Home Lead News ಉದ್ಯೋಗಾಕಾಂಕ್ಷಿಗಳ ಕಿಚ್ಚು

ಉದ್ಯೋಗಾಕಾಂಕ್ಷಿಗಳ ಕಿಚ್ಚು

ಧಾರವಾಡ, ಫೆ. ೨೪- ಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಹಾಗೂ ಹುದ್ದೆಗಳ ನೇಮಕಾತಿ ವಿಳಂಬ ಖಂಡಿಸಿ ಧಾರವಾಡದಲ್ಲಿಂದು ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ಬೃಹತ್ ಪ್ರತಿಭಟನೆ ನಡೆಸಿದರು.


ರಾಜ್ಯದಲ್ಲಿ ಲಕ್ಷಾಂತರ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳನ್ನು ಹಲವು ವರ್ಷಗಳಿಂದ ಭರ್ತಿ ಮಾಡಿಲ್ಲ. ಕೂಡಲೇ ಈ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ಆಗ್ರಹಿಸಿದರು.


ಧಾರವಾಡದಲ್ಲಿ ಇಂದು ನಡೆದಿರುವ ವಿದ್ಯಾರ್ಥಿಗಳ ಪ್ರತಿಭಟನೆಗೆ ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘಟನೆ ಅನುಮತಿ ಕೇಳಿತ್ತು. ಪೊಲೀಸರು ಅನುಮತಿ ನಿರಾಕರಿಸಿದ್ದರು. ಅದನ್ನು ಪ್ರಶ್ನಿಸಿ ಸಂಘಟನೆ ಹೈಕೋರ್ಟ್‌ಗೆ ಮೊರೆ ಹೋಗಿತ್ತು. ಹೈಕೋರ್ಟ್ ಪೊಲೀಸರೊಂದಿಗೆ ಚರ್ಚಿಸಿ ತಿಳಿಸಿ ಎಂದು ವಿಚಾರಣೆಯನ್ನು ಮಾರ್ಚ್ ೩ ಕ್ಕೆ ಮುಂದೂಡಿತ್ತು. ಈ ನಡುವೆಯೇ ಯಾವುದನ್ನು ಲೆಕ್ಕಿಸದೆ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದರು.


ಧಾರವಾಡದ ಜಯನಗರ ವೃತ್ತದ ಕಡೆಗೆ ಮೆರವಣಿಗೆ ಹೊರಟ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದು, ಶ್ರೀನಗರ ವೃತ್ತದ ಬಳಿಯೇ ಪ್ರತಿಭಟನಾಕಾರರನ್ನು ತಡೆಯಲಾಗಿದೆ.


ಪ್ರತಿಭಟನಾನಿರತ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ಕಾಂಗ್ರೆಸ್ ನಾಯಕರ ಫೋಟೋಗಳನ್ನು ಹಿಡಿದು ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.


ರಾಜ್ಯದಲ್ಲಿ ಸರ್ಕಾರಗಳು ಹುದ್ದೆಗಳನ್ನು ಭರ್ತಿ ಮಾಡುತ್ತಿಲ್ಲ. ನಿರುದ್ಯೋಗ ಹೆಚ್ಚಾಗಿದೆ. ಕೂಡಲೇ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರ ಸ್ವರೂಪ ಪಡೆಯಲಿದೆ ಎಂದು ವಿದ್ಯಾರ್ಥಿಗಳು ಹೇಳಿ, ಸರ್ಕಾರಿ ಹುದ್ದೆಗಳ ನೇಮಕಾತಿ ವಿಳಂಬನ್ನು ಖಂಡಿಸಿದ್ದಾರೆ
ವಿದ್ಯಾರ್ಥಿಗಳ ಈ ಪ್ರತಿಭಟನೆಗೆ ಬಿಜೆಪಿ ಬೆಂಬಲ ವ್ಯಕ್ತಪಡಿಸಿದೆ. ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ಈ ಪ್ರತಿಭಟನೆಯಲ್ಲಿ ಭಾಗಿಯಾಗಿ ಸರ್ಕಾರದ ವಿರುದ್ಧದ ತಮ್ಮ ಕಿಚ್ಚನ್ನು ಹೊರ ಹಾಕಿದ್ದಾರೆ.


ಇಂದು ಬೆಳಗ್ಗೆಯೇ ವಿದ್ಯಾರ್ಥಿಗಳು ಬೀದಿಗಿಳಿದಿದ್ದು, ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ಮೆರವಣಿಗೆಯನ್ನು ತಡೆಯಲು ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದರಾದರೂ ಅದನ್ನು ಲೆಕ್ಕಿಸದೆ ಪ್ರತಿಭಟನಾನಿರತರು ಬ್ಯಾರಿಕೇಡ್‌ಗಳನ್ನು ತಳ್ಳಿ ಪ್ರತಿಭಟನಾ ಮೆರವಣಿಗೆ ನಡೆಸಿ, ಹುದ್ದೆ ಭರ್ತಿ ಮಾಡಬೇಕು ಎಂಬ ತಮ್ಮ ಹಕ್ಕೋತ್ತಾಯವನ್ನು ಮಂಡಿಸಿದರು


ವಿದ್ಯಾರ್ಥಿಗಳ ಈ ಬೃಹತ್ ಪ್ರತಿಭಟನೆ ಹಿನ್ನೆಲೆಯಲ್ಲಿ ಧಾರವಾಡದ ಶ್ರೀನಗರ, ಸಪ್ತನಗರ ಭಾಗಗಳಲ್ಲಿ ಬೀಗಿ ಪೊಲೀಸ್ ಪಹರೆಯನ್ನು ಹಾಕಲಾಗಿದ್ದು, ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಶಶಿಕುಮಾರ್ ಅವರೇ ಸ್ಥಳದಲ್ಲಿದ್ದು ಭದ್ರತೆಯ ಉಸ್ತುವಾರಿಯನ್ನು ನೋಡಿಕೊಂಡಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಿದ್ದಾರೆ.

ಸರ್ಕಾರ ದಿವಾಳಿ, ನೇಮಕಾತಿಯಾಗಿಲ್ಲ: ಆರ್. ಅಶೋಕ್


ಧಾರವಾಡದಲ್ಲಿ ಸಾವಿರಾರು ವಿದ್ಯಾರ್ಥಿಗಳು ಉದ್ಯೋಗಾಕಾಂಕ್ಷಿಗಳು ಸರ್ಕಾರಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿರುವಾಗಲೇ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ವಿಪಕ್ಷ ನಾಯಕ ಆರ್. ಅಶೋಕ್, ರಾಜ್ಯದಲ್ಲಿ ಕಳೆದ ಎರಡೂವರೆ ವರ್ಷಗಳಲ್ಲಿ ಒಬ್ಬ ನಿರುದ್ಯೋಗಿಗೂ ಕಾಂಗ್ರೆಸ್ ಸರ್ಕಾರ ಉದ್ಯೋಗ ನೀಡಿಲ್ಲ ಎಂದು ಆರೋಪಿಸಿದರು.


ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರದ ಕಚ್ಚಾಟದಲ್ಲಿ ಮುಳುಗಿದ್ದಾರೆ. ಈ ಕಚ್ಚಾಟದಲ್ಲಿ ಸರ್ಕಾರಿ ಹುದ್ದೆಗಳ ಭರ್ತಿಗಾಗಲೀ, ಅಭಿವೃದ್ಧಿಗಾಗಲೀ ಗಮನ ಹರಿಸಲು ಇವರಿಂದ ಆಗಿಲ್ಲ ಎಂದು ಹರಿಹಾಯ್ದರು.


ರಾಜ್ಯದಲ್ಲಿ ಸುಮಾರು ೨.೫ ಲಕ್ಷಕ್ಕೂ ಹೆಚ್ಚು ಸರ್ಕಾರಿ ಉದ್ಯೋಗಗಳು ಖಾಲಿ ಇದ್ದು, ಹಣಕಾಸು ಇಲಾಖೆ ಸುಮಾರು ೬೫ ಸಾವಿರ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡಿ ಆರು ತಿಂಗಳಾದರೂ ಒಂದೇ ಒಂದು ಉದ್ಯೋಗ ನೇಮಕಾತಿಗಳು ನಡೆದಿಲ್ಲ ಎಂದು ಹರಿಹಾಯ್ದರು.


ರಾಜ್ಯ ಸರ್ಕಾರ ತಕ್ಷಣವೆ ನೇಮಕಾತಿ ಪ್ರಕ್ರಿಯೆಗಳನ್ನು ಆರಂಭಿಸಲಿದ್ದರೆ ಬಿಜೆಪಿ ರಾಜ್ಯವ್ಯಾಪಿ ಹೋರಾಟವನ್ನು ಹಮ್ಮಿಕೊಳ್ಳಲಿದೆ ಎಂದು ಆರ್.ಅಶೋಕ್ ಹೇಳಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಐದು ವರ್ಷದ ಉದ್ಯೋಗ ಬೇಕು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸಿಎಂ ಉದ್ಯೋಗ ಬೇಕು. ಇಬ್ಬರಿಗೂ ಆದಾಯದ ಉದ್ಯೋಗ ಬೇಕು ಎಂದು ವಾಗ್ದಾಳಿ ನಡೆಸಿದರು.


ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಹಾಗಾಗಿ ಉದ್ಯೋಗ ನೇಮಕಾತಿಗಳು ಆಗುತ್ತಿಲ್ಲ ಎಂದು ಅವರು ದೂರಿದರು.