
ಕಲಬುರಗಿ:ಫೆ.15: ದಕ್ಷಿಣ ಮತಕ್ಷೇತ್ರದಲ್ಲಿ ಬರುವ ಪಟ್ಟಣ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯಡಿಯಲ್ಲಿ ಬರುವ 4702 ಲೆಕ್ಕ ಶೀರ್ಷಿಕೆಯಲ್ಲಿ ಜಿನುಗು ಕೆರೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು ಶಾಸಕರಾದ ಅಲ್ಲಂಪ್ರಭು ಪಾಟೀಲರು ಶನಿವಾರ ಈ ಮಹತ್ವದ ಕಾಮಗಾರಿಗೆ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಪಟ್ಟಣ ಗ್ರಾಮದ ಸರ್ವೇ ನಂಬರ್ 165, 12, 2 ರಲ್ಲಿ ಈ ಜಿನುಗು ಕೆರೆ ನಿರ್ಮಾಣವಾಗುತ್ತಿದೆ. ಈ ಕೆರೆ ನಿರ್ಮಾಣದಿಂದ ಪಟ್ಟಣ ಗ್ರಾಮದಲ್ಲಿ ಅಂತರ್ಜಲ ಮಟ್ಟ ಹೆಚ್ಚಲಿದೆ. ಇದಲ್ಲದೆ ನೀರಾವರಿಗೂ, ದನಕರುಗಳಿಗೆ ನೀರಿಗೂ ಇದು ಅನುಕೂಲವಾಗಲಿದೆ ಎಂದು ಪೂಜೆ ನೆರವರಿಸಿ ಮಾತನಾಡಿದ ಶಾಸಕರಾದ ಅಲ್ಲಂಪ್ರಭು ಪಾಟೀಲರು ಹೇಳಿದ್ದಾರೆ.
ಅಸೆಂಬ್ಲಿ ಚುನಾವಣೆಯಲ್ಲಿ ತಾವು ಕೆರೆ ನಿರ್ಮಾಣದ ಭರವಸೆ ನೀಡಿದ್ದು ಅದೀಗ ನೆರವೇರುತ್ತಿದೆ ಎಂದು ಶಾಸಕ ಅಲ್ಲಂಪ್ರಭು ಈ ಸಂದರ್ಭದಲ್ಲಿ ಸ್ಮರಿಸುತ್ತ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಆಡಳಿತ ನೀಡುತ್ತಿದೆ ಎಂದರು.
ಪಟ್ಟಣದಲ್ಲಿ 20 ಎಕರೆ ವಿಸ್ತೀರ್ಣದಲ್ಲಿ ಈ ಕೆರೆ ನಿರ್ಮಾಣ ಯೋಜನೆ ರೂಪಿಸಲಾಗಿದೆ. ಈ ಕೆರೆಗೆ ಜಮೀನು ನೀಡಿದ ರೈತರ ಪ್ರತಿ ಎಕರೆ ಭೂಮಿಗೆ 13 ಲಕ್ಷ ರುಪಾಯಿಯಂತೆ ಬೆಲೆ ನೀಡಲಾಗುತ್ತಿದೆ. ರೈತರ ಸಹಕಾರ, ಊರವರು, ಸುತ್ತಲಿನ ಜನರೆಲ್ಲರ ಸಹಕಾರದಿಂದಲೇ ಈ ಯೋಜನೆ ಪಟ್ಟಣದಲ್ಲಿ ಜಾರಿಗೊಳ್ಳುತ್ತಿದೆ ಎಂದು ಶಾಸಕರು ಹೇಳಿದರಲ್ಲದೆ ಕೆರೆ ನಿರ್ಮಾಣದಿಂದ ಕೃಷಿಗೆ, ಕುಡಿಯುವ ನೀರು, ಅಂತರ್ಜಲ ಸೇರಿದಂತೆ ಅನೇಕ ಹಂತಗಳಲ್ಲಿ ಪರಿಹಾರ ದೊರಕಲಿದೆ ಎಂದು ಹೇಳುತ್ತ ಕಾಮಗಾರಿಗೆ ಶುಭ ಕೋರಿದರು.
ಪಟ್ಟಣ ಗ್ರಾಮದ ಹೊರ ವಲಯದಲ್ಲಿ ಕೆರೆ ನಿರ್ಮಾಣಕ್ಕಾಗಿ ನಿಗದಿಯಾದ ಭೂಮಿಯಲ್ಲಿ ನಡೆದ ಕೆರೆ ಕಾಮಗಾರಿ ಪೂಜಾ ಸಮಾರಂಭದಲ್ಲಿ ಸಂತೋಷ ಪಾಟೀಲ್ ದಣ್ಣೂರ, ನೀಲಕಂಠ ಮೂಲಗೆ, ಭೀಮರಾವ ಮೇಳಕುಂದಿ, ಲಿಂಗರಾಜ ಕಣ್ಣಿ, ಇಸ್ಮಾಯಿಲ್ ಸಾಬ್, ಅಂಬಾರಾವ, ಶಿವಪುತ್ರ, ಶರಣು, ಖುರಶೀದ್ ಪಟೇಲ್, ರಮೇಶ, ಅಸ್ಲಂ ಸೇರಿದಂತೆ ಪಟ್ಟಣದ ಪ್ರಮುಖರು, ಸಮ್ಣ ನೀರಾವರಿ ಇಲಾಖೆಯ ಇಂಜಿನಿಯರ್‍ಗಳು ಉಪಸ್ಥಿತರಿದ್ದರು.



























