ಪತ್ರಕರ್ತ ಮೊರಖಂಡಿಕರ್ ಮುಡಿಗೇರಿದ ಅಂತಾರಾಷ್ಟ್ರೀಯ ಪುರಸ್ಕಾರ

ಬೀದರ್ :ಮೇ 27 : ನಾಲ್ಕು ದಶಕಗಳಿಗೂ ಹೆಚ್ಚು ಕಾಲ ವಿವಿಧ ಪತ್ರಿಕೆಗಳಲ್ಲಿದ್ದು, ಸದ್ಯ ಬೀದರ ಜಿಲ್ಲೆಯಲ್ಲಿ ಹೊಸದಿಗಂತ ಕನ್ನಡ ದಿನಪತ್ರಿಕೆಯ ಜಿಲ್ಲಾ ವರದಿಗಾರರಾಗಿರುವ ವೆಂಕಟೇಶ ಮೊರಖಂಡಿಕರ್ ಅವರಿಗೆ ಅಂತಾರಾಷ್ಟ್ರೀಯ ಮಟ್ಟದ ಪುರಸ್ಕಾರವು ಮುಡಿಗೇರಿದೆ.
ಹಿರಿಯ ಪತ್ರಕರ್ತರಾಗಿ ಕನ್ನಡ ಪತ್ರಿಕಾರಂಗದಲ್ಲಿ ಹೆಸರಾಗಿರುವ ವೆಂಕಟೇಶ ಮೊರಖಂಡಿಕರ್ ಅವರಿಗೆ ಪತ್ರಿಕಾರಂಗದಲ್ಲಿನ ಸೇವೆ ಹಾಗೂ ಸಾಮಾಜಿಕ ಸೇವೆ ಗುರುತಿಸಿ ಹೈದರಾಬಾದ್ ನಲ್ಲಿ ರವಿವಾರ ನಡೆದ ಸಮಾರಂಭದಲ್ಲಿ ಅಂತಾರಾಷ್ಟ್ರೀಯ ಸಂಸ್ಥೆ ಎಂವಿಎಲ್ ಎ ವತಿಯಿಂದ
ಸನ್ಮಾನಿಸಲಾಯಿತು.
ಎಂವಿಎಲ್ ಎ ಸಂಸ್ಥೆಯ ಸಂಚಾಲಕರಾದ ಕೃಷ್ಣ ಅವರು ಮಾತನಾಡಿ, ನಮ್ಮ ಎಂವಿಎಲ್ ಎ ಸಂಸ್ಥೆಗೆ ಮೆ.25ಕ್ಕೆ 25 ವರ್ಷಗಳು ತುಂಬಲಿದೆ. ಈ ಹಿನ್ನೆಲೆಯಲ್ಲಿ ಸಮಾಜದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಒಟ್ಟು 36 ಜನರಿಗೆ “ಭಾರತ ಪ್ರತಿಭಾ ಸನ್ಮಾನ್ ಪುರಸ್ಕಾರ” ನೀಡಿ ಸನ್ಮಾನಿಸಲಾಯಿತು ಎಂದು ತಿಳಿಸಿದರು. ಇದರಲ್ಲಿ ವಿಶೇಷ ಎಂದರೆ ಪತ್ರಿಕಾರಂಗದ ಹಿನ್ನೆಲೆಯುಳ್ಳ ಶ್ರೀ ವೆಂಕಟೇಶ ಮೊರಖಂಡಿಕರ್ ಅವರು ಒಬ್ಬಂಟಿಯಾಗಿ 1982-84ರಲ್ಲಿ ನಡೆಸಿದ ಭಾರತ ಸೈಕಲ್ ಯಾತ್ರೆಯು ಭಾರತದ ಏಕೈಕ ಪತ್ರಕರ್ತರೊಬ್ಬರು ನಡೆಸಿದ ವಿಶಿಷ್ಟ ಸಾಧನೆಯಾಗಿದೆ. ಇವರು ಕನ್ನಡ ಸೇರಿದಂತೆ ಬಹು ಭಾಷೆಗಳ ಪತ್ರಿಕೆಯಲ್ಲಿ ಸೇವೆ ಸಲ್ಲಿಸಿದ್ದು ವಿಶೇಷವಾಗಿದೆ. ಇದನ್ನು ಪರಿಗಣಿಸಿ ರಾಷ್ಟ್ರಮಟ್ಟದ ಪ್ರಶಸ್ತಿಗೆ ವೆಂಕಟೇಶ್ ಮೊರಖಂಡಿಕರ್ ಅವರನ್ನು ಆಯ್ಕೆ ಮಾಡಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ತಿಳಿಸಿದರು. ಸಮಾರಂಭದಲ್ಲಿ, ಮೊರಖಂಡಿಕರ್ ಅವರ ಜೊತೆಗೆ ದೇಶದ ವಿವಿಧ ರಾಜ್ಯಗಳಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಸಹ ಸನ್ಮಾನಿಸಿ ಗೌರವಿಸಲಾಯಿತು.