ಔರಾದ್ : ಸೆ.16:ತಾಲೂಕಿನ ದಾಬಕಾ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಅವ್ಯವಸ್ಥೆ ಕಂಡು ಔರಾದ್ ನ್ಯಾಯಾಧೀಶರರಾದ ಹಾಜಿ ಹುಸೇನ್ ಸಾಬ್ ಯಾದವಾಡ ಅವರು ಮುಖ್ಯ ಗುರುಗಳ ಹಾಗೂ ಸಿಬ್ಬಂದಿಗಳಿಗೆ ತರಾಟೆಗೆ ತೆಗೆದುಕೊಂಡರು.
ಸೋಮವಾರ ದಿಢೀರ್ ಶಾಲೆಗೆ ಭೇಟಿ ನೀಡಿದ ನ್ಯಾಯಾಧೀಶರು, ನೇರವಾಗಿ ಶಾಲೆಯಲ್ಲಿನ ಅಡುಗೆ ಕೋಣೆಗೆ ತೆರಳಿ ಅಲ್ಲಿಯ ಅವ್ಯವಸ್ಥೆ ಕಂಡು ಮುಖ್ಯಶಿಕ್ಷಕಿ ಸುನಂದಾ ಹಾಗೂ ಬಿಸಿಯೂಟ ಸಿಬ್ಬಂದಿಗಳಿಗೆ ತೀವ್ರವಾದ ತರಾಟೆ ತೆಗೆದುಕೊಂಡರು. 200 ಮಕ್ಕಳಿಗೆ ಅರ್ಧ ಕಿಲೋ ಟೊಮೆಟೊ ಬಳಕೆ ಮಾಡುತ್ತಿದ್ದೀರಿ, ಅದು ಕುಡಾ ಊಟ ಮಾಡಬೇಕಾದರೇ ಮಕ್ಕಳು ಮನೆಯಿಂದಲೇ ತಟ್ಟೆ, ಗ್ಲಾಸ್ ತರಬೇಕು. ಬಿಸಿಯೂಟದಲ್ಲಿ ಹುಳು ಬಂದರೆ ಅದು ತೆಗೆದು ತಿನ್ನಿ ಎಂದು ಹೇಳುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಶ್ರಾವಣ ಮಾಸದಿಂದ ನಮಗೆ ಸರಿಯಾಗಿ ಮೊಟ್ಟೆ ನೀಡುತ್ತಿಲ್ಲ. ಒಮ್ಮೆನೀಡಿದರೇ ಮತ್ತೆ ಯಾವಾಗ ನೀಡುತ್ತಾರೋ ಗೊತ್ತಿಲ್ಲದಂತಾಗಿದೆ. ಇನ್ನೂ ಶಾಲೆಯಲ್ಲಿ ನೀರಿಲ್ಲ. ಮನೆಯಿಂದಲೇ ನೀರು ತರುತ್ತಿದ್ದೇವೆ. ಮಕ್ಕಳು ಏನಾದರೂ ಕೇಳಿದರೇ ಮುಖ್ಯಶಿಕ್ಷಕಿ ಸುನಂದಾ ಮತ್ತು ಶಿಕ್ಷಕಿ ಮೀರಾ ಹೊಡೆಯುತ್ತಾರೆ ಎಂದು ವಿದ್ಯಾರ್ಥಿಗಳು ನೋವು ತೋಡಿಕೊಂಡರು. ಇದರಿಂದ ಮತ್ತಷ್ಟು ಕೋಪಗೊಂಡ ನ್ಯಾಯಧೀಶರು ನೀವುಗಳು ನಿಮ್ಮ ಮನೆಯಿಂದ ಕೊಡುತ್ತಿದ್ದೀರಿ. ನಿಮ್ಮ ಮಕ್ಕಳಾದರೇ ಹೀಗೆ ವರ್ತನೆ ಮಾಡುತ್ತೀರಿ ಎಂದು ಪ್ರಶ್ನಿಸಿದರು. ನೀವು ಹೆದರಬೇಡಿ ನಿಮ್ಮ ಎಲ್ಲ ಸಮಸ್ಯೆ ಬಗೆಹರಿಸುವದಾಗಿ ನ್ಯಾಯಾಧೀಶರು ಮಕ್ಕಳಿಗೆ ಸಮಧಾನ ಪಡಿಸಿದರು.
ಸರ್ಕಾರದಿಂದ ಶಾಲೆಗೆ ಬರುವ ಮಿಲ್ಕ್ ಪೌಡರ್ ಹಾಗೂ ಬಿಸಿಯೂಟದ ಆಹಾರ ಧ್ಯಾನಗಳು ಶಾಲೆಯ ಮುಖ್ಯಶಿಕ್ಷಕರು ಸೇರಿದಂತೆ ಕೆಲವರು ಮನೆಗಳಿಗೆ ತೆಗೆದುಕೊಂಡು ಹೋಗುತ್ತಾರೆ. ಆದರೆ ನಮಗೆ ಸರಿಯಾಗಿ ಕೊಡುವದಿಲ್ಲ. ಶಾಲೆಗೆ ಯಾರೊಬ್ಬರು ಬಂದು ಕೇಳುತ್ತಿಲ್ಲ. ಎಲ್ಲರೂ ಮುಖ್ಯಶಿಕ್ಷಕರಿಗೆ ಹೆದರುತ್ತಿದ್ದಾರೆ ಎಂದು ಮಕ್ಕಳು ನ್ಯಾಯಾಧೀಶರ ಗಮನಕ್ಕೆ ತಂದರು.
ಶಾಲೆಯಲ್ಲಿರುವ ವಾಟರ್ ಫಿಲ್ಟರ್ ಇದೆ ಆದರೆ ಇನ್ನೂ ಜಾರಿ ಮಾಡದ ಕಾರಣ ಇಲಿ ಹೆಗ್ಗಣಗಳು ಮಣ್ಣು ಸಂಗ್ರಹಿಸಿಟ್ಟಿವೆ. ಇದನ್ನು ಕಂಡು ಯಾಕ್ರಿ ಸರಕಾರ ನೀಡಿದ ಸಾಮಗ್ರಿಗಳು ಹಾಳು ಮಾಡುತ್ತೀರಿ. ನಿಮ್ಮ ನಿರ್ಲಕ್ಷ್ಯ ತನದಿಂದ ಸಾಮಗ್ರಿಗಳು ಹಾಳಾಗಿವೆ ಎಂದು ದೂರಿದರು. ವಾರದೊಳಗೆ ಶಾಲೆಯ ಸಮಸ್ಯೆಗಳು ಬಗೆಹರಿಯಬೇಕು. ಇಲ್ಲಿಯ ಎಲ್ಲವನ್ನು ಅರಿತು ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದೇನೆ. ನಿಮಗೆ ಹೊಡೆದಿರುವ ಮುಖ್ಯಶಿಕ್ಷಕಿ ಸುನಂದಾ, ಶಿಕ್ಷಕಿ ಮೀರಾ ಅವರ ಮೇಲೆ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗುತ್ತದೆ. ಶಾಲೆಯ ಎಲ್ಲ ಸಮಸ್ಯೆ ಬಗೆಹರಿಸುಲು ಸಂಬಂಧಿಸಿದ ಇಲಾಖೆಗೆ ಸೂಚಿಸಲಾಗುತ್ತದೆ ಎಂದು ಭರವಸೆ ನೀಡಿದರು.
200 ವಿದ್ಯಾರ್ಥಿಗಳಿಗೆ ಅರ್ಧ ಕಿಲೋ ಟೊಮೆಟೊ
ಶಾಲೆಯಲ್ಲಿ ಒಟ್ಟು 250 ಮಕ್ಕಳ ದಾಖಲಾತಿಯಿದೆ. ಇಂದು 200 ಮಕ್ಕಳು ಬಂದಿದ್ದಾರೆ ಎಂದು ಶಿಕ್ಷಕರು ತಿಳಿಸಿದ್ದು, 200 ಮಕ್ಕಳಿಗೆ ಅರ್ಧ ಕಿಲೋ ದಷ್ಟು ಮಾತ್ರ ಟೊಮೆಟೊ ಬಳಕೆ ಮಾಡುತ್ತೀರಾ ಎಂದು ಮುಖ್ಯಶಿಕ್ಷಕಿ ಸುನಂದಾ ಅವರಿಗೆ ತರಾಟೆಗೆ ತೆಗೆದುಕೊಂಡರು. ನಿಮ್ಮ ಕರ್ತವ್ಯ ಲೋಪದ ಬಗ್ಗೆ ಇಲಾಖೆಯ ಮೇಲಾಧಿಕಾರಿಗಳಿಗೆ ಕ್ರಮಕ್ಕೆ ಪತ್ರಬರೆಯುವದಾಗಿ ಎಚ್ಚರಿಕೆ ನೀಡಿದರು.
ಮನೆಯಿಂದಲೇ ತಟ್ಟೆ, ಗ್ಲಾಸ್ ತರಬೇಕು
ನಿತ್ಯ ಮಕ್ಕಳು ಹಾಲು ಕುಡಿಯಲು, ಊಟ ಮಾಡಲು ಮನೆಯಿಂದ ಯಾಕೆ, ತಟ್ಟೆಟ, ಗ್ಲಾಸ್ ತರುತ್ತಿದ್ದಾರೆ. ಸರ್ಕಾರ ನಿಮಗೆ ಅನುದಾನ ನೀಡಿಲ್ಲವೇ ಎಂದು ಸಿಡಿಮಿಡಿಕೊಂಡ ನ್ಯಾಯಾಧೀಶರಾದ ಹಾಜಿ ಹುಸೇನ್ ಸಾಬ್ ಅವರು ಶಾಲೆಯ ಅವ್ಯವಸ್ಥೆ ತೀರಾ ಕೆಟ್ಟಿದೆ. ನೀವುಗಳು ಕೆಲಸ ಮಾಡುತ್ತಿಲ್ಲ ಎಂದು ದೂರಿದರು. ಈ ವೇಳೆ ಶೇ 60 ರಷ್ಟು ಮಕ್ಕಳು ನಿತ್ಯ ಶಾಲೆಯಲ್ಲಿನ ಮಧ್ಯಾಹ್ನದ ಬಿಸಿಯೂಟ ಬಿಟ್ಟು ಮನೆಯಲ್ಲಿ ಊಟ ಮಾಡಿ ಬರುತ್ತಿರುವದು ವಿದ್ಯಾರ್ಥಿಗಳು ತಿಳಿಸಿದರು. ಆದರೆ ಶಾಲೆಯಲ್ಲಿ ಮಾತ್ರ ಊಟ ಮಾಡಿರುವದು ಮಾಹಿತಿಯಿದೆ ಎಂದು ದೂರಿದರು.
ಮೂತ್ರ ವಿಸರ್ಜನೆಗೆ ಬಯಲೇ ಗತಿ
ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಶೌಚಾಲಯವೂ ಇಲ್ಲ. ನಾವುಗಳು ಮೂತ್ರ ವಿಸರ್ಜನೆಗೆ ಬಯಲು ಅಥವಾ ಮನೆಗಳಿಗೆ ಹೋಗುತ್ತೇವೆ. ನಮಗೆ ಶೌಚಾಲಯದ ಅಗತ್ಯ ತುಂಬಾಯಿದೆ ಎಂದರು. ಇನ್ನೂ ಬಾಲಕರಿಗೆ ಒಂದು ಶೌಚಾಲಯವಿದೆ. ಆದ್ದರಿಂದ ಸರತಿಯಲ್ಲಿ ನಿಲ್ಲಲು ಆಗದ ಕಾರಣ ನಾವುಗಳು ಕುಡಾ ಬಯಲಿಗೆ ಹೋಗುತ್ತೇವೆ ಎಂದರು. ಆಟದ ಸಾಮಗ್ರಿಗಳು ಕುಡಾ ನೀಡುವದಿಲ್ಲ. ಶಾಲೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ ಅವುಗಳಿಂದ ಮನಗೆ ಮುಕ್ತಿಕೊಡಿಸಿ ಎಂದು ವಿದ್ಯಾರ್ಥಿಗಳು ನ್ಯಾಯಾಧೀಶರಿಗೆ ಮನವಿ ಮಾಡಿದರು.























