರಮದ ರೂಪು-ರೇಶೆಗಳ ಬಗ್ಗೆ ವಿವರಿಸಿದರು. ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ. ಶ್ರೀನಿವಾಸ್, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಗೀತಾ, ವೈದ್ಯಧಿಕಾರಿಗಳಾದ, ಡಾ. ಉಮಾ, ಡಾ. ಗೀತಾ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.