
ಕೋಲಾರ,ಜ,೧-ಅಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ ಯೋಜನೆಯಡಿ ಫಲಾನುಭವಿಯಾಗಿಸಲು ಪ್ರಧಾನಮಂತ್ರಿ ಶ್ರಮಯೋಗಿ ಮಾನ್-ಧನ್ (ಪಿ.ಎಂ.ಎಸ್.ವೈ.ಎಂ) ಯೋಜನೆಗೆ ಎಲ್ಲಾ ಕಾರ್ಮಿಕರು ಸೇರ್ಪಡೆಯಾಗಬೇಕು ಎಂದು ಅಪರ ಜಿಲ್ಲಾಧಿಕಾರಿಗಳಾದ ಎಸ್.ಎಂ. ಮಂಗಳ ಅವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರಧಾನಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯ ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ ಸಭೆಯಲ್ಲಿ ಈ ವಿಷಯ ತಿಳಿಸಿದರು.
ಗೃಹ ಕಾರ್ಮಿಕರು, ಬೀದಿ-ಬದಿ ವ್ಯಾಪರಿಗಳು, ಹಮಾಲಿಗಳು, ಚಮ್ಮಾರರು, ಚಿಂದಿ ಆಯುವವರು, ಅಗಸರು, ರಿಕ್ಷಾ ಚಾಲಕರು, ಚರ್ಮೋದ್ಯಮ ಕಾರ್ಮಿಕರು, ಆಶಾ ಕಾರ್ಮಿಕರು, ಬೀದಿ, ಕಟ್ಟಡ, ಕೈಮಗ್ಗ, ನರೇಗಾ ಕಾರ್ಮಿಕರು ಹಾಗೂ ಇನ್ನಿತರ ಅಸಂಘಟಿತ ಕಾರ್ಮಿಕರು ಈ ಯೋಜನೆಯಡಿ ಒಳಪಟ್ಟು ಸದುಪಯೋಗ ಪಡಿಸಿಕೊಳ್ಳುವಂತೆ ಅವರು ತಿಳಿಸಿದರು.
ಯೋಜನೆಗೆ ಒಳಪಡುವ ಕಾರ್ಮಿಕರು ಅಸಂಘಟಿತ ವಲಯದವರಾಗಿದ್ದು, ಮಾಸಿಕ ಆದಾಯ ೧೫ ಸಾವಿರ ಕ್ಕಿಂತ ಕಡಿಮೆ ಇರಬೇಕು. ಆದಾಯ ತೆರಿಗೆ ಪಾವತಿದಾರರಾಗಿರಬಾರದು, ಪಿ.ಎಫ್, ಎನ್.ಪಿ.ಎಸ್ ಯೋಜನೆಗೆ ಒಳಪಡಬಾರದು ಎಂದವರು ತಿಳಿಸಿದರು.
ಅರ್ಹ ಅಸಂಘಟಿತ ಕಾರ್ಮಿಕರು ತಮ್ಮ ಹತ್ತಿರದ ಕಾಮನ್ ಸರ್ವಿಸ್ ಸೆಂಟರ್(ಸಿ.ಎಸ್.ಸಿ) ಗಳಲ್ಲಿ ನೋಂದಾಯಿಸಿಕೊಳ್ಳಬಹುದು. ಇಲ್ಲಿ ಸಂಬಂಧಿಸಿದ ದಾಖಲೆಗಳೊಂದಿಗೆ ಆರಂಭಿಕ ವಂತಿಗೆಯನ್ನು ನಗದು ರೂಪದಲ್ಲಿ ಪಾವತಿಸಿ ನಂತರ ಮಾಸಿಕೆ ವಂತಿಕೆಯನ್ನು ಅವರ ಖಾತೆಯಿಂದ ಆಟೋ-ಡೆಬಿಟ್ ಮೂಲಕ ಕಟಾವು ಮಾಡಿಕೊಳ್ಳಬಹುದು ಎಂದರು.
ಕೇಂದ್ರ ಸರ್ಕಾರವು ಚಂದಾದಾರರು ಪಾವತಿಸುವ ವಂತಿಕೆಯ ಸಮಾನಾಂತರ ವಂತಿಕೆಯನ್ನು ಪಿಂಚಣಿ ಖಾತೆಗೆ ಪಾವತಿಸುತ್ತದೆ. ೬೦ವರ್ಷ ಪೂರ್ಣಗೊಂಡ ನಂತರ ಫಲಾನುಭವಿಗಳು ತಿಂಗಳಿಗೆ ರೂ.೩೦೦೦/- ಖಚಿತ, ಕನಿಷ್ಠ ಮಾಸಿಕ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ. ಇವರು ೧೦ ವರ್ಷದೊಳಗೆ ನಿರ್ಗಮಿಸಿದಲ್ಲಿ, ಅವರು ಪಾವತಿಸಿರುವ ವಂತಿಕೆಯನ್ನು ಮಾತ್ರ ಅವರಿಗೆ ನೀಡಲಾಗುತ್ತದೆ. ೧೦ ವರ್ಷದಂತೆ ಹೆಚ್ಚು ವರ್ಷದ ನಂತರ ನಿರ್ಗಮಿಸಿದಲ್ಲಿ ಅವರು ಪಾವತಿಸಿದ ವಂತಿಕೆಯೊಂದಿಗೆ ಪಿಂಚಣಿ ಖಾತೆಗೆ ಜಮೆಯಾಗಿರುವ ಬಡ್ಡಿ ಅಥವಾ ಪಿಂಚಣಿ ಖಾತೆಗೆ ಜಮೆಯಾಗಿರುವ ಬಡ್ಡಿ ಅಥವಾ ಉಳಿತಾಯ ಖಾತೆಗೆ ಪಾವತಿಸಲಾಗುವ ಬಡ್ಡಿ ಇವುಗಳಲ್ಲಿ ಯಾವುದು ಹೆಚ್ಚೂ ಅದನ್ನು ಪಾವತಿಸಲಾಗುವುದು. ಫಲಾನುಭವಿ ೬೦ವರ್ಷದೊಳಗೆ ಮೃತಪಟ್ಟಲ್ಲಿ ಅಥವಾ ಶಾಶ್ವತ ಅಂಗವಿಕಲತೆ ಹೊಂದು ವಂತಿಕೆ ಪಾವತಿಸಲು ಸಾಧ್ಯವಾಗದಿದ್ದಲ್ಲಿ, ಅವರ ಸಂಗಾತಿ ಈ ಯೋಜನೆಯನ್ನು ಮುಂದುವರೆಸಿ ಹಣ ಪಡೆಯಬಹುದು. ಯೋಜನೆ ವಿದ್ಯುನ್ಮಾನ ಮಾಧ್ಯಮ ಆಧಾರವಾಗಿದ್ದು, ಎಸ್.ಎಂ.ಎಸ್ ಮೂಲಕ ಎಲ್ಲಾ ವ್ಯವಹಾರಗಳ ಮಾಹಿತಿ ಫಲಾನುಭವಿಗೆ ದೊರೆಯುತ್ತದೆ ಎಂದರು. ಸಭೆಯಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ವರಲಕ್ಷ್ಮಿ ಮಾತನಾಡಿ, ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯಡಿ ಒಟ್ಟು ೩೭೩೧ ಅಸಂಘಟಿತ ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ. ಜನವರಿ ೧೫ ರಿಂದ ಮಾರ್ಚ್ ೧೫, ೨೦೨೬ರ ವರೆಗೆ ’ವಿಶೇಷ ನೋಂದಣಿ ಅಭಿಯಾನ’ ನಡೆಸಲಾಗುತ್ತಿದ್ದು, ಇದರಲ್ಲಿ ೭೨೭೫ ಕಾರ್ಮಿಕರನ್ನು ಈ ಯೋಜನೆಯಡಿ ಸೇರ್ಪಡಿಸುವ ಗುರಿ ಹೊಂದಲಾಗಿದೆ ಎಂದರು.
ಕಾರ್ಮಿಕರು ಕಾರ್ಮಿಕ ಇಲಾಖೆ, ಇಪಿಎಫ್‌ಒ ಮತ್ತು ಇಎಸ್‌ಐಸಿ ಕಚೇರಿಗಳನ್ನು ಮಾಹಿತಿಗಾಗಿ ಸಂಪರ್ಕಿಸಬಹುದಾಗಿದೆ. ಟೋಲ್ ಫ್ರೀ ಕಾಲ್ ಸೆಂಟರ್ ಸಂ: ೧೪೪೩೬, ವೆಬ್‌ಸೈಟ್ ತಿತಿತಿ.mಚಿಚಿಟಿಜhಚಿಟಿ.iಟಿ ನಲ್ಲಿ ಸಂಪರ್ಕಿಸಬಹುದು. ಅಲ್ಲದೆ ಕೃಷಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಗರಸಭೆ, ಮೀನುಗಾರಿಕೆ, ಸಮಾಜ ಕಲ್ಯಾಣ ಶಿಕ್ಷಣ ಇಲಾಖೆಗಳು ಸಹ ಕಾರ್ಮಿಕ ಇಲಾಖೆಯೊಂದಿಗೆ ಕೈಜೋಡಿಸಿ ತಮ್ಮ ಇಲಾಖೆ ವ್ಯಾಪ್ತಿಯ ಕಾರ್ಮಿಕರನ್ನು ಈ ಯೋಜನೆಗೆ ಒಳಪಡಿಸುವಂತೆ ತಿಳಿಸಿದರು.
ಸಭೆಯಲ್ಲಿ ಅಸಂಘಟಿತ ಕಾರ್ಮಿಕರ ಜಿಲ್ಲಾ ಮಟ್ಟದ ಸಂಘಗಳ ಪ್ರತಿನಿಧಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.



























