ಯುವಕರಿಗೆ ಉದ್ಯೋಗ ಸೃಷ್ಟಿ: ಮೋದಿ

೬೧ ಸಾವಿರ ಯುವ ಜನತೆಗೆ ನೇಮಕಾತಿ ಪತ್ರ ವಿತರಣೆ

ನವದೆಹಲಿ,ಜ.೨೪- ಭಾರತ ವಿಶ್ವದ ಅತ್ಯಂತ ಕಿರಿಯರ ರಾಷ್ಟ್ರಗಳಲ್ಲಿ ಒಂದಾಗಿದೆ. ದೇಶ ಮತ್ತು ವಿದೇಶಗಳಲ್ಲಿ ಯುವಕರಿಗೆ ಹೊಸ ಉದ್ಯೋಗಾವಕಾಶ ಸೃಷ್ಟಿಸಲು ನಿರಂತರವಾಗಿ ಕೆಲಸ ಮಾಡಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಹೇಳಿದ್ದಾರೆ

ರೋಜ್‌ಗಾರ್ ಮೇಳ ಸಾರ್ವಜನಿಕ ನೇಮಕಾತಿಗಾಗಿ ನಿಯಮಿತ ಸಾಂಸ್ಥಿಕ ಕಾರ್ಯವಿಧಾನವಾಗಿ ವಿಕಸನಗೊಂಡಿರುವ ಒಂದು ಉಪಕ್ರಮ. ಉದ್ಯೋಗ ಸೃಷ್ಟಿ ಮತ್ತು ಯುವ ಸಬಲೀಕರಣ ಕೇಂದ್ರದ ಆದ್ಯತೆಯಾಗಿದೆ ಎಂದು ಅವರು ಬಣ್ಣಿಸಿದ್ದಾರೆ.


೧೮ ನೇ ಆವೃತ್ತಿಯ ರೋಜ್‌ಗಾರ್ ಮೇಳದಲ್ಲಿ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಿಗೆ ಆಯ್ಕೆಯಾದ ೬೧,೦೦೦ ಕ್ಕೂ ಹೆಚ್ಚು ಅಭ್ಯರ್ಥಿಗಳಿ ನೇಮಕಾತಿ ಪತ್ರ ವಿತರಿಸಿ ಮಾತನಾಡಿದ ಅವರು ಉದ್ಯೋಗ ಸೃಷ್ಟಿ ಮತ್ತು ಯುವ ನೇತೃತ್ವದ ಬೆಳವಣಿಗೆಯ ಮೇಲೆ ಕೇಂದ್ರದ ಗಮನ ಹರಿಸುತ್ತಿದೆ ಎಂದು ಹೇಳಿದರು.
“ಕಳೆದ ಕೆಲವು ವರ್ಷಗಳಿಂದ, ರೋಜ್‌ಗಾರ್ ಮೇಳ ಒಂದು ಸಂಸ್ಥೆಯಾಗಿ ಮಾರ್ಪಟ್ಟಿದೆ. ವೇದಿಕೆಯ ಮೂಲಕ, ಲಕ್ಷಾಂತರ ಯುವಕರು ಈಗಾಗಲೇ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ನೇಮಕಾತಿ ಪತ್ರಗಳನ್ನು ಪಡೆದಿದ್ದಾರೆ” ಎಂದು ಹೇಳಿದ್ದಾರೆ


ಕೇಂದ್ರ ಸರ್ಕಾರ ಹಲವಾರು ದೇಶಗಳೊಂದಿಗೆ ವ್ಯಾಪಾರ ಮತ್ತು ಚಲನಶೀಲತೆ ಒಪ್ಪಂದಗಳಿಗೆ ಸಹಿ ಹಾಕುತ್ತಿದೆ, ಇದು ಭಾರತೀಯ ಯುವಕರಿಗೆ ಹೊಸ ಮಾರ್ಗಗಳನ್ನು ತೆರೆಯುತ್ತಿದೆ. “ಈ ಒಪ್ಪಂದಗಳು ನಮ್ಮ ಯುವ ಕಾರ್ಯಪಡೆಗೆ ಬಹು ಅವಕಾಶಗಳನ್ನು ಸೃಷ್ಟಿಸುತ್ತಿವೆ” ಎಂದು ತಿಳಿಸಿದ್ದಾರೆ.


ಆಡಳಿತವನ್ನು ಸರಳೀಕರಿಸುವ ಮತ್ತು ಆರ್ಥಿಕ ಚಟುವಟಿಕೆ ಹೆಚ್ಚಿಸುವ ಗುರಿಯೊಂದಿಗೆ ಸರ್ಕಾರ ಮುನ್ನೆಡೆಯುತ್ತಿದೆ. “ದೇಶ ಸುಧಾರಣಾ ಕ್ರಮಕ್ಕೆ ಮುಂದಾಗಿದೆ. ಜೀವನವನ್ನು ಸುಲಭಗೊಳಿಸುವುದು ಮತ್ತು ವ್ಯವಹಾರವನ್ನು ಸುಲಭಗೊಳಿಸುವುದು ಇದರ ಉದ್ದೇಶವಾಗಿದೆ” ಎಂದು ಅವರು ಹೇಳಿದ್ದಾರೆ.
೧೧ ಲಕ್ಷಕ್ಕೂ ಹೆಚ್ಚು ಉದ್ಯೋಗ ನೀಡಿಕೆ

ಪ್ರಧಾನ ಮಂತ್ರಿ ಕಚೇರಿಯ ಅಧಿಕೃತ ಹೇಳಿಕೆಯ ಪ್ರಕಾರ, ದೇಶಾದ್ಯಂತ ನಡೆದ ರೋಜ್‌ಗಾರ್ ಮೇಳಗಳ ಮೂಲಕ ಇದುವರೆಗೆ ೧೧ ಲಕ್ಷಕ್ಕೂ ಹೆಚ್ಚು ನೇಮಕಾತಿ ಪತ್ರಗಳನ್ನು ನೀಡಲಾಗಿದೆ. ಈ ಉಪಕ್ರಮ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡುವ ಮತ್ತು ಆ ದೃಷ್ಟಿಕೋನವನ್ನು ಕಾಂಕ್ರೀಟ್ ಫಲಿತಾಂಶಗಳಾಗಿ ಭಾಷಾಂತರಿಸುವ ಪ್ರಧಾನ ಮಂತ್ರಿ ಬದ್ಧತೆಗೆ ಸಾಕ್ಷಿಯಾಗಿದೆ ಎಂದಿದೆ.

೧೮ನೇ ರೋಜ್‌ಗಾರ್ ಮೇಳವನ್ನು ದೇಶಾದ್ಯಂತ ೪೫ ಸ್ಥಳಗಳಲ್ಲಿ ಆಯೋಜಿಸಲಾಗಿತ್ತು. ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಹೊಸದಾಗಿ ನೇಮಕಗೊಂಡ ಅಭ್ಯರ್ಥಿಗಳು ಭಾರತ ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಸೇರಲಿದ್ದಾರೆ

ಗೃಹ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಹಣಕಾಸು ಸೇವೆಗಳ ಇಲಾಖೆ ಮತ್ತು ಉನ್ನತ ಶಿಕ್ಷಣ ಇಲಾಖೆ ಸೇರಿದಂತೆ ಪ್ರಮುಖ ವಲಯಗಳಲ್ಲಿ ವ್ಯಾಪಕ ಶ್ರೇಣಿಯ ಪಾತ್ರಗಳಿಗೆ ಹೊಸದಾಗಿ ನೇಮಕಗೊಂಡವರನ್ನು ಆಯ್ಕೆ ಮಾಡಲಾಗಿದೆ.

ರಕ್ಷಣಾ ಸಚಿವಾಲಯ, ಪರಮಾಣು ಇಂಧನ ಇಲಾಖೆ ಮತ್ತು ಪಿಜಿಸಿಐಎಲ್ ಮತ್ತು ಎಚ್‌ಪಿಸಿಎಲ್‌ನಂತಹ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿಯೂ ನೇಮಕಾತಿ ಮಾಡಿಕೊಳ್ಳಲಾಗಿದೆ.

ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಕಾನ್‌ಸ್ಟೆಬಲ್‌ಗಳು, ನರ್ಸಿಂಗ್ ಅಧಿಕಾರಿಗಳು, ಜೂನಿಯರ್ ಅಸೋಸಿಯೇಟ್‌ಗಳು, ಸಹಾಯಕ ಪ್ರಾಧ್ಯಾಪಕರು, ವೈಜ್ಞಾನಿಕ ಸಹಾಯಕರು, ಜೂನಿಯರ್ ಎಂಜಿನಿಯರ್‌ಗಳು, ಕಾರ್ಯನಿರ್ವಾಹಕ ತರಬೇತಿದಾರರು ಮತ್ತು ಇತರ ತಾಂತ್ರಿಕ ಅಧಿಕಾರಿಗಳು ನೇಮಕ ಮಾಡಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.