
ಕಲಬುರಗಿ:ಮೇ.23: ಉದ್ಯೋಗ ಮೇಳಗಳು ಉದ್ಯೋಗಕಾಂಕ್ಷಿಗಳಿಗೆ ಒಂದೇ ಸೂರಿನಡಿ ವಿವಿಧ ಕಂಪನಿಗಳನ್ನು ಭೇಟಿ ಮಾಡಲು, ಕೌಶಲ್ಯ ಪ್ರದರ್ಶಿಸಲು ಮತ್ತು ತಕ್ಷಣವೇ ಉದ್ಯೋಗಾವಕಾಶಗಳನ್ನು ಪಡೆಯಲು ಇರುವ ಅತ್ಯುತ್ತಮ ಮತ್ತು ನೇರವಾದ ವೇದಿಕೆಯಾಗಿದೆ. ವಿವಿಧ ಕಂಪನಿಗಳಿಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಬದಲು, ಒಂದೇ ಸ್ಥಳದಲ್ಲಿ ಹಲವು ಉದ್ಯೋಗದಾತರನ್ನು ಭೇಟಿಯಾಗಿ, ಉದ್ಯೋಗವನ್ನು ಪಡೆಯಬಹುದು. ಆದ್ದರಿಂದ ಉದ್ಯೋಗ ಮೇಳಗಳು ಹಮ್ಮಿಕೊಳ್ಳುವ ಮೂಲಕ ನಿರುದ್ಯೋಗ ನಿವಾರಣೆ ಮಾಡಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯ ಸಹಾಯಕ ನಿರ್ದೇಶಕಿ ಭಾರತಿ ಸಿಂಗ್ ಹೇಳಿದರು.
ನಗರದ ಹೊಸ ಜೇವರ್ಗಿ ರಸ್ತೆಯಲ್ಲಿನ ‘ಗೆಟ್ಸ್ ಪದವಿ ಕಾಲೇಜ್’ನಲ್ಲಿ ಉದ್ಯೋಗ ವಿನಿಯಮ ಕಚೇರಿಯ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ‘ಉದ್ಯೋಗ ಮೇಳ’ದ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.
ಉದ್ಯೋಗ ವಿನಿಯಮ ಕಚೇರಿಯ ಸಮಾಲೋಚಕ-ತರಬೇತಿದಾರ ಸತೀಶಕುಮಾರ ಟಿ.ಆರ್ ಮಾತನಾಡಿ, ನೇರ ಸಂದರ್ಶನದಿಂದ ಸ್ಥಳೀಯವಾಗಿ ಮತ್ತು ಸ್ಥಳದಲ್ಲೇ ಉದ್ಯೋಗ ಪಡೆಯಲು ಉತ್ತಮ ಅವಕಾಶವಿರುತ್ತದೆ. ಉದ್ಯಮದ ವೃತ್ತಿಪರರನ್ನು ಭೇಟಿಯಾಗುವುದು ಮತ್ತು ಭವಿಷ್ಯದ ಉದ್ಯೋಗಾವಕಾಶಗಳಿಗಾಗಿ ವೃತ್ತಿಪರ ಸಂಪರ್ಕಗಳನ್ನು ಬೆಳೆಸಿಕೊಳ್ಳಲು ಸಹಾಯಕವಾಗುತ್ತದೆ ಎಂದರು.
ಗೆಟ್ಸ್ ಸಂಸ್ಥೆಯ ಅಧ್ಯಕ್ಷ ಡಾ.ಎಚ್.ಬಿ.ಕಂಟೆಗೋಳ ಮಾತನಾಡಿ, ಉದ್ಯೋಗ ಮೇಳಗಳು ಸ್ಥಳೀಯ ಕಂಪನಿಗಳಲ್ಲಿ, ಸ್ಥಳೀಯರಿಗೆ ಉದ್ಯೋಗಾವಕಾಶಗಳು ದೊರೆಯಲು ಪೂರಕವಾಗಿದ್ದು, ನಮ್ಮ ಭಾಗದ ನಿರುದ್ಯೋಗಿ ಯುವಕರು ಇದರ ಸದುಪಯೋಗವನ್ನು ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ಎಚ್.ಬಿ.ಪಾಟೀಲ್, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಬ್ಯಾಂಕ್ ನಇವೃತ್ತ ಮ್ಯಾನೇಜರ್ ಗುಂಡುರಾವ ಪದ್ಮಾಜಿ, ಕಾಲೇಜಿನ ಪ್ರಾಂಶುಪಾಲೆ ಪ್ರೊ.ನೇಹಾ ಎಚ್.ಕಂಟೆಗೋಳ್, ಪ್ರಮುಖರಾದ ಶಿವಲಿಂಗಪ್ಪ ತಳವಾರ, ರಾಹುಲ್ ರೆಡ್ಡಿ, ವರ್ಷಿಣಿ, ನೀಲಮ್ಮ ಎಸ್.ಹಿರೇಮಠ, ಅಖಿಲಾ, ರೋಹಿಣಿ, ಅಶ್ವಿನಿ, ಅಣ್ಣಾರಾವ, ಭರತಕುಮಾರ, ಜಿಮ್ಮಿ ಮಿತ್ರಾ, ಮುಕ್ರಮ್ ಹಾಗೂ ವಿವಿಧ ಕಂಪನಿಗಳ ಸಿಬ್ಬಂದಿ, ಕಾಲೇಜಿನ ಸಿಬ್ಬಂದಿ ಭಾಗವಹಿಸಿದ್ದರು.
8 ಕಂಪನಿಗಳು ಭಾಗಿ, 150 ಜನರಿಗೆ ಉದ್ಯೋಗ : ಕಲಬುರಗಿ ಜಿಲ್ಲೆಯ ವಿವಿಧ ಸಂಸ್ಥೆ ಹಾಗೂ ಕಂಪನಿಗಳಾದ ಸ್ವತಂತ್ರ ಮೈಕ್ರೋ ಫೈನಾನ್ಸ್, ಶ್ರೀರಾಮ ಲೈಫ್ ಇನ್ಸುರೆನ್ಸ್ ಕಂಪನಿ, ಎಸ್.ಆರ್.ಜಿ. ಸಮೂಹ ಸಂಸ್ಥೆ, ಮುತ್ತೂಟ್ ಫೈನಾನ್ಸ್, ಶ್ರೀ ಸಾಯಿ ಅರ್ಥ ಮೂವರ್ಸ್, ಐಚರ್ ಕಂಪನಿ, ನಿಷ್ಟಿ ಸಮೂಹ ಸಂಸ್ಥೆ, ಲಾಹೋಟಿ ಕಂಪನಿ ಸೇರಿ ಒಟ್ಟು 8 ಕಂಪನಿ-ಸಂಸ್ಥೆಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದು, 150 ಜನ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗಾವಕಾಶಗಳನ್ನು ನೀಡಲಾಯಿತು.

























