ಪತ್ರಕರ್ತರ ಸಂಘದ ಚುನಾವಣೆ: ಜಿಲ್ಲಾ ಅಧ್ಯಕ್ಷರಾಗಿ ಬಾಬುರಾವ ಯಡ್ರಾಮಿ ಪುನರಾಯ್ಕೆ

ಕಲಬುರಗಿ,ನ.10-ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪತ್ರಕರ್ತ ಬಾಬುರಾವ ಯಡ್ರಾಮಿ ಅವರು ಪುನರಾಯ್ಕೆಯಾಗಿದ್ದಾರೆ. ಆ ಮೂಲಕ ಯಡ್ರಾಮಿ ಅವರು 4ನೇ ಬಾರಿಗೆ ಜಿಲ್ಲಾಧ್ಯಕ್ಷರಾದಂತಾಗಿದೆ.
ನಗರದ ಪತ್ರಿಕಾ ಭವನದಲ್ಲಿ ಸಂಘದ ಜಿಲ್ಲಾ ಘಟಕದ ಪ್ರಯುಕ್ತ ಭಾನುವಾರ ಮತದಾನ ನಡೆಯಿತು. ಬಾಬುರಾವ ಯಡ್ರಾಮಿ 170 ಮತ ಪಡೆದು ಗೆಲುವು ಸಾಧಿಸಿದರೆ, ಪ್ರತಿಸ್ಪರ್ಧಿ ಚಂದ್ರಶೇಖರ ಕೌಲಗಾ 120 ಮತಗಳನ್ನು ಪಡೆದು ಪರಾಭವಗೊಂಡರು.
185 ಮತ ಗಳಿಸಿದ ಭೀಮಾಶಂಕರ ಫಿರೋಜಾಬಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಪ್ರತಿಸ್ಪರ್ಧಿ ಸುರೇಶಕುಮಾರ ಡಿ.ಬಡಿಗೇರ 117 ಮತ ಪಡೆದು ಸೋಲು ಅನುಭವಿಸಿದರು.
ಅರುಣಕುಮಾರ ಕದಂ, ಶಿವರಂಜನ್ ಸತ್ಯಂಪೇಟೆ, ಹಣಮಂತರಾವ ಭೈರಾಮಡಗಿ (ಜಿಲ್ಲಾ ಉಪಾಧ್ಯಕ್ಷರು), ಅನಿಲ ಸ್ವಾಮಿ, ವಾಸುದೇವ ಚವ್ಹಾಣ್, ಬಾಬುರಾವ ಕೋಬಾಳ (ಜಿಲ್ಲಾ ಕಾರ್ಯದರ್ಶಿಗಳು), ಅಶೋಕ ಎಚ್.ಕಪನೂರ (ಜಿಲ್ಲಾ ಖಜಾಂಚಿ), ರಾಜಕುಮಾರ ಉದನೂರ (ರಾಜ್ಯ ಕಾರ್ಯಕಾರಿ ಸಮಿತಿ) ಆಯ್ಕೆಯಾದರು.
ಜಿಲ್ಲಾ ಕಾರ್ಯಕಾರಿ ಸಮಿತಿಯ 15 ಸ್ಥಾನಗಳಿಗೆ ಡಾ.ತೀರ್ಥಕುಮಾರ ಬೆಳಕೋಟಾ, ಅಕ್ರಂ ಪಾಶಾ, ಶರಣಬಸಪ್ಪ ಜಿಡಗಾ, ರಾಚಪ್ಪಾ ಜಂಬಗಿ, ವಿಜಯಕುಮಾರ ಗಾಜರೆ, ಸೂರ್ಯಕಾಂತ ಜಮಾದಾರ, ಶಕೀಲ್ ಚೌಧರಿ, ಸುಧೀರ ಬಿರಾದಾರ, ಗುರುರಾಜ ಕುಲಕರ್ಣಿ, ವಿಜಯಕುಮಾರ ಜಿಡಗಿ, ನಾಗರಾಜ ಗದ್ದಿ ಕಾಳಗಿ, ವೀರೇಶ ಎಸ್.ಮಾಲಗಾರ, ಅವಿನಾಶ ಕೊಳ್ಳುರ, ವಿಜಯಲಕ್ಷ್ಮೀ ಎನ್., ಸಂಜೀವಕುಮಾರ ಆಯ್ಕೆಯಾದರು.
ಜಿಲ್ಲಾ ಚುನಾವಣಾಧಿಕಾರಿಯಾಗಿ ಶಿವಶರಣಪ್ಪ ಬನ್ನಿಕಟ್ಟಿ ಕಾರ್ಯನಿರ್ವಹಿಸಿದರು. ಒಟ್ಟು 416 ಮತದಾರರ ಪೈಕಿ 397 ಜನ (ಶೇ.94.71 ರಷ್ಟು) ತಮ್ಮ ಹಕ್ಕು ಚಲಾಯಿಸಿದರು.
ಒಟ್ಟು 25 ಸ್ಥಾನಗಳಿಗೆ 60 ಜನ ಕಣದಲ್ಲಿದ್ದರು.