
ಬೆಂಗಳೂರು, ಜೂ. ೩- ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಆಯೋಗವು ವೈಜ್ಞಾನಿಕವಾಗಿ ಜಾತಿಗಣತಿ ನಡೆಸಲು ಜೂನ್ ೩೦, ೨೦೨೫ರ ವರೆಗೆ ಕಾಲಾವಕಾಶ ನೀಡುವಂತೆ ಸರ್ಕಾರಕ್ಕೆ ಮತ್ತು ನಿಯೋಗಕ್ಕೆ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಮನವಿ ಮಾಡಿದೆ.
ಈಗಾಗಲೇ ಸರ್ಕಾರ ಪರಿಶಿಷ್ಟ ಜಾತಿಗೆ ಒಳಮೀಸಲಾತಿ ನೀಡುವ ಸಂಬಂಧ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಏಕಸದಸ್ಯ ಆಯೋಗವನ್ನು ರಚಿಸಿದ್ದು, ಮೇ ೫ ರಿಂದ ೧೭ ರವರೆಗೆ, ಮೇ ೧೭ ರಿಂದ ೨೮ ರವರೆಗೆ ಹಾಗೂ ಮೇ ಯಿಂದ ಜೂನ್ ೬ರವರೆಗೆ ಕಾಲಾವಕಾಶವನ್ನು ನೀಡುತ್ತಾ ಬಂದಿದೆ.
ಈ ಜನಗಣತಿಗೆ ವಿವಿಧ ಇಲಾಖೆಗಳಿಂದ ಸುಮಾರು ೫೦ ಸಾವಿರ ಸಿಬ್ಬಂಧಿಗಳನ್ನು ನೇಮಿಸಿದ್ದು, ಈ ಸಿಬ್ಬಂಧಿಗಳೇ ಹೇಳುವ ಪ್ರಕಾರ ರಾಜ್ಯದಾದ್ಯಂತ ಇನ್ನೂ ಸಹ ಶೇ. ೭೦ ಜಾತಿಜನಗಣತಿ ಮಾಡಲು ಸಾಧ್ಯವಾಗಿಲ್ಲ ಎಂದು ಹೇಳುತ್ತಿರುತ್ತಾರೆ. ಸದಾಶಿವ ಆಯೋಗದ ವರದಿ ಕರ್ನಾಟಕದಲ್ಲಿ ಜಾತಿಗಣತಿ ನಡೆಸಲು ಸುಮಾರು ೭ ವರ್ಷಗಳ ಕಾಲ ಸಮಯ ತೆಗೆದುಕೊಂಡಿರುತ್ತದೆ. ಹೀಗಿರುವಾಗ ಕೇವಲ ೧೦-೨೦ ದಿನದಲ್ಲಿ ಕರ್ನಾಟಕ ರಾಜ್ಯಾಧ್ಯಂತ ಜಾತಿಜನಗಣತಿ ಪೂರ್ಣಗೊಳಿಸಲು ಹೇಗೆ ಸಾಧ್ಯ.
ಮೊದಲ ಬಾರಿ ೧೭ ದಿನಗಳ ಕಾಲಾವಕಾಶ ಕೊಟ್ಟಿದ್ದು, ಇದರಲ್ಲಿ ೭-೮ ದಿನಗಳ ಕಾಲ ಸರ್ವರ್ ಬಿಸಿ ಎಂದು ಬರುತ್ತಿರುತ್ತದೆ. ಅಲ್ಲದೆ, ಕೆಲವು ಅಧಿಕಾರಿಗಳಿಗೆ ಸರಿಯಾದ ರೀತಿ ತರಭೇತಿ ನೀಡದಿರುವ ಕಾರಣ ನಿಗಧಿತ ಕಾಲದಲ್ಲಿ ಜನಗಣತಿ ಮಾಡಲು ಅನಾನುಕೂಲವಾಗಿರುತ್ತದೆ. ಅಲ್ಲದೆ ಜಾತಿಗಣತಿಗೆ ಬರುವ ಅಧಿಕಾರಿಗಳಿಗೆ ಸಮಯ ಸಿಗದ ಕಾರಣ ಆತುರಾತುರವಾಗಿ ಗಣತಿ ಮಾಡುತ್ತಾ, ಸರಿಯದ ರೀತಿ ಮಾಹಿತಿಗಳನ್ನು ಕಲೆಹಾಕಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದು ಬಂದಿರುತ್ತದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಅತಿಹೆಚ್ಚು ಪರಿಶಿಷ್ಟ ಜಾತಿಯ ಸೇರಿದ ಜನರು ಅಸ್ಪೃಶ್ಯತೆಯ ಕಾರಣಕ್ಕೆ ಬೇರೆ ಬೇರೆ ಜಾತಿಯ ಹೆಸರನ್ನು ಹೇಳಿ ಮನೆಯ ಲೀಸ್ ಮತ್ತು ಬಾಡಿಗೆಗೆ ಪಡೆದಿರುತ್ತಾರೆ ಇವರುಗಳು ಏಕಾಏಕಿ ತಮ್ಮ ಜಾತಿಗಳನ್ನು ಹೇಳಿಕೊಳ್ಳಲು ನಿರಾಕರಿಸುತ್ತಿದ್ದಾರೆ ಎಂಬ ವಿಚಾರ ತಿಳಿದುಬಂದಿರುತ್ತದೆ.
ಆದ್ದರಿಂದ ಜಾತಿಜನಗಣತಿ ವೈಜ್ಞಾನಿಕವಾಗಿ ನಡೆಯಬೇಕಾದರೆ ಮತ್ತು ಪರಿಶಿಷ್ಟ ಜಾತಿಯಲ್ಲಿ ಬರುವ ಮಾದಿಗ, ಹೊಲೆಯ, ಬೋವಿ, ಲಂಬಾಣಿ, ಕೊರಮ, ಕೊರಚ ಮುಂತಾದ ಜಾತಿಗಳು ಒಗ್ಗಟ್ಟಿನಿಂದ ಅವರವರ ಪಾಲನ್ನು ಪಡೆಯಲು ಹೆಚ್ಚಿಗೆ ಸಮಯ ತೆಗೆದುಕೊಂಡರೂ ಪರವಾಗಿಲ್ಲ ಈ ತಿಂಗಳ ಜೂನ್ ೩೦ನೇ ತಾರೀಖಿನವರೆಗೂ ಕಾಲಾವಕಾಶ ಕೊಡಬೇಕೆಂದು ಸರ್ಕಾರವನ್ನು ಮತ್ತು ಆಯೋಗಕ್ಕೆ ಮನವಿ ಮಾಡಿದ್ದಾರೆ.